
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಮುಂಜಾಗ್ರತಾ ಕ್ರಮವಾಗಿ ಬಂಧಿಸುವುದಕ್ಕೆ ಸಂಬಂಧಿಸಿದ ಕಾಯಿದೆಯಲ್ಲ ಎಂದು ಗುರುವಾರ ತಿಳಿಸಿರುವ ಬಾಂಬೆ ಹೈಕೋರ್ಟ್ ಭಯೋತ್ಪಾದನಾ ನಿಗ್ರಹ ಕಾಯಿದೆ ಸಿಂಧುತ್ವವನ್ನು ಎತ್ತಿ ಹಿಡಿದಿದೆ [ಅನಿಲ್ ಬಾಬುರಾವ್ ಬೈಲ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಕಾಯಿದೆಯ ಹೆಸರಿನಲ್ಲಿ "ಪ್ರಿವೆನ್ಷನ್" (ತಡೆ) ಎಂಬ ಪದ ಸೇರಿಸಿದ್ದ ಮಾತ್ರಕ್ಕೆ ಕಾಯಿದೆಯ ಸ್ವರೂಪವನ್ನು ಅದು ನಿರ್ಧರಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ನೀಲಾ ಗೋಖಲೆ ಅವರಿದ್ದ ಪೀಠ ತಿಳಿಸಿದೆ.
ಕಾಯಿದೆಯ ಹೆಸರಿನಲ್ಲಿ "ಪ್ರಿವೆನ್ಷನ್" (ತಡೆ) ಎಂಬ ಪದ ಸೇರಿಸಿದ್ದ ಮಾತ್ರಕ್ಕೆ ಅದು ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಕಾಯಿದೆಯಾಗಿಬಿಡುವುದಿಲ್ಲ ಎಂದು ತೀರ್ಪು ತಿಳಿಸಿದೆ.
ಅಂತೆಯೇ ಯುಎಪಿಎ ಎಂಬುದು ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಕಾಯಿದೆ ಆಗಿದ್ದು ದಂಡದ ಸೆಕ್ಷನ್‌ಗಳನ್ನು ಒಳಗೊಂಡಿರಲು ಸಾಧ್ಯವಿಲ್ಲದ ಕಾರಣ ಅದು ಸಂವಿಧಾನಬಾಹಿರ ಎಂಬ ಅರ್ಜಿದಾರರ ವಾದವನ್ನು ಅದು ತಿರಸ್ಕರಿಸಿತು.
ಮುಂಜಾಗ್ರತಾ ಕ್ರಮವಾಗಿ ಬಂಧನ ಎಂಬುದು ವ್ಯಕ್ತಿಯೊಬ್ಬ ಅಪರಾಧ ಕೃತ್ಯ ಮಾಡುವ ಸಾಧ್ಯತೆಯನ್ನು ಗಮನಿಸಿ ಕೃತ್ಯ ನಡೆಯುವ ಮುನ್ನವೇ ಬಂಧಿಸುವ ಕಾನೂನಾಗಿದೆ.
ಕಾಯಿದೆಯ ಹೆಸರಿನಲ್ಲಿರುವ ತಡೆ ಪದ ಕಾನೂನುಬಾಹಿರ ಚಟುವಟಿಕೆಗಳ ತಡೆಗೆ ಸಂಬಂಧಿಸಿದ್ದು ಕಾಯಿದೆಯಡಿಯಲ್ಲಿ ಯಾವುದೇ ಅಧಿಕಾರಿ ಮುಂಜಾಗ್ರತಾ ಕ್ರಮವಾಗಿ ಬಂಧನ ನಡೆಸುವ ಅಧಿಕಾರವನ್ನು ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಯುಎಪಿಎಯನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆಗಾಗಿ ಇರುವ ಕಾಯಿದೆ ಎಂದು ಅರ್ಥೈಸಿಕೊಳ್ಳಬಹುದೇ ವಿನಾ ಅದು ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಕಾನೂನು ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಯುಎಪಿಎ ಅಡಿಯಲ್ಲಿರುವ ಕಾಯ್ದೆಯನ್ನು ಕಾನೂನುಬಾಹಿರ ಚಟುವಟಿಕೆಗಳನ್ನು ನಿಗ್ರಹಿಸಲೆಂದು ಇರುವ 'ತಡೆಗಟ್ಟುವ' ವಿಧಾನ ಎಂದು ಅರ್ಥೈಸಿಕೊಳ್ಳಬಹುದೇ ವಿನಾ ಯಾವುದೇ ರೀತಿಯ ಕಲ್ಪನೆಯಿಂದಲೂ ಇದನ್ನು ಸಂಪೂರ್ಣವಾಗಿ ಮಂಜಾಗ್ರತಾ ಕ್ರಮವಾಗಿ ಬಂಧಿಸುವ ಕಾನೂನಿನೊಂದಿಗೆ ಸಮೀಕರಿಸಲಾಗದು ಎಂದಿರುವ ಅದು ಭ್ರಷ್ಟಾಚಾರ ನಿಗ್ರಹ ಕಾಯಿದೆಯಂತಹ ಇನ್ನೂ ಅನೇಕ ಕಾಯಿದೆಗಳಲ್ಲೂ ತಡೆ ಎಂಬ ಪದದ ಬಳಕೆ ಇರುವುದನ್ನು ನೆನಪಿಸಿದೆ.
ಭೀಮಾ ಕೋರೆಗಾಂವ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜುಲೈ 10, 2020ರಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ನೋಟಿಸ್ ಪಡೆದಿದ್ದ ಆರ್ಥಿಕ ಸಲಹೆಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಅನಿಲ್ ಬಾಬುರಾವ್ ಬೈಲ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಿಂತೆ ಈ ತೀರ್ಪು ನೀಡಲಾಗಿದೆ .
ಯುಎಪಿಎ ನಾಗರಿಕ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸುತ್ತದೆ ಮತ್ತು ಸೈದ್ಧಾಂತಿಕವಾಗಿ ತಾರತಮ್ಯದಿಂದ ಕೂಡಿದೆ ಎಂಬ ವಿಸ್ತೃತ ವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಕಾನೂನು ರೀತ್ಯಾ ನ್ಯಾಯಯುತವಾದ, ಸಮಂಜಸವಾದ ಪ್ರಕ್ರಿಯೆಯಡಿ 21 ನೇ ವಿಧಿಯು ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಅನುಮತಿಸುತ್ತದೆ ಎಂದು ಪುನರುಚ್ಚರಿಸಿತು.
[ತೀರ್ಪಿನ ಪ್ರತಿ]