![[ಟಿಆರ್‌ಪಿ ಹಗರಣ] ಮುಂಬೈ ಪೊಲೀಸರಿಗೆ ತನಿಖೆ ನಡೆಸಲು ಅಧಿಕಾರವಿಲ್ಲ: ಬಾಂಬೆ ಹೈಕೋರ್ಟ್‌ನಲ್ಲಿ ಹರೀಶ್ ಸಾಳ್ವೆ ವಾದ](https://gumlet.assettype.com/barandbench-kannada%2F2021-01%2F8b7a45d7-e176-4dc3-8468-12853752aaf5%2FTRP_Scam__Republic_TV.jpeg?rect=0%2C0%2C768%2C432&auto=format%2Ccompress&fit=max)
ರಿಪಬ್ಲಿಕ್ ಟಿವಿ ಚಾನೆಲ್‌ಗಳ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ತನಿಖೆ ಪ್ರಾರಂಭಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ವಿಚಾರಣೆಯ ಸಂದರ್ಭದಲ್ಲಿ ಸಾಳ್ವೆ, ರಿಪಬ್ಲಿಕ್ ಟಿವಿ ವಿರುದ್ಧದ ಆರೋಪಗಳು ಮುಂಬೈ ಪೊಲೀಸರ ವ್ಯಾಪ್ತಿ ಮೀರಿವೆ ಎಂದು ವಾದಿಸಿದ್ದಾರೆ.
ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಹಗರಣದಲ್ಲಿ ರಿಪಬ್ಲಿಕ್ ಟಿವಿಯನ್ನು ತನಿಖೆಗೆ ಒಳಪಡಿಸುವ ಅಧಿಕಾರ ಮುಂಬೈ ಪೊಲೀಸರಿಗೆ ಇಲ್ಲ ಎಂದು ಶುಕ್ರವಾರ ರಿಪಬ್ಲಿಕ್ ಟಿವಿಯ ಮಾತೃ ಸಂಸ್ಥೆ ಎಆರ್‌ಜಿ ಔಟ್ಲಯರ್ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ವಾದಿಸಿದ್ದಾರೆ.
ರಿಪಬ್ಲಿಕ್ ಟಿವಿಯ ವಿರುದ್ಧ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಹೊರಿಸಲಾಗಿದ್ದು, ಇದರ ವಿಚಾರಣೆಯು ರಾಜ್ಯ ಪೊಲೀಸರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸಾಳ್ವೆ ಹೇಳಿದರು.
ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಮತ್ತು ಆ ಬಳಿಕ ಸಲ್ಲಿಸಿರುವ ಆರೋಪ ಪಟ್ಟಿಯನ್ನು ಪ್ರಶ್ನಿಸಿ ಎಆರ್‌ಜಿ ಔಟ್ಲಯರ್ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಷ್ ಪಿಟಾಲೆ ಅವರಿದ್ದ ವಿಭಾಗೀಯ ಪೀಠ ನಡೆಸಿತು.
“ಟ್ರಾಯ್ ನಿಯಮಗಳನ್ನು ಉಲ್ಲಂಘಿಸಿರುವ ವಿಚಾರಗಳಲ್ಲಿ ತನಿಖೆ ನಡೆಸುವ ಅಧಿಕಾರ ಮುಂಬೈ ಪೊಲೀಸರಿಗೆ ಇಲ್ಲ” ಎಂದು ಸಾಳ್ವೆ ಹೇಳಿದರು. ಮುಂಬೈ ಪೊಲೀಸ್ ತನಿಖೆಯು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ನೌಕರರು ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದ ಮತ್ತೊಂದು ಕೋನ ಹೊಂದಿದೆ ಎಂದು ಸಾಳ್ವೆ ವಾದಿಸಿದ್ದು, ರಿಪಬ್ಲಿಕ್ ಚಾನೆಲ್‌ಗಳ ಸಿಬ್ಬಂದಿಯನ್ನು ಹೇಗಾದರೂ ಮಾಡಿ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಾಳ್ವೆ ಪ್ರತಿಪಾದಿಸಿದ್ದಾರೆ.
“ಯಾವುದಾದರೂ ಲೋಪ ಕಂಡುಹಿಡಿಯುವ ಉದ್ದೇಶ ಹೊಂದಲಾಗಿದೆ. ಬೇರೆ ಯಾರಿಗೋ ಹಣ ಪಾವತಿಸಿದ್ದೇವೆ ಎಂಬ ಕೆಲವು ಅಸಂಬದ್ಧ ಕಥೆ ಹೇಳಲಾಗುತ್ತಿದೆ. ಇವು ಯಾವುವೂ ಅಪರಾಧಗಳಿಗೆ ಸಮನಲ್ಲ” ಎಂದು ಅವರು ವಾದಿಸಿದರು.
ತಮ್ಮ ವಾದಕ್ಕೆ ಪೂರಕವಾಗಿ ಸಾಳ್ವೆ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ವರದಿಯ ಕುರಿತು ಗಮನಹರಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಲಖನೌ ನ್ಯಾಯಾಲಯದ ಆದೇಶದ ಬಳಿಕ ಇ.ಡಿ ಟಿಆರ್‌ಪಿ ಹಗರಣದ ತನಿಖೆ ನಡೆಸುತ್ತಿದೆ.
“ಒಂದೊಮ್ಮೆ ಅವರ (ಇ.ಡಿ) ವರದಿಗೂ ಮುಂಬೈ ಪೊಲೀಸರ ವರದಿಗೂ ಹೋಲಿಕೆ ಕಂಡು ಬಂದರೆ ನನ್ನ ವಾದವು ಸತ್ವ ಕಳೆದುಕೊಳ್ಳುತ್ತದೆ. ಆಗ ನಾನು ವಿಚಾರಣೆ ಎದುರಿಸುತ್ತೇನೆ. ಒಂದೊಮ್ಮೆ ವರದಿಯಲ್ಲಿ ತದ್ವಿರುದ್ದ ಅಂಶಗಳು ಕಂಡುಬಂದರೆ ಪೊಲೀಸರು ದುರುದ್ದೇಶಪೂರ್ವಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರ್ಥ. ಆದ್ದರಿಂದ ಆ ವರದಿ ಅತ್ಯಂತ ಮುಖ್ಯ” ಎಂದು ಸಾಳ್ವೆ ವಾದಿಸಿದರು.
ವಿಚಾರಣೆಯಲ್ಲಿ ಇ.ಡಿ ಒಳಗೊಳ್ಳುವುದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಚಾರಣೆಯಲ್ಲಿ ಇ. ಡಿ ಪಾಲ್ಗೊಳ್ಳಲು ಯಾವುದೇ ಅಧಿಕಾರವಿಲ್ಲ. ಅಥವಾ ನ್ಯಾಯಾಲಯವೂ ಇ.ಡಿ ಗೆ ನೋಟಿಸ್ ಜಾರಿ ಮಾಡಿಲ್ಲ ಎಂದರು. ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯ ವಿಚಾರದ ಬಗ್ಗೆ ರಿಪಬ್ಲಿಕ್ ಟಿವಿ ಒತ್ತಿ ಹೇಳಿದರೆ ರಾಜ್ಯ ಸರ್ಕಾರವು ವಿಸ್ತೃತವಾದ ಪ್ರತಿಕ್ರಿಯೆ ಸಲ್ಲಿಸಲು ಬಯಸುತ್ತದೆ ಎಂದು ಸಿಬಲ್ ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಾಳ್ವೆ ಅವರು ಎಲ್ಲಾ ಮನವಿಗಳನ್ನೂ ಮುಂದಿನ ವಾರದ ಒಳಗೆ ಸಲ್ಲಿಸಬೇಕು. ಮುಂದಿನ ಶುಕ್ರವಾರ ನ್ಯಾಯಾಲಯ ಅಂತಿಮ ವಿಚಾರಣೆ ನಡೆಸಬಹುದಾಗಿದೆ ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಾಲಯವು ಎಲ್ಲಾ ವಕೀಲರ ಸಹಮತ ಪಡೆದು ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿತು. ವಿಚಾರಣೆಯನ್ನು ಮುಂದೂಡುವುದಕ್ಕೂ ಮುನ್ನ ನ್ಯಾಯಾಲಯವು ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸಲ್ಲಿಸಿದ ಸ್ಥಿತಿಗತಿ ವರದಿಯನ್ನು ದಾಖಲಿಸಿಕೊಂಡಿತು.