
ಬೆಂಗಳೂರಿನ ಹಲಸೂರು ಕೆರೆಗೆ ತ್ಯಾಜ್ಯ ನೀರು ಬಿಡುವ ಮೂಲಕ ಮಾಲಿನ್ಯ ಎಸಗುತ್ತಿರುವ ಸಂಬಂಧ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಮದ್ರಾಸ್ ಎಂಜಿನಿಯರಿಂಗ್ ಸಮೂಹ ಮತ್ತು ಕೇಂದ್ರ ಹಾಗೂ (ಎಂಇಜಿ) ಗ್ಯಾರಿಸನ್ ಎಂಜಿನಿಯರ್ ಸಂಸ್ಥೆಗಳಿಗೆ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು (ಎನ್‌ಜಿಟಿ) ವಿಧಿಸಿರುವ ₹2.94 ಕೋಟಿ ದಂಡದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಬದಿಗೆ ಸರಿಸಿದೆ. ಆದರೆ, ಎಂಇಜಿಯು ₹1 ಕೋಟಿಯನ್ನು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಕೆಎಸ್‌ಪಿಸಿಬಿ) ಠೇವಣಿ ಇಡಬೇಕು. ಇದು ಎನ್‌ಜಿಟಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶಿಸಿದೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವ ಹಲಸೂರು ಕೆರೆಯು ಮೀನುಗಳಿಗೆ ಸ್ಮಶಾನವಾಗಿ ಪರಿಣಮಿಸಿದೆ ಎಂಬ ಮಾಧ್ಯಮ ವರದಿ ಆಧರಿಸಿ 2016ರಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಎನ್‌ಜಿಟಿಯು 2021ರ ಸೆಪ್ಟೆಂಬರ್ 23ರಂದು ಎಂಇಜಿಯ ಕೊಳಚೆ ನೀರು ಸಂಸ್ಕರಣಾ ಘಟಕವು (ಎಸ್‌ಟಿಪಿ) ಪರಿಸರ ಸಂರಕ್ಷಣಾ ಮಾನದಂಡಗಳನ್ನು ಅನುಪಾಲಿಸಿಲ್ಲ ಎಂದು ₹2,94,60,000 ಕೋಟಿ ದಂಡವನ್ನು 2021ರ ಸೆಪ್ಟೆಂಬರ್ 23ರಂದು ಮಧ್ಯಂತರ ಆದೇಶದ ಮೂಲಕ ವಿಧಿಸಿತ್ತು. ಇದನ್ನು 2022ರ ಮೇ 20ರ ಆದೇಶದಲ್ಲಿ ಖಾತರಿಗೊಳಿಸಿತ್ತು. ಎನ್‌ಜಿಟಿಯ ಈ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠವು ಭಾಗಶಃ ಪುರಸ್ಕರಿಸಿದೆ.
ಹಲಸೂರು ಕೆರೆಯ ಮಾಲಿನ್ಯದಲ್ಲಿ ಎಂಇಜಿ ಪಾತ್ರವಿದೆ ಮತ್ತು ಎಂಇಜಿ ವಾದ ಆಲಿಸದೇ ಏಕಪಕ್ಷೀಯವಾಗಿ ₹2,94,60,000 ಕೋಟಿ ದಂಡ ವಿಧಿಸಿರುವ ಅಂಶಗಳನ್ನು ಬದಿಗೆ ಸರಿಸಲಾಗಿದೆ. ಎಂಇಜಿಯ ವಾದ ಆಲಿಸದೇ ಆದೇಶ ಮಾಡುವ ಮೂಲಕ ಸಹಜ ನ್ಯಾಯತತ್ವ ಉಲ್ಲಂಘಿಸಲಾಗಿದೆ ಎಂಬ ಏಕೈಕ ಕಾರಣಕ್ಕೆ ಎನ್‌ಜಿಟಿ ಆದೇಶವನ್ನು ಬದಿಗೆ ಸರಿಸಲಾಗಿದೆ. ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಎಂಇಜಿಗೆ ವಿಧಿಸಿರುವ ದಂಡ ಪಾವತಿಸುವ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಎಂಇಜಿ ವಾದವನ್ನು ಆಲಿಸಿ ಹೊಸದಾಗಿ ಆದೇಶ ಮಾಡುವಂತೆ ಎನ್‌ಜಿಟಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಎಂಇಜಿ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ಎಂಇಜಿ ಮೂಲಕ ಹರಿಯುವ ಕೊಳಚೆ ನೀರು ಸಂಕ್ಷರಣಾ ಘಟಕಕ್ಕೆ ಬಿಡಬ್ಲ್ಯುಎಸ್‌ಎಸ್‌ಬಿಯು ವಿವಿಧ ಜನವಸತಿಯ ಕೊಳಚೆ ನೀರನ್ನು ತಿರುಗಿಸಿದೆ. ಈ ಸಂಬಂಧ ಎಂಇಜಿಯಲ್ಲಿ ನೆಲೆಸಿರುವ ಸೈನಿಕರು ಮತ್ತು ಇತರರ ಆರೋಗ್ಯಕ್ಕೆ ಮಾರಕವಾಗಿರುವುದರಿಂದ ಕೊಳಚೆ ನೀರನ್ನು ಇತ್ತ ತಿರುಗಿಸದಂತೆ ಬಿಡಬ್ಲ್ಯುಎಸ್‌ಎಸ್‌ಬಿ ವಿರುದ್ಧ ದೂರು ನೀಡಲಾಗಿದೆ. ಅಲ್ಲದೇ, ಕರ್ನಾಟಕದಲ್ಲಿ ಕೊಳಚ ನೀರು ಸಂಸ್ಕರಣಾ ಘಟಕ ನಡೆಸಲು ಸೇನಾ ಸಂಸ್ಥೆ/ತಾಣಗಳು (ಎಂಇಜಿ) ಪೂರ್ವಾನುಮತಿ ಪಡೆಯಬೇಕು ಎಂದು ಹೇಳಲಾಗಿಲ್ಲ” ಎಂದು ವಾದಿಸಿದ್ದರು.
ಅಲ್ಲದೇ, “ಎಂಇಜಿಯ ತ್ಯಾಜ್ಯ ಅತ್ಯಂತ ಕಡಿಮೆ ಇದ್ದು, ಪ್ರತಿದಿನ 1,200 ಕಿಲೋ ಲೀಟರ್ ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಣಾ ಘಟಕವನ್ನು ಯೋಜಿತವಾಗಿ ರೂಪಿಸಲಾಗಿದೆ. ಅಲ್ಲಿನ ತ್ಯಾಜ್ಯವನ್ನು ಚರಂಡಿಯಲ್ಲಿ ಹಾಕಲಾಗುತ್ತದೆ ಎಂಬ ವಿಚಾರವು ಸತ್ಯಕ್ಕೆ ದೂರ. ಈ ಸಂಬಂಧ ಪರಿಶೀಲನೆಗಾಗಿ ರಚಿಸಲಾಗಿದ್ದ ಜಂಟಿ ಸಮಿತಿಯು ರಾಜಕಾಲುವೆಯ ಆರಂಭಿಕ ಬಿಂದುವಿನಲ್ಲಿ ನೀರಿನ ಮಾದರಿ ಸಂಗ್ರಹಿಸಿತ್ತು. ಇಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಮತ್ತು ಇತರರು ಮಾಲಿನ್ಯ ಪ್ರಮುಖ ಕಾರಣರಾಗಿದ್ದು, ಎಂಇಜಿಗೆ ಹೊಣೆ ಹೊರಿಸಲಾಗದು. ಈ ಸಂಬಂಧ ತಮ್ಮ ವಾದವನ್ನು ಆಲಿಸದೇ ಸಹಜ ನ್ಯಾಯತತ್ವ ಉಲ್ಲಂಘಿಸಲಾಗಿದೆ” ಎಂದು ಆಕ್ಷೇಪಿಸಿದ್ದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿನಿಧಿಸಿದ್ದ ವಕೀಲ ಮಹೇಶ್ ಚೌಧರಿ ಅವರು “ಎಂಇಜಿಯು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಾಯಿದೆ 2010ರ ಸೆಕ್ಷನ್ 22 ಜೊತೆಗೆ 14ರ ಅಡಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕಿರುವುದರಿಂದ ಹಾಲಿ ಮನವಿಯನ್ನು ಪುರಸ್ಕರಿಸಬಾರದು. ಎನ್‌ಜಿಟಿಯಲ್ಲಿ ಸ್ವಯಂಪ್ರೇರಿತ ಪ್ರಕ್ರಿಯೆ ನಡೆಯುತ್ತಿರುವುದು ಎಂಇಜಿಗೆ ತಿಳಿದಿತ್ತು. ಹೀಗಾಗಿ, ಸಹಜ ನ್ಯಾಯತತ್ವ ಆಧಾರದಲ್ಲೂ ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡಬಾರದು” ಎಂದು ಆಕ್ಷೇಪಿಸಿದ್ದರು.
ಎಸ್‌ಟಿಪಿ ರೂಪಿಸಲು ಮತ್ತು ಅದರ ಕಾರ್ಯಾಚರಣೆಯ ಸಂಬಂಧ ಎಂಇಜಿಯು ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಅನುಮತಿ ಪಡೆದಿರಲಿಲ್ಲ. ಸಂಸ್ಕರಿಸಿದ ನೀರು ನಿಗದಿತ ಮಾನದಂಡಗಳನ್ನು ಪೂರೈಸಿಲ್ಲ. ಹೀಗಾಗಿ, ಮಾದರಿ ಸಂಗ್ರಹಿಸಿದ ದಿನದಿಂದ ಅನ್ವಯಿಸುವಂತೆ ಪರಿಸರ ಮಾಲಿನ್ಯ ದಂಡ ವಿಧಿಸುವಂತೆ ಎನ್‌ಜಿಟಿ ನೇಮಿಸಿದ್ದ ಜಂಟಿ ಸಮಿತಿಯು 2020ರ ಆಗಸ್ಟ್ 10ರಂದು ಶಿಫಾರಸ್ಸು ಮಾಡಿತ್ತು. ಎನ್‌ಜಿಟಿಯ ಆದೇಶದಂತೆ 2024ರ ಜುಲೈ 9ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಯು ದಂಡದ ಮೊತ್ತ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹೈಕೋರ್ಟ್ ಕದತಟ್ಟಿತ್ತು.