[ಅನುಸಂಧಾನ] ಸಂಬಂಧಿಗಳಿಬ್ಬರು ಬ್ಯಾರಿಸ್ಟರ್‌ ಪದವಿ ಪಡೆದಿದ್ದು ಕಾನೂನು ಶಿಕ್ಷಣಕ್ಕೆ ಪ್ರೇರಣೆ: ರಾಜಾ ಅಮರೇಶ್ವರ ನಾಯಕ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
[ಅನುಸಂಧಾನ] ಸಂಬಂಧಿಗಳಿಬ್ಬರು ಬ್ಯಾರಿಸ್ಟರ್‌ ಪದವಿ ಪಡೆದಿದ್ದು ಕಾನೂನು ಶಿಕ್ಷಣಕ್ಕೆ ಪ್ರೇರಣೆ: ರಾಜಾ ಅಮರೇಶ್ವರ ನಾಯಕ
Raja Narasimha NaikMP, Raichur

ತಮ್ಮ ಭಾಗದ ಜನರು ಎದುರಿಸುತ್ತಿರುವ ಕಾನೂನಾತ್ಮಕ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಕಾನೂನು ಶಿಕ್ಷಣ ಪಡೆದು, ವಕೀಲಿಕೆ ಆರಂಭಿಸಿದ್ದ ರಾಜಾ ಅಮರೇಶ್ವರ ನಾಯಕ ಅವರನ್ನು ರಾಜಕೀಯ ಕ್ಷೇತ್ರ ಸೆಳೆದುಕೊಂಡಿತ್ತು. ಮೂರು ದಶಕಗಳಿಗೂ ಹೆಚ್ಚಿನ ರಾಜಕೀಯ ಬದುಕಿನಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ಅವರು ಈಗ ರಾಯಚೂರು ಪರಿಶಿಷ್ಟ ವರ್ಗದ ಮೀಸಲು ಲೋಕಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.

ರಾಯಚೂರು ಭಾಗದಲ್ಲಿ ಪ್ರಭಾವ ಹೊಂದಿದ್ದ ರಾಜಮನೆತನಕ್ಕೆ ಸೇರಿದವರು ರಾಜ ಅಮರೇಶ್ವರ ನಾಯಕ. ಅರಸೊತ್ತಿಗೆಯ ಕಾಲಘಟ್ಟದಲ್ಲಿ ಲಿಂಗಸುಗೂರು ತಾಲ್ಲೂಕಿನ ಗುರಗುಂಟಾ ಭಾಗದ ಹಲವು ಗ್ರಾಮಗಳು ನಾಯಕ ಅವರ ರಾಜಮನೆತನದ ವ್ಯಾಪ್ತಿಗೊಳಪಟ್ಟಿದ್ದು ಇತಿಹಾಸ. ಕುಟುಂಬದ ಹಿನ್ನೆಲೆಯ ಜೊತೆಗೆ ಶಿಕ್ಷಣದ ಪ್ರಭಾವವನ್ನು ಬಳಸಿಕೊಂಡು ನಾಯಕ ಅವರು 1989ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

ಶಾಸಕರಾದ ಪ್ರಥಮ ಬಾರಿಗೇ ಎಸ್‌ ಬಂಗಾರಪ್ಪ ಅವರ ಸರ್ಕಾರದಲ್ಲಿ ಸಚಿವರಾಗಿ ನೇಮಕವಾಗುವ ಮೂಲಕ ರಾಜಕೀಯದಲ್ಲಿ ಮುನ್ನೆಲೆಗೆ ಬಂದರು. ಆದರೆ, ಆನಂತರ ಒಂದೂವರೆ ದಶಕ ರಾಜಕೀಯ ಅಜ್ಞಾತವಾಸ ಅನುಭವಿಸಿದ ಅವರು ಮತ್ತೊಮ್ಮೆ ಆರಿಸಿ ಬರುವುದರ ಜೊತೆಗೆ ಎಸ್‌ ಎಂ ಕೃಷ್ಣ ಅವರ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪದೋನ್ನತಿ ಪಡೆದರು. ಇದಾದ ಬಳಿಕ ಮತ್ತೆ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ರಾಜಕೀಯ ಹಿನ್ನಡೆ ಅನುಭವಿಸಿದ್ದ ನಾಯಕ ಅವರು ಈಗ ಸಂಸದರಾಗಿದ್ದಾರೆ. ರಾಜಾ ಅಮರೇಶ್ವರ ನಾಯಕ ಅವರು ತಾವು ಸಾಗಿ ಬಂದ ಹಿನ್ನೆಲೆ, ಶಿಕ್ಷಣ, ರಾಜಕೀಯ ಏಳುಬೀಳು, ವಕೀಲಿಕೆ ಮುಂತಾದ ವಿಚಾರಗಳ ಕುರಿತು 'ಬಾರ್‌ ಅಂಡ್‌ ಬೆಂಚ್‌'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Q

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

A

ಉತ್ತರ ಕರ್ನಾಟಕದವನಾದ ನನಗೆ ಉನ್ನತ ಶಿಕ್ಷಣ ಪಡೆಯುವ ಆಸೆ ಹೆಚ್ಚಿತ್ತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕಲೆ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆದಿದ್ದೆ. ಅಲ್ಲಿಯೇ ಸ್ನಾತಕೋತ್ತರ ಪದವಿ ಪಡೆಯಲು ನನಗೆ ಪ್ರವೇಶ ಅವಕಾಶ ದೊರೆತಿತ್ತು. ಇಂದಿನ ರೀತಿಯಲ್ಲಿ ಸಂಪರ್ಕದ ವ್ಯವಸ್ಥೆ ಇರಲಿಲ್ಲ. ಸಂವಹನದ ಕೊರತೆಯಿಂದಾಗಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲಾಗಲಿಲ್ಲ. ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ (ಸ್ಪೆಷಲ್‌) ಪದವಿ ಪಡೆದೆ.

Q

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

A

ನಮ್ಮ ಸಂಬಂಧಿಕರಲ್ಲಿ ಇಬ್ಬರು ಇಂಗ್ಲೆಂಡ್‌ಗೆ ತೆರಳಿ ಬ್ಯಾರಿಸ್ಟರ್‌ ಪದವಿ ಪಡೆದಿದ್ದರು. ಸಂಸದರಾಗಿದ್ದ ರಾಜಾ ವೆಂಕಟಪ್ಪ ನಾಯಕ ಮತ್ತೊಬ್ಬರು ಆಂಧ್ರ ಪ್ರದೇಶದ ನಮ್ಮ ಸಂಬಂಧಿ. ನಮ್ಮ ಭಾಗದಲ್ಲಿ ಹೊಲ-ಮನೆ ಖರೀದಿ, ಸಣ್ಣ ಪುಟ್ಟ‌ ಸಲಹೆ ಪಡೆಯಲು ಜನರು ವಕೀಲರ ಬಳಿಗೆ ತೆರಳುತ್ತಿದ್ದರು. ಇದು ನನ್ನನ್ನು ವಕೀಲನಾಗಲು ಪ್ರೇರೇಪಿಸಿತು. ಬಡ ಜನರಿಗೆ ನೆರವಾಗುವ ಉದ್ದೇಶದಿಂದ ವಕೀಲನಾಗುವ ನಿರ್ಧಾರ ಮಾಡಿದೆ. ಆದರೆ, ಹೆಚ್ಚು ಕಾಲ ವಕೀಲನಾಗಿ ಕೆಲಸ ಮಾಡಲಾಗಲಿಲ್ಲ.

Q

ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್‌ ಮಾಡಿದಿರಿ? ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?

A

ವಕೀಲರಾಗಿದ್ದ ಎನ್‌ ವೈ ಹನುಮಂತಪ್ಪನವರು ನ್ಯಾಯಮೂರ್ತಿಯಾಗುವುದಕ್ಕೂ ಮುನ್ನ ಅವರ ಬಳಿ ನಾನು ಕಿರಿಯ ವಕೀಲನಾಗಿ ಹೈಕೋರ್ಟ್‌ನಲ್ಲಿ ಕೆಲಕಾಲ ಪ್ರಾಕ್ಟೀಸ್‌ ಮಾಡಿದ್ದೇನೆ. ಇದೇ ಸಂದರ್ಭದಲ್ಲಿ ಸರ್ಕಾರಿ ಹುದ್ದೆಗೆ ಪ್ರಯತ್ನ ನಡೆಸಿದ್ದೆ. ಖಾಸಗಿ ಕಂಪೆನಿಯೊಂದರಲ್ಲಿ ಪ್ರಮುಖ ಹುದ್ದೆ ಸಿಕ್ಕಿತು. ಇದಾದ ಬಳಿಕ ವಕೀಲಿಕೆ ತೊರೆದೆ. ಆನಂತರ ನೇರವಾಗಿ ರಾಜಕೀಯ ಪ್ರವೇಶಿಸಿದೆ. ಹಾಗಾಗಿ ವಕೀಲನಾಗಿ ಹೆಚ್ಚಿನ ಅನುಭವ ಧಕ್ಕಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ.

Q

ವಕೀಲಿಕೆಯ ಆರಂಭದ ದಿನಗಳು ಹೇಗಿದ್ದವು?

A

35 ವರ್ಷಗಳ ಹಿಂದೆ ಪ್ರಾಕ್ಟೀಸ್‌ ಮಾಡಿದ್ದೆ. ಆ ಸಂದರ್ಭದಲ್ಲಿ ನಮಗೆ ವಾದ ಮಂಡನೆಗೆ ಅವಕಾಶ ಸಿಗುತ್ತಿರಲಿಲ್ಲ. ಪ್ರಕರಣದ ವಿಚಾರಣೆಗೆ ದಿನಾಂಕ ಪಡೆದುಕೊಳ್ಳುವುದು, ಡ್ರಾಫ್ಟಿಂಗ್ಸ್‌ ಮಾಡುವುದು, ನಮ್ಮ ಸೀನಿಯರ್‌ಗಳಿಗೆ ಪ್ರಕರಣಗಳ ಸಂಬಂಧ ನೆರವಾಗುವ ಕೆಲಸ ಮಾಡುತ್ತಿದ್ದೆ. ಹಾಗಾಗಿ, ವಿಶೇಷ ನೆನಪುಗಳು ಅಂಥ ಏನೂ ಇಲ್ಲ.

Q

ವಕೀಲಿಕೆಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?

A

ನಮ್ಮದು ರಾಜಮನೆತನವಾದುದರಿಂದ ಹಿಂದಿನಿಂದಲೂ ಜನಸಂಪರ್ಕವಿತ್ತು. ಇದು ಸಹಜವಾಗಿ ನನಗೆ ನೆರವಾಯಿತು. 1989ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಾರ್ವಜನಿಕ ಬದುಕಿಗೆ ಹೆಜ್ಜೆ ಇರಿಸಿದೆ. ಮೊದಲ ಬಾರಿ ಶಾಸನಕಾಗಿದ್ದಾಗಲೇ ಎಸ್‌ ಬಂಗಾರಪ್ಪ ಅವರ ಸರ್ಕಾರದಲ್ಲಿ ಸಚಿವನಾಗಿಯೂ ಕೆಲಸ ಮಾಡಿದೆ. ಆನಂತರ ಎಸ್‌ ಎಂ ಕೃಷ್ಣ ಅವರ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವನಾಗಿ ಕೆಲಸ ಮಾಡಿದ್ದೇನೆ.

Q

ಕಾನೂನು ಶಿಕ್ಷಣದ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪ್ರಭಾವ ಬೀರಿತು?

A

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ರಾಜಕಾರಣಿಗಳ ಶೈಕ್ಷಣಿಕ ಹಿನ್ನೆಲೆ ಕೆದಕಿದರೆ ಬಹುತೇಕರು ಕಾನೂನು ಶಿಕ್ಷಣ ಪಡೆದವರಾಗಿದ್ದಾರೆ. ಆದ್ದರಿಂದ ರಾಜಕೀಯಕ್ಕೂ, ಕಾನೂನಿಗೂ ವಿಶೇಷ ನಂಟಿದೆ. ವೈಯಕ್ತಿಕವಾಗಿ ಹೇಳುವುದಾದರೆ ನೀತಿ, ನಿರೂಪಣೆ ಹಾಗೂ ಸಾರ್ವಜನಿಕ ಬದುಕಿನಲ್ಲಿ ಕಾನೂನಿನ ಹಿನ್ನೆಲೆಯಿದ್ದರೆ ವಿವಿಧ ರೀತಿಯ ನೆರವು ಕೋರಿ ಬರುವ ಜನರಿಗೆ ಸೂಕ್ತ ಮಾರ್ಗದರ್ಶನ ಮಾಡಲು ಅನುಕೂಲವಾಗುತ್ತದೆ. ಕಾನೂನಿನ ಹಿನ್ನೆಲೆಯು ನನ್ನ ವಿಶ್ವಾಸ ಹೆಚ್ಚಿಸಿದೆ ಎಂಬುದರಲ್ಲಿ ಅನುಮಾನವಿಲ್ಲ.

Q

ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರಿಯಬೇಕಿತ್ತು ಎಂದೆನಿಸಿದೆಯೇ?

A

ರಾಜಕಾರಣಕ್ಕೆ ಬರಬಾರದಿತ್ತು ಎಂಬ ಭಾವನೆ ನನ್ನಲ್ಲಿ ಬಂದಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಒಳಿತು-ಕೆಡಕುಗಳು ಇರುವಂತೆ ರಾಜಕಾರಣದಲ್ಲೂ ಇದೆ. ಆಧುನಿಕತೆ ವ್ಯಾಪಿಸಿದಂತೆ ಕೆಲವೊಂದು ಬದಲಾವಣೆಗಳು ಆಗಿವೆ. ಅದು ಕೆಲವರಿಗೆ ಪಥ್ಯವಾದರೆ ಕೆಲವರಿಗೆ ಅಪಥ್ಯ ಎನಿಸಿರಬಹುದು. ಜನರ ಬದುಕಿನಲ್ಲಿ ಉತ್ತಮ ಬದಲಾವಣೆ ತರಲು ರಾಜಕೀಯ ಪ್ರಶಸ್ತ ಕ್ಷೇತ್ರ.

Related Stories

No stories found.
Kannada Bar & Bench
kannada.barandbench.com