ಟಿಆರ್‌ಪಿ ಹಗರಣ: ಅರ್ನಾಬ್ ವಿರುದ್ಧದ ಮಾನನಷ್ಟ ಮೊಕದ್ದಮೆ ಹಿಂಪಡೆದ ಪರಮ್ ಬೀರ್ ಸಿಂಗ್; ದಂಡ ವಿಧಿಸಿದ ನ್ಯಾಯಾಲಯ
ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ವಾಹಿನಿಯ ಒಡೆತನ ಹೊಂದಿರುವ ಎಆರ್‌ಜಿ ಔಟ್ಲಿಯರ್ ಮೀಡಿಯಾ ವಿರುದ್ಧ ₹90 ಲಕ್ಷ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಬುಧವಾರ ಬೇಷರತ್ತಾಗಿ ತಮ್ಮ ದಾವೆ ಹಿಂಪಡೆದಿದ್ದಾರೆ.
ರಿಪಬ್ಲಿಕ್ ಸುದ್ದಿವಾಹಿನಿ ತನ್ನ ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಹಗರಣ ಕುರಿತಾದ ಸುದ್ದಿ ಪ್ರಸಾರದ ವೇಳೆ ತಮ್ಮನ್ನು ಕೆಟ್ಟದಾಗಿ ಬಿಂಬಿಸಿತ್ತು ಎಂದು ಸಿಂಗ್ ದಾವೆ ಹೂಡಿದ್ದರು.
ಗೋಸ್ವಾಮಿ ಅವರು ಕಳೆದ ವಾರ ಸಿವಿಲ್ ಪ್ರಕ್ರಿಯಾ ಸಂಹಿತೆಯ ಆರ್ಡರ್ VII ನಿಯಮ 11 ರ ಅಡಿಯಲ್ಲಿ ದೂರು ತಿರಸ್ಕರಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಸಂಬಂಧಿಸಿದಂತೆ ಸಿಂಗ್ ಅವರ ಪ್ರತಿಕ್ರಿಯೆ ಕೇಳಲಾಗಿತ್ತು. ಸಿಂಗ್ ಅವರು ಅರ್ಜಿ ಹಿಂಪಡೆಯುವುದಾಗಿ ತಿಳಿಸಿದ್ದರು. ಪ್ರಕರಣವನ್ನು ಇಂದು ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿತ್ತು.
ಆದರೆ, ಗೋಸ್ವಾಮಿ ಪರ ವಾದ ಮಂಡಿಸಿದ ವಕೀಲ ಪ್ರದೀಪ್ ಗಾಂಧಿ ಹೀಗೆ ಅರ್ಜಿ ಹಿಂಪಡೆದಿರುವುದರಿಂದ ಪ್ರಕರಣ ಇತ್ಯರ್ಥವಾಗಿದೆ ಎಂದು ಭಾವಿಸಬಾರದು. ಇಂತಹ ಪ್ರಕರಣಗಳ ಬಾಕಿಯಿಂದಾಗಿ ಅರ್ನಾಬ್ ಅವರು ಕಿರುಕುಳ ಅನುಭವಿಸಿದ್ದಾರೆ. ಹಾಗಾಗಿ ದಂಡ ವಿಧಿಸಬೇಕು ಎಂದು ವಾದಿಸಿದರು. ಅಂತಿಮವಾಗಿ ಸಿಟಿ ಸಿವಿಲ್ ನ್ಯಾಯಾಧೀಶ ವಿ ಡಿ ಕೇಲ್ಕರ್ ಅವರು ಅರ್ನಾಬ್ ಅವರಿಗೆ ನೇರವಾಗಿ ಪಾವತಿಸುವಂತೆ ಸೂಚಿಸಿ ₹ 1,500 ದಂಡವನ್ನು ಪರಮ್ ಬೀರ್ ಸಿಂಗ್ ಅವರಿಗೆ ವಿಧಿಸಿದರು.
ರಿಪಬ್ಲಿಕ್ ನೆಟ್‌ವರ್ಕ್ ತನ್ನ ಟಿವಿ ರೇಟಿಂಗ್ ಪಾಯಿಂಟ್‌ಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ರಿಪಬ್ಲಿಕ್ ಟಿವಿ (ಇಂಗ್ಲಿಷ್) ಮತ್ತು ರಿಪಬ್ಲಿಕ್ ಭಾರತ್ (ಹಿಂದಿ) ಚಾನೆಲ್‌ಗಳನ್ನು ಹೆಚ್ಚು ವೀಕ್ಷಕರು ನೋಡುತ್ತಿದ್ದಾರೆ ಎಂದು ಬಿಂಬಿಸಲು ವೀಕ್ಷಕರಿಗೆ ರೂ 15 ಲಕ್ಷ ಹಣ ಪಾವತಿಸಿತ್ತು ಎಂದು ಪೊಲೀಸರು ಆರೋಪಿಸಿದ್ದರು.