ದೆಹಲಿ ಗಲಭೆ ಸಂಚು ಪ್ರಕರಣ: ನಾಳೆ ಉಮರ್‌ ಖಾಲಿದ್‌ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ ದೆಹಲಿ ಹೈಕೋರ್ಟ್

ಖಾಲಿದ್‌ ಅವರಿಗೆ ಎರಡು ಬಾರಿ ವಿಚಾರಣಾ ನ್ಯಾಯಾಲಯ ಮತ್ತು ಒಂದು ಬಾರಿ ಹೈಕೋರ್ಟ್ ಜಾಮೀನು ನಿರಾಕರಿಸಿವೆ.
Umar Khalid and Delhi High Court
Umar Khalid and Delhi High Court
Published on

ದೆಹಲಿ ಗಲಭೆ ಸಂಚಿನ ಪ್ರಕರಣದಲ್ಲಿ ಜಾಮೀನು ಕೋರಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಜುಲೈ 22 ರಂದು (ಸೋಮವಾರ) ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರಿದ್ದ ವಿಭಾಗೀಯ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.

ಖಾಲಿದ್ ಅವರನ್ನು ಸೆಪ್ಟೆಂಬರ್ 2020 ರಲ್ಲಿ ಬಂಧಿಸಲಾಯಿತು. ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಯಿತು.

Also Read
ದೆಹಲಿ ಗಲಭೆ ಸಂಚು ಪ್ರಕರಣ: ಉಮರ್ ಖಾಲಿದ್‌ಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

ಅಂದಿನಿಂದ ಜೈಲಿನಲ್ಲಿರುವ ಅವರು ಸಲ್ಲಿಸಿರುವ ಎರಡನೇ ಸುತ್ತಿನ ಜಾಮೀನು ಅರ್ಜಿ ಇದಾಗಿದೆ. ಖಾಲಿದ್ಗೆ ಎರಡು ಬಾರಿ ವಿಚಾರಣಾ ನ್ಯಾಯಾಲಯ ಮತ್ತು ಒಂದು ಬಾರಿ ಹೈಕೋರ್ಟ್ ಜಾಮೀನು ನಿರಾಕರಿಸಿವೆ.

ವಿಚಾರಣಾ ನ್ಯಾಯಾಲಯವು ಮೊದಲು  ಮಾರ್ಚ್ 2022ರಲ್ಲಿ ಅವರಿಗೆ ಜಾಮೀನು ನಿರಾಕರಿಸಿತು. ನಂತರ ಅವರು ಹೈಕೋರ್ಟ್ ಅನ್ನು ಸಂಪರ್ಕಿಸಿದ. ಆದರೆ  ಅದು  ಅಕ್ಟೋಬರ್ 2022ರಲ್ಲಿ ಪರಿಹಾರವನ್ನು ನಿರಾಕರಿಸಿದ ಪರಿಣಾಮ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋದರು.

ಮೇ 2023 ರಲ್ಲಿ, ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರ ಪ್ರತಿಕ್ರಿಯೆ ಕೇಳಿತು. ನಂತರ ಖಾಲಿದ್‌ ಅವರ ಮನವಿಯನ್ನು 14 ಬಾರಿ ಮುಂದೂಡಲಾಯಿತು.

ಫೆಬ್ರವರಿ 14, 2024 ರಂದು ಸಂದರ್ಭ ಬದಲಾಗಿರುವುದನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್‌ನಿಂದ ತಮ್ಮ ಜಾಮೀನು ಅರ್ಜಿಯನ್ನು ಅವರು  ಹಿಂತೆಗೆದುಕೊಂಡರು .

ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ  ಮತ್ತು  ಪಂಕಜ್ ಮಿತ್ತಲ್‌ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ  ಫೆಬ್ರವರಿ 14 ರಂದು  ಪ್ರಕರಣದ ವಿಚಾರಣೆ ನಡೆಸಬೇಕಿತ್ತು.  ಖಾಲಿದ್ ಪರ ವಕೀಲರಾದ ಹಿರಿಯ ವಕೀಲ  ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಳ್ಳುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

"ಸನ್ನಿವೇಶಗಳ ಬದಲಾವಣೆಯಿಂದಾಗಿ ನಾವು (ಜಾಮೀನು ಅರ್ಜಿ) ಹಿಂಪಡೆಯಲು ಬಯಸುತ್ತೇವೆ ಸೂಕ್ತ ಪರಿಹಾರಕ್ಕಾಗಿ ವಿಚಾರಣಾ ನ್ಯಾಯಾಲಯಕ್ಕೆ ಹೋಗುತ್ತೇವೆ" ಎಂದು  ಸಿಬಲ್ ಹೇಳಿದ್ದರು.

ಮೇ 28 ರಂದು ವಿಚಾರಣಾ ನ್ಯಾಯಾಲಯವು ಅವರ ಎರಡನೇ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

Kannada Bar & Bench
kannada.barandbench.com