ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳ ದುಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ ನರೇಂದ್ರ ಮೋದಿಯವರು ಈ ಕೈದಿಗಳ ಬಿಡುಗಡೆಗಾಗಿ ತ್ವರಿತ ಕಾನೂನು ನೆರವು ನೀಡುವಂತೆ ಕರೆಯಿತ್ತರು.
ನವದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ನಡೆದ ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಯು ಯು ಲಲಿತ್ , ಡಿ ವೈ ಚಂದ್ರಚೂಡ್ ಹಾಗೂ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಕೂಡ ಉಪಸ್ಥಿತರಿದ್ದರು.
ಜಿಲ್ಲಾ ನ್ಯಾಯಾಧೀಶರು ಜಿಲ್ಲಾ ಮಟ್ಟದ ವಿಚಾರಣಾಧೀನ ಕೈದಿಗಳ ಪರಿಶೀಲನಾ ಸಮಿತಿಯಲ್ಲಿರುವ ತಮ್ಮ ಸ್ಥಾನ ಬಳಸಿ ವಿಚಾರಣಾಧೀನ ಕೈದಿಗಳನ್ನು ಜೈಲಿನಿಂದ ಶೀಘ್ರ ಬಿಡುಗಡೆ ಮಾಡಬೇಕು. ಇದು ಯಶಸ್ವಿಯಾಗುತ್ತದೆ ಎಂದು ನಾನು ಭಾವಿಸುವೆ ಎಂಬುದಾಗಿ ತಿಳಿಸಿದರು.
ಉಚಿತ ಕಾನೂನು ಸಹಾಯ ನೀಡುವುದು ಸರ್ಕಾರದ ಕರ್ತವ್ಯ ಎಂದು ಸಾರುವ ಸಂವಿಧಾನದ 39 ಎ ವಿಧಿಯನ್ನು ಉಲ್ಲೇಖಿಸಿದ ಮೋದಿ ನ್ಯಾಯಾಂಗ ಮೂಲಸೌಕರ್ಯ ಸುಧಾರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರು ಮಾತನಾಡಿದರು. "ನಾವು ಕಳೆದ 8 ವರ್ಷಗಳಲ್ಲಿ ನ್ಯಾಯಾಂಗ ಮೂಲಸೌಕರ್ಯ ಸುಧಾರಿಸಲು ಪಟ್ಟುಬಿಡದೆ ಕೆಲಸ ಮಾಡಿದ್ದೇವೆ. ನ್ಯಾಯಾಂಗ ಮೂಲಸೌಕರ್ಯ ಅಭಿವೃದ್ಧಿಗಾಗಿ ಸುಮಾರು ರೂ. 9 ಸಾವಿರ ಕೋಟಿಗಳನ್ನು ಖರ್ಚು ಮಾಡಲಾಗಿದೆ" ಎಂದು ಅವರು ಹೇಳಿದರು.
ಇದಲ್ಲದೆ, ಇ-ಕೋರ್ಟ್‌ಗಳ ಯೋಜನೆ ಮತ್ತು ಕೋವಿಡ್ ಸೋಂಕು ಹರಡಿದ್ದ ವರ್ಷಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಗಳನ್ನು ಕೂಡ ಪ್ರಧಾನಿ ಪ್ರಸ್ತಾಪಿಸಿದರು. “ಇ- ನ್ಯಾಯಾಲಯ ಯೋಜನೆಯಿಂದಾಗಿ ವರ್ಚುವಲ್ ಕೋರ್ಟ್‌ಗಳು ಸ್ಥಾಪನೆಯಾಗಿವೆ. ನ್ಯಾಯಾಲಯಗಳಲ್ಲೇ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯ ಇದೆ. ಜಿಲ್ಲಾ ನ್ಯಾಯಾಲಯಗಳಲ್ಲಿ 1 ಕೋಟಿ ಪ್ರಕರಣಗಳನ್ನು ಡಿಜಿಟಲ್ ವ್ಯವಸ್ಥೆ ಮೂಲಕ ವಿಚಾರಣೆ ಮಾಡಲಾಗಿದೆ. 60 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವರ್ಚುವಲ್ ವಿಧಾನದ ಮೂಲಕ ವಿಚಾರಣೆ ಮಾಡಲಾಗಿದೆ ಎಂಬುದು ನನ್ನ ಅರಿವಿಗೆ ಬಂದಿದೆ” ಎಂದರು.
ಇದೇ ಕಾರ್ಯಕ್ರಮದಲ್ಲಿ ಸಿಜೆಐ ರಮಣ ಅವರು ಮಾತನಾಡಿದ್ದು ಅದರ ವಿವರ ತಿಳಿಯಲು ಕೆಳಗೆ ಕ್ಲಿಕ್ಕಿಸಿ.