ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದ ಇ ಡಿ; ಇಂಡಿಯಾ ಟುಡೇ ವಿರುದ್ಧದ ತನಿಖೆ ಬಾಕಿ

ತನಿಖಾ ಸಂಸ್ಥೆ ಕಳೆದ ವಾರ ಸಲ್ಲಿಸಿದ್ದ ಆರೋಪಪಟ್ಟಿಯನ್ನು ಮುಂಬೈನ ವಿಶೇಷ ಪಿಎಂಎಲ್ಎ ನ್ಯಾಯಾಲಯದ ಬುಧವಾರ ಪರಿಗಣನೆಗೆ ತೆಗೆದುಕೊಂಡಿತು.
Republic TV, TRP Scam
Republic TV, TRP Scam
Published on

ಮುಂಬೈ ಪೊಲೀಸರು ಪತ್ತೆ ಹಚ್ಚಿದ್ದ ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್‌ (ಟಿಆರ್‌ಪಿ)  ಹಗರಣದಲ್ಲಿ ರಿಪಬ್ಲಿಕ್ ಟಿವಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಮುಂಬೈ ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾರಿ ನಿರ್ದೇಶನಾಲಯದ ಆರೋಪಪಟ್ಟಿ ತಿಳಿಸಿದೆ.

ಪ್ರಕರಣದಲ್ಲಿ ಟಿಆರ್‌ಪಿ ಅಂಕಿ ಸಂಖ್ಯೆಗಳನ್ನು ತಿರುಚಿದ ಆರೋಪ ಎದುರಿಸುತ್ತಿದ್ದ ರಿಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ಭಾರತ್‌ ಸುದ್ದಿ ವಾಹಿನಿಗಳಿಗೆ ತನಿಖಾ ಸಂಸ್ಥೆ ಕ್ಲೀನ್‌ಚಿಟ್‌ ನೀಡಿದೆ. ಇದೇ ವೇಳೆ ಇನ್ನೆರಡು ಸುದ್ದಿ ವಾಹಿನಿಗಳಾದ ನ್ಯೂಸ್ ನೇಷನ್ ಮತ್ತು ಇಂಡಿಯಾ ಟುಡೇ ವಿರುದ್ಧದ ತನಿಖೆ ಪೂರ್ಣಗೊಂಡಿಲ್ಲ ಎಂದು ಅದು ತಿಳಿಸಿದೆ.

Also Read
[ಟಿಆರ್‌ಪಿ ಹಗರಣ] ಪೂರಕ ಆರೋಪಪಟ್ಟಿ ಸಲ್ಲಿಸಿದ ಮುಂಬೈ ಪೊಲೀಸರು; ಆರೋಪಿ ಸ್ಥಾನದಲ್ಲಿ ಅರ್ನಾಬ್ ಗೋಸ್ವಾಮಿ

ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಸೆಪ್ಟೆಂಬರ್ 15, 2022ರಂದು ವಿಶೇಷ ನ್ಯಾಯಾಲಯದ ಮುಂದೆ ಇಡಿ ತನ್ನ ಪ್ರಾಸಿಕ್ಯೂಷನ್ ದೂರು ಸಲ್ಲಿಸಿತ್ತು. ವಿಶೇಷ ನ್ಯಾಯಾಧೀಶ ಎಂ ಜಿ ದೇಶಪಾಂಡೆ ಬುಧವಾರ ಆರೋಪಪಟ್ಟಿ ಸ್ವೀಕರಿಸಿದರು.

ಫಕ್ತ್ ಮರಾಠಿ, ಬಾಕ್ಸ್ ಸಿನಿಮಾ ಮತ್ತು ಮಹಾ ಮೂವೀಸ್‌ನ ನಿರ್ದೇಶಕರು, ಹಂಸಾ ರಿಸರ್ಚ್ ಗ್ರೂಪ್‌ಗೆ ಸಂಬಂಧಿಸಿದ ರಿಲೇಶನ್‌ಶಿಪ್ ಮ್ಯಾನೇಜರ್‌ಗಳು ಹಾಗೂ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಿಎಆರ್‌ಸಿ) ನೇಮಿಸಿಕೊಂಡಿದ್ದ ಗುತ್ತಿಗೆದಾರರು ಸೇರಿದಂತೆ 16 ಆರೋಪಿಗಳನ್ನು ಇಡಿ ಆರೋಪಪಟ್ಟಿಯಲ್ಲಿ ಹೆಸರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇ ಡಿ ನವೆಂಭರ್‌ 2020ರಲ್ಲಿ ಜಾರಿ ಪ್ರಕರಣ ಮಾಹಿತಿ ವರದಿಯನ್ನು (ಇಸಿಐಆರ್‌) ದಾಖಲಿಸಿತ್ತು. ಮುಂಬೈ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಅನ್ನು ಇ ಡಿ ಆಧರಿಸಿತ್ತು. ಮುಂಬೈ ಪೊಲೀಸರ ಅಪರಾಧ ವಿಭಾಗವು ರಿಪಬ್ಲಿಕ್‌ ಟಿವಿ ತನ್ನ ವೀಕ್ಷಕರ ಸಂಖ್ಯೆಯ ಕುರಿತಾದ ಮಾಹಿತಿಯನ್ನು ತಿರುಚುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ ಎಂದು ಆಪಾದಿಸಿತ್ತು. ಮುಂದೆ ಜೂನ್‌, 2021ರಲ್ಲಿ ವಾಹಿನಿಯ ಮುಖ್ಯಸ್ಥ ಅರ್ನಾಬ್‌ ಗೋಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತು.

Kannada Bar & Bench
kannada.barandbench.com