ಲಾಲೂ, ಕುಟುಂಬದ ವಿರುದ್ಧದ ಪ್ರಕರಣ ಬೇರೆ ನ್ಯಾಯಾಧೀಶರಿಗೆ ವರ್ಗಾಯಿಸುವುದಕ್ಕೆ ಸಿಬಿಐ ವಿರೋಧ

ಪ್ರಕರಣಗಳನ್ನು ವರ್ಗಾಯಿಸುವಂತೆ ಕೋರಿ ರಾಬ್ಡಿ ದೇವಿ ಅರ್ಜಿ ಸಲ್ಲಿಸಿದ್ದು ಲಾಲು ಯಾದವ್, ತೇಜಸ್ವಿ ಯಾದವ್ ಮತ್ತಿತರರು ಬೆಂಬಲಿಸಿದ್ದಾರೆ.
Lalu Yadav, Tejashwi Yadav and Rabri Devi
Lalu Yadav, Tejashwi Yadav and Rabri DeviFB
Published on

ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ರೌಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರ ಬದಲು ಬೇರೆ ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ಸಲ್ಲಿಸಿದ್ದ ಮನವಿಗೆ ಸಿಬಿಐ ಶನಿವಾರ ವಿರೋಧ ವ್ಯಕ್ತಪಡಿಸಿದೆ.

ರಾಬ್ಡಿ ದೇವಿ ಅವರು ನ್ಯಾಯಾಂಗದ ಮೇಲೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಪ್ರಕರಣವನ್ನು ನಿರ್ವಹಿಸುವಲ್ಲಿ ನ್ಯಾಯಾಲಯಗಳು ಹಾಗೂ ಹಿಂದಿನ ನ್ಯಾಯಾಧೀಶರು ಅನುಸರಿಸಿದ್ದ ವಿಧಾನವನ್ನೇ ನ್ಯಾ. ಗೊಗ್ನೆ ಪಾಲಿಸುತ್ತಿದ್ದಾರೆ ಎಂದು ಸಿಬಿಐ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕ ಡಿ.ಪಿ. ಸಿಂಗ್ ಹೇಳಿದರು.

Also Read
ನ್ಯಾ. ಗೋಗ್ನೆ ವಿರುದ್ಧ ಆರೋಪ: ರಾಬ್ಡಿ ದೇವಿ ಅರ್ಜಿ ಕುರಿತು ಪ್ರತಿಕ್ರಿಯಿಸಲು ಸಿಬಿಐಗೆ ಸೂಚಿಸಿದ ದೆಹಲಿ ನ್ಯಾಯಾಲಯ

ಆರೋಪಿ ನ್ಯಾಯಾಲಯದ ಮೇಲೆ ಒತ್ತಡ ಹೇರುವಂತಿಲ್ಲ ಅಥವಾ ನ್ಯಾಯಾಧೀಶರನ್ನು ಅವಮಾನಿಸುವಂತಿಲ್ಲ ಎಂದು ಅವರು ತಿಳಿಸಿದರು.

ಆರೋಪಿ ನ್ಯಾಯಾಲಯವನ್ನು ಅಸ್ಥಿರಗೊಳಿಸುವಂತಿಲ್ಲ. ತಮಗೆ ಬೇಕಾದ ನ್ಯಾಯಾಧೀಶರಿಂದ ತೀರ್ಪು (ಫೋರಂ ಶಾಪಿಂಗ್‌) ಪಡೆಯುವಂತಿಲ್ಲ, ನ್ಯಾಯಾಧೀಶರನ್ನು ಕೀಳಾಗಿ ಕಾಣುವಂತಿಲ್ಲ ಎಂದು ರಾಬ್ಡಿ ದೇವಿ ಅವರ ಮನವಿ ವಿಚಾರಣೆ ನಡೆಸುತ್ತಿದ್ದ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ದಿನೇಶ್ ಭಟ್ ಅವರಿಗೆ ತಿಳಿಸಿದರು.

ಐಆರ್‌ಸಿಟಿಸಿ ಪ್ರಕರಣದಲ್ಲಿ, ಲಾಲು ಯಾದವ್ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಖಾಸಗಿ ಸಂಸ್ಥೆಗೆ ಗುತ್ತಿಗೆಗಳನ್ನು ನೀಡುವುದಕ್ಕಾಗಿ ಪ್ರಮುಖ ಭೂಮಿ ಮತ್ತು ಷೇರುಗಳನ್ನು ಲಂಚವಾಗಿ ಸ್ವೀಕರಿಸಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.  ಪ್ರಕರಣದಲ್ಲಿ, ನ್ಯಾಯಾಲಯ ಯಾದವ್ ಕುಟುಂಬದ ವಿರುದ್ಧವೂ ಆರೋಪಗಳನ್ನು ನಿಗದಿಪಡಿಸಿತ್ತು. ಅಲ್ಲದೆ ಲಾಲೂ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ  ಉದ್ಯೋಗಕ್ಕಾಗಿ ವಿವಿಧ ಆಕಾಂಕ್ಷಿಗಳಿಂದ ಜಮೀನಿನ ರೂಪದಲ್ಲಿ ಲಂಚ ಪಡೆದಿದ್ದರು ಎಂದು ಸಿಬಿಐ ದೂರಿತ್ತು. ಎರಡೂ ಪ್ರಕರಣಗಳಲ್ಲಿ  ನಡೆದ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ತನಿಖೆ ನಡೆಸುತ್ತಿದೆ.

ಐಆರ್‌ಸಿಟಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 13ರಂದು, ನ್ಯಾಯಾಧೀಶ ಗೋಗ್ನೆ ಅವರು ಲಾಲು ಯಾದವ್, ರಾಬ್ಡಿ ದೇವಿ, ತೇಜಸ್ವಿ ಯಾದವ್ ಹಾಗೂ ಇತರ ಹಲವರ ವಿರುದ್ಧ ಕ್ರಿಮಿನಲ್ ಆರೋಪ  ನಿಗದಿಪಡಿಸಿದ್ದರು.

ನ್ಯಾಯಾಧೀಶ ಗೋಗ್ನೆ ಅವರ ಮುಂದೆ ಬಾಕಿ ಇರುವ ನಾಲ್ಕು ಪ್ರಕರಣಗಳನ್ನು ವರ್ಗಾಯಿಸುವಂತೆ ರಾಬ್ಡಿ ದೇವಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ನ್ಯಾಯಾಧೀಶರ ನಡವಳಿಕೆಯು ಅವರಿಂದ ನಿರೀಕ್ಷಿಸಲಾಗುವ ತಟಸ್ಥತೆಯ ಮೇಲೆ ಪರಿಣಾಮ ಬೀರುತ್ತಿದ್ದು ತಮ್ಮ ಮನಸ್ಸಿನಲ್ಲಿ ಅವರು ಪಕ್ಷಪಾತ ನಡೆಸಿರುವ ಸಾಧ್ಯತೆಯನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದರು. 

Also Read
ನ್ಯಾ. ಗೋಗ್ನೆ ವಿರುದ್ಧ ಪಕ್ಷಪಾತದ ಆರೋಪ ಮಾಡಿದ ರಾಬ್ಡಿ ದೇವಿ: ಪ್ರಕರಣಗಳ ವರ್ಗಾವಣೆಗೆ ಕೋರಿಕೆ

ಸಿಬಿಐ ಈ ಸಮರ್ಥನೆಯನ್ನು ಪ್ರಶ್ನಿಸಿತು. ನ್ಯಾಯಾಧೀಶರ ವಿರುದ್ಧ ರಾಬ್ಡಿ ದೇವಿ  ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಡಿ ಪಿ ಸಿಂಗ್‌ ಆಕ್ಷೇಪಿಸಿದರು.

ಬಿಹಾರ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಹೊಂದಿಕೆಯಾಗುವಂತೆ ಐಆರ್‌ಸಿಟಿಸಿ ಹಗರಣದಲ್ಲಿ ನ್ಯಾಯಾಧೀಶ ಗೋಗ್ನೆ ಉದ್ದೇಶಪೂರ್ವಕವಾಗಿ ಆದೇಶ ಮುಂದೂಡುತ್ತ ಬಂದರು ಎಂಬ ಆರೋಪವನ್ನು ಸಿಂಗ್‌ ಅಲ್ಲಗಳೆದರು. ನ್ಯಾಯಾಧೀಶರು ತಮ್ಮ ಸಾಂವಿಧಾನಿಕ ಕರ್ತವ್ಯ ನಿಭಾಯಿಸಿದ್ದು ಆರೋಪಿಗಳಿಗೆ ಆರೋಪಗಳನ್ನು ವಿವರಿಸುವುದು, ಅವರು ತಪ್ಪಿತಸ್ಥರಾಗಿರುವುದನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬುದನ್ನು ಕೇಳುವುದು ನ್ಯಾಯಾಲಯದ ಕರ್ತವ್ಯ. ನ್ಯಾಯಾಧೀಶರು ಸ್ಪಷ್ಟತೆಗಾಗಿ ಪ್ರಕರಣದ ಕೆಲವು ಅಂಶಗಳ ಬಗ್ಗೆ ಸಿಬಿಐನಿಂದ ವಿವರ ಬಯಸಿದ್ದರು ಎಂದು ಹೇಳಿದರು. ಪ್ರಕರಣದ ವಿಚಾರಣೆ ನಾಳೆ ಮುಂದುವರೆಯಲಿದೆ. ರಾಬ್ಡಿ ದೇವಿ ಪರವಾಗಿ ಹಿರಿಯ ವಕೀಲ ಮಣಿಂದರ್ ಸಿಂಗ್ ವಾದ ಮಂಡಿಸಿದರು.

Kannada Bar & Bench
kannada.barandbench.com