
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವಹೇಳನ ಪ್ರಕರಣದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಮಹೇಶ್ ತಿಮರೋಡಿ ಅವರಿಗೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.
ಮಹೇಶ್ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಉಡುಪಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ಹಾಗೂ ಬ್ರಹ್ಮಾವರದ ಸಂಚಾರಿ ಪೀಠದ ನ್ಯಾಯಾಧೀಶರಾದ ಎನ್ ಎ ನಾಗೇಶ್ ಅವರು ಪುರಸ್ಕರಿಸಿದರು.
ತಿಮರೋಡಿ ಅವರು 20 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್, ಒಬ್ಬರ ಭದ್ರತೆ ಒದಗಿಸಬೇಕು. ಸಾಕ್ಷ್ಯ ನಾಶಪಡಿಸಬಾರದು ಮತ್ತು ಪೊಲೀಸರ ವಿಚಾರಣೆಗೆ ಸ್ಪಂದಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಇದಕ್ಕೂ ಮುನ್ನ, ತಿಮರೋಡಿ ಅವರ ಜಾಮೀನು ಅರ್ಜಿ ವೇಳೆ ಬ್ರಹ್ಮಾವರ ಪೊಲೀಸರು ತನಿಖೆಗಾಗಿ ತಿಮರೋಡಿಯನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ನ್ಯಾಯಾಲಯವು ನಿನ್ನೆಯಲ್ಲಾ ನ್ಯಾಯಾಂಗ ಬಂಧನದಲ್ಲಿದ್ದ ತಿಮರೋಡಿ ಅವರನ್ನು ಏಕೆ ಕಸ್ಟಡಿಗೆ ಕೋರಿಲ್ಲ. ಜಾಮೀನು ಅರ್ಜಿ ಸಲ್ಲಿಸಿರುವಾಗ ಕಸ್ಟಡಿಗೆ ಕೋರುತ್ತಿರುವುದೇಕೆ ಎಂದು ತರಾಟೆಗೆ ತೆಗೆದುಕೊಂಡಿತು.
ಕೊನೆಗೆ ಮೂರು ತಾಸು ಪ್ರಕರಣದಲ್ಲಿ ಮಹಜರ್ ನಡೆಸಲು ಮತ್ತು ವಿಚಾರಣೆಗಾಗಿ ತಿಮರೋಡಿ ಅವರನ್ನು ಪೊಲೀಸರ ವಶಕ್ಕೆ ನ್ಯಾಯಾಲಯ ನೀಡಿತ್ತು. ಸಂಜೆ ವೇಳೆಗೆ ನ್ಯಾಯಾಲಯದ ಮುಂಜೆ ತಿಮರೋಡಿ ಅವರನ್ನು ಪೊಲೀಸರು ಹಾಜರುಪಡಿಸಿದರು. ಆನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು.
ಗುರುವಾರ ಬಂಧಿಸಲ್ಪಟ್ಟಿದ್ದ ಮಹೇಶ್ ತಿಮರೋಡಿ ಅವರನ್ನು ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.
ಬಿ ಎಲ್ ಸಂತೋಷ್ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿದ್ದಾರೆ. ಹಿಂದೂ ಧರ್ಮದ ಮುಖಂಡನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿ, ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ವೈಮನಸ್ಸು ಹಾಗೂ ದ್ವೇಷ ಭಾವನೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಬಿಜೆಪಿಯ ಉಡುಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್ ಈಚೆಗೆ ದೂರು ನೀಡಿದ್ದರು.
ಇದರ ಅನ್ವಯ ಬಿಎನ್‌ಎಸ್‌ಎಸ್ ಸೆಕ್ಷನ್ 196(1), 352 ಮತ್ತು 353(2) ಅಡಿ ಆಗಸ್ಟ್ 16ರಂದು ಬ್ರಹ್ಮಾವರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರೂ ಮಹೇಶ್ ತಿಮ್ಮರೋಡಿ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದರು.