ವಿತರಣೆಯಾಗದ ಶಾಲಾ ಸಮವಸ್ತ್ರ: ಉನ್ನತ ಅಧಿಕಾರಿ ಜೈಲಿಗೆ ಕಳುಹಿಸಿದರೆ ಸರಿಯಾಗುತ್ತದೆ ಎಂದು ಕಿಡಿಕಾರಿದ ಹೈಕೋರ್ಟ್‌

ರಾಜ್ಯದ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ 2019-20, 2020-21, 2021-22, 2022-23ನೇ ಶೈಕ್ಷಣಿಕ ಸಾಲಿನಲ್ಲಿ ಶೂ ಮತ್ತು ಕಾಲುಚೀಲ ನೀಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
Karnataka High Court
Karnataka High Court

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಸಮವಸ್ತ್ರ, ಶೂ ಮತ್ತು ಕಾಲು ಚೀಲ ವಿತರಿಸಿರುವ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ನೀಡದ ರಾಜ್ಯ ಸರ್ಕಾರದ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಉನ್ನತ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದರೆ ಸರಿಹೋಗುತ್ತದೆ ಎಂದು ಕಟುವಾಗಿ ನುಡಿದಿದೆ.

ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂದು 2019ರ ಆಗಸ್ಟ್‌ 28ರಂದು ಹೊರಡಿಸಿರುವ ಆದೇಶ ಪಾಲನೆಯಾಗಿಲ್ಲ ಎಂದು ಆರೋಪಿಸಿ ಕೊಪ್ಪಳ ಜಿಲ್ಲೆಯ ಮಾಸ್ಟರ್ ಮಂಜುನಾಥ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಎಂ ಜಿ ಉಮಾ ಅವರ ನೇತೃತ್ವದ ವಿಭಾಗೀಯ ಪೀಠವು ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿತು.

ಅಲ್ಲದೆ, ರಾಜ್ಯದ ಎಲ್ಲಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರು (ಡಿಡಿಪಿಐ), ಸಮವಸ್ತ್ರ  ಖರೀದಿಸಲು ರಾಜ್ಯ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ. ಅದರಲ್ಲಿ ಎಷ್ಟು ಹಣ ಸದ್ಭಳಕೆಯಾಗಿದೆ ಎಂಬ ಬಗ್ಗೆ ವೈಯಕ್ತಿಕವಾಗಿ ಪರಿಶೀಲನೆ ನಡೆಸಬೇಕು. ಹಾಗೆಯೇ, 2019-20ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ಮತ್ತು ಶೂ, ಕಾಲು ಚೀಲ ವಿತರಣೆ ಮಾಡುವ ಮೂಲಕ ಸರ್ಕಾರವು ಹೈಕೋರ್ಟ್‌ನ 2019ರ ಆಗಸ್ಟ್‌ 28ರ ತೀರ್ಪು ಪಾಲಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಾತರಿಪಡಿಸಿ ಎರಡು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ಪೀಠವು ವಿಚಾರಣೆ ಮುಂದೂಡಿದೆ.

ಇದಕ್ಕೂ ಮುನ್ನ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ನಿರ್ದೇಶಕರು ಸಲ್ಲಿಸಿರುವ ಅಫಿಡವಿಟ್‌ ಅನ್ನು ಸರ್ಕಾರಿ ವಕೀಲರು ಪೀಠಕ್ಕೆ ಒದಗಿಸಿದರು. ಸಮವಸ್ತ್ರ ಖರೀದಿಸಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. 2019-20, 2020-21, 2021-22, 2022-23ನೇ ಶೈಕ್ಷಣಿಕ ಸಾಲಿನಲ್ಲಿ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೂ ಮತ್ತು ಕಾಲುಚೀಲ ನೀಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿತ್ತು.

ಇದನ್ನು ಪರಿಶೀಲಿಸಿದ ಪೀಠವು ಸಮವಸ್ತ್ರ, ಶೂ ಮತ್ತು ಕಾಲುಚೀಲ ನೀಡಿರುವುದನ್ನು ಪುಷ್ಟೀಕರಿಸುವ ದಾಖಲೆ ಒದಗಿಸಿಲ್ಲ. ವಿದ್ಯಾರ್ಥಿಗಳಿಗೆ ಸಮವಸ್ತ್ರ ತಲುಪಿರುವುದು ದೇವರಿಗೆ ಮಾತ್ರ ಗೊತ್ತಾಗಬೇಕು. ಸರ್ಕಾರವು ನ್ಯಾಯಾಲಯದ ಆದೇಶ ಪಾಲಿಸಿಲ್ಲ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸಬೇಕೆಂಬ ಮನೋಭಾವ ಸರ್ಕಾರಕ್ಕೆ ಇದ್ದರೆ, ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ನ್ಯಾಯಾಂಗ ನಿಂದನೆ ಆರೋಪದಿಂಡ ತಪ್ಪಿಕೊಳ್ಳಬೇಕು ಎಂದು ನ್ಯಾಯಾಲಯಕ್ಕೆ ಸುಮ್ಮನೆ ಅಫಿಡವಿಟ್‌ ಸಲ್ಲಿಸಿದರೆ ಸಾಲದು ಎಂದು ಕಿಡಿಕಾರಿತಲ್ಲದೆ, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗುವುದು ಎಂದು ತಿಳಿಸಿತು.

ಆಗ ಸರ್ಕಾರಿ ವಕೀಲರು, ಹಾಗೆ ಮಾಡಿದರೆ ಏನು ಬರುತ್ತದೆ ಸ್ವಾಮಿ? ಎಂದು ಪೀಠವನ್ನು ಕೇಳಿಕೊಂಡರು.

Also Read
ವಿತರಣೆಯಾಗದ ಶಾಲಾ ಸಮವಸ್ತ್ರ: 'ಉತ್ಸವ ಮಾಡುತ್ತೀರಿ, ನಾಚಿಕೆಯಾಗುವುದಿಲ್ಲವೇ?' ಎಂದು ಸರ್ಕಾರಕ್ಕೆ ಗುಡುಗಿದ ಹೈಕೋರ್ಟ್‌

ಇದರಿಂದ ಕೋಪಗೊಂಡ ನ್ಯಾಯಮೂರ್ತಿ ಬಿ ವೀರಪ್ಪ ಅವರು, ಏನು ಬರುತ್ತದೆ ಎಂದರೆ; ಅಧಿಕಾರಿಯನ್ನು ಜೈಲಿಗೆ ಕಳುಸುತ್ತೇವೆ. ಆಗ ಮಕ್ಕಳಿಗೆ ಸಮವಸ್ತ್ರ ಹೇಗೆ ಬರುವುದಿಲ್ಲ ಎನ್ನುವುದು ನೋಡುತ್ತೇವೆ. ಸರ್ಕಾರದ ಉನ್ನತ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದರೆ; ನಮ್ಮನ್ನು ಕಾಪಾಡಲು ನ್ಯಾಯಾಲಯವಿದೆ ಎಂಬುದು ಜನರಿಗೆ ಗೊತ್ತಾಗುತ್ತದೆ. ಆದರೆ, ಮಾನ ಮಾರ್ಯದೆ ಇಲ್ಲದಿದ್ದರೆ ಅಧಿಕಾರಿಗಳು ಆರು ತಿಂಗಳು ಜೈಲಿಗೆ ಹೋಗಿಬರುತ್ತಾರೆ. ಆಗ ಏನೂ ಮಾಡೋಕೆ ಆಗಲ್ಲ. ನ್ಯಾಯಾಲಯಕ್ಕೂ ಸಹ ಎಲ್ಲೋ ಒಂದು ಕಡೆ ಸರ್ಕಾರದ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದು ತೀಕ್ಷ್ಣವಾಗಿ ನುಡಿದರು.

ಸರ್ಕಾರದ ಅಫಿಡವಿಟ್‌ ನ್ಯಾಯಾಲಯಕ್ಕೆ ತೃಪ್ತಿ ತಂದಿಲ್ಲ. ರಾಜ್ಯದ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಸಮವಸ್ತ್ರ ವಿತರಣೆಗೆ ಸರ್ಕಾರವು ಹಣ ಬಿಡುಗಡೆ ಮಾಡಿದೆಯೇ? ಅದರಲ್ಲಿ ಎಷ್ಟು ಬಳಕೆಯಾಗಿದೆ ಎಂಬ ಬಗ್ಗೆ ಡಿಡಿಪಿಐಗಳು ದಾಖಲೆಗಳನ್ನು ಪಡೆದು ಪರಿಶೀಲಿಸಿ, ಅಫಿಡವಿಟ್‌ ಸಲ್ಲಿಸಬೇಕು ಎಂದು ಸೂಚಿಸಿದ ಪೀಠವು ಅದನ್ನು ಕಾನೂನು ಸೇವಾ ಪ್ರಾಧಿಕಾರದ ಮೂಲಕ ನ್ಯಾಯಾಲಯ ಮರು ಪರಿಶೀಲನೆ ನಡೆಸಲಿದೆ ಎಂದು ಹೇಳಿತು.

Related Stories

No stories found.
Kannada Bar & Bench
kannada.barandbench.com