ವಿತರಣೆಯಾಗದ ಶಾಲಾ ಸಮವಸ್ತ್ರ: 'ಉತ್ಸವ ಮಾಡುತ್ತೀರಿ, ನಾಚಿಕೆಯಾಗುವುದಿಲ್ಲವೇ?' ಎಂದು ಸರ್ಕಾರಕ್ಕೆ ಗುಡುಗಿದ ಹೈಕೋರ್ಟ್‌

ನ್ಯಾಯಾಲಯದ ಆದೇಶವನ್ನು ನೀವು (ಸರ್ಕಾರ) ಪ್ರಶ್ನಿಸಬೇಕು. ಸಂವಿಧಾನಿಕ ಹೊಣೆಗಾರಿಕೆ, ಆರ್‌ಟಿಇ ಕಾಯಿದೆ ಜಾರಿ ಮಾಡಲ್ಲ ಎಂದು ಅಫಿಡವಿಟ್‌ ಹಾಕಿ. ಇದು ದುರದೃಷ್ಟಕರ ಎಂದ ಪೀಠ.
Karnataka HC, Justice B Veerappa and K S Hemalekha
Karnataka HC, Justice B Veerappa and K S Hemalekha

ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂಬ ಆದೇಶ ಪಾಲಿಸದ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮೌಖಿಕವಾಗಿ ತೀವ್ರ ವಾಗ್ದಾಳಿ ನಡೆಸಿದ್ದು, “ಉತ್ಸವ ಮಾಡುತ್ತೀರಿ. ಏನೆನಕ್ಕೋ ಕೋಟಿಗಟ್ಟಲೇ ಹಣ ವ್ಯಯಿಸುತ್ತೀರಿ. ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಅವರಿಗೆ ಮಾನ ಮರ್ಯಾದೆ, ಆತ್ಮಸಾಕ್ಷಿ ಇಲ್ಲ” ಎಂದು ಕಟುವಾಗಿ ನುಡಿಯಿತು.

ಕೊಪ್ಪಳ ಜಿಲ್ಲೆಯ ಮಾಸ್ಟರ್‌ ಮಂಜುನಾಥ್‌ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ಸರ್ಕಾರ ಮತ್ತು ಅಧಿಕಾರಿಗಳ ನಡೆಗೆ ತೀವ್ರ ಅತೃಪ್ತಿ ಹೊರಹಾಕಿತು.

“2019ರ ಆಗಸ್ಟ್‌ 28ರಂದು ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ನ್ಯಾಯಯುತ ನೆಲೆಯಲ್ಲಿ ಜಾರಿಗೊಳಿಸುವುದರ ಸಂಬಂಧ ವಿಸ್ತೃತ ಅಫಿಡವಿಟ್‌ ಅನ್ನು ರಾಜ್ಯ ಸರ್ಕಾರ ಸಲ್ಲಿಸಬೇಕು. ಆರ್‌ಟಿಇ ಕಾಯಿದೆ ಸೆಕ್ಷನ್‌ 3ರ ಅಡಿ ತನ್ನ ಕರ್ತವ್ಯವನ್ನು ತುರ್ತಾಗಿ ರಾಜ್ಯ ಸರ್ಕಾರ ನಿಭಾಯಿಸಬೇಕಿದೆ. ಅಲ್ಲದೇ, ಕಾಯಿದೆಯ ಸೆಕ್ಷನ್‌ 3, ಸಂವಿಧಾನದ 21ಎ, 25ನೇ ವಿಧಿ ಅಡಿ 6-14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು. ಸಾಂವಿಧಾನಿಕ ಹೊಣೆಗಾರಿಕೆಯನ್ನು ಜಾರಿ ಮಾಡಲು ರಾಜ್ಯ ಸರ್ಕಾರವು ಕಣ್ಣು ತೆರೆಯಲು ಇದು ಸುಸಂದರ್ಭವಾಗಿದ್ದು, ಸಾಂಸ್ಥಿಕ ಜವಾಬ್ದಾರಿ ನಿಭಾವಣೆಯನ್ನು ರಾಜ್ಯ ಸರ್ಕಾರವು ತುರ್ತಾಗಿ ಮಾಡಬೇಕು. ಅಂತಿಮವಾಗಿ ಇದಕ್ಕೆ ಎರಡು ವಾರ ಕಾಲಾವಕಾಶ ನೀಡಲಾಗುತ್ತಿದ್ದು, ಸಂಬಂಧಿತ ಅಧಿಕಾರಿಯ ವಿರುದ್ಧ ಆರೋಪ ನಿಗದಿ ಮಾಡಲಾಗುತ್ತದೆ. ಅಂದು ಅವರು ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

“2021ರ ಆಗಸ್ಟ್‌ 28ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ 2021-22ರ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಒಂದು ಜೊತೆ ಸಮವಸ್ತ್ರ ನೀಡಲಾಗಿದೆ. ಕರ್ನಾಟಕ ಸಮಗ್ರ ಶಿಕ್ಷಣ ಯೋಜನೆಯ ನಿರ್ದೇಶಕಿ ಕಾವೇರಿ ಅವರು ಅಫಿಡವಿಟ್‌ ಸಲ್ಲಿಸಿದ್ದು, ಇದರಲ್ಲಿ ಎರಡನೇ ಜೊತೆ ಸಮವಸ್ತ್ರ ಖರೀದಿಸಲು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಂಬಂಧಿತ ಎಸ್‌ಡಿಎಂಸಿಯ ಖಾತೆಗೆ ಹಣ ವರ್ಗಾಯಿಸಲಾಗಿದೆ ಎಂದು ಈ ಸಂಬಂಧ ಹೊರಡಿಸಲಾದ ಸರ್ಕಾರದ ಆದೇಶ, ಸತ್ತೋಲೆಗಳನ್ನು ಸಲ್ಲಿಸಿದ್ದಾರೆ. 2019-20ನೇ ಸಾಲಿನಲ್ಲಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ ಖರೀದಿಸಲು ಸಂಬಂಧಿತ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಎಸ್‌ಡಿಎಂಸಿಯ ಜಂಟಿ ಖಾತೆಗೆ ಅಗತ್ಯ ಹಣ ವರ್ಗಾಯಿಸುವ ಮೂಲಕ ನ್ಯಾಯಾಲಯದ ಆದೇಶ ಪಾಲಿಸಲಾಗಿದೆ ಎಂದು ತಿಳಿಸಿದ್ದಾರೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

“ಅರ್ಜಿದಾರರಿಗೆ ಹೊಲಿದಿರುವ ಎರಡನೇ ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ಗಳನ್ನು ಎರಡು ವಾರದಲ್ಲಿ ನೀಡಬೇಕು ಎಂದು ವಿಭಾಗೀಯ ಪೀಠ ಮಾಡಿದ್ದ ಆದೇಶವನ್ನು ಪಾಲಿಸಲಾಗಿದೆ. ಇದಕ್ಕೆ ಪೂರಕವಾಗಿ ಫೋಟೊ ದಾಖಲೆಗಳನ್ನು ಸಲ್ಲಿಸಲಾಗಿದೆ. ಎರಡು ಫೋಟೊದಲ್ಲಿ ಒಬ್ಬರೇ ವ್ಯಕ್ತಿ ಕಾಣಿಸುತ್ತಿದ್ದು, ಇದರಲ್ಲಿ ಶಿಕ್ಷಕರು ನಿಂತಿದ್ದಾರೆ. ಹೈಕೋರ್ಟ್‌ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂಬುದಕ್ಕೆ ಸ್ಪಷ್ಟತೆ ಕಾಣುತ್ತಿಲ್ಲ. ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್‌ 3ರ ಅಡಿ ಮಕ್ಕಳಿಗೆ ಸಮವಸ್ತ್ರ ವಿತರಿಸುವುದು ಸರ್ಕಾರದ ಮೂಲಭೂತ ಕರ್ತವ್ಯವಾಗಿದೆ. ಫಲಾನುಭವಿ ಮಕ್ಕಳಿಗೆ ಸಮವಸ್ತ್ರ, ಶೂ-ಕಾಲು ಚೀಲ ಸಿಕ್ಕಿದೆಯೇ ಎಂಬುದು ದೇವರಿಗೆ ಮಾತ್ರ ಗೊತ್ತು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಇದಕ್ಕೂ ಮುನ್ನ ಪೀಠವು “ಅಧಿಕಾರಿಗಳಿಗೆ ಮಾನ ಮರ್ಯಾದೆ ಇದ್ದರೆ, ಆತ್ಮಸಾಕ್ಷಿ ಇದ್ದರೆ ಸಮವಸ್ತ್ರ, ಶೂ ಹಾಗೂ ಕಾಲು ಚೀಲ ವಿತರಿಸಲು ಹೇಳಿ. ಆರ್‌ಟಿಇ ಕಾಯಿದೆ ಮತ್ತು ಸಂವಿಧಾನದ ಅಡಿ ಅದನ್ನು ಜಾರಿ ಮಾಡಬೇಕು. ಇದಕ್ಕಾಗಿ ಮೊದಲಿಗೆ ರಿಟ್‌ ಅರ್ಜಿ, ಆನಂತರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮಾನ ಮರ್ಯಾದೆ ಇಲ್ಲವೇ? ಏನೇನಕ್ಕೋ ಕೋಟಿ ಗಟ್ಟಲೇ ಖರ್ಚು ಮಾಡುತ್ತೀರಿ. ಮಕ್ಕಳ ಹಕ್ಕು, ಶಿಕ್ಷಣ ವಿಚಾರದಲ್ಲಿ ನಾವು ಇದನ್ನು ಸಹಿಸುವುದಿಲ್ಲ. ಅಂಥ ಅಧಿಕಾರಿಗೆ ಹುದ್ದೆಗೆ ಸಿಗಬಾರದು. ಮಕ್ಕಳ ರಕ್ತ ಹೀರುತ್ತೀರಿ, ಮಕ್ಕಳ ರಕ್ತ ಮತ್ತು ಚರ್ಮ ಕಿತ್ತು ತಿನ್ನುವುದು ಮಾತ್ರ ಬಾಕಿ ಉಳಿಸಿದ್ದೀರಿ. ಇದನ್ನು ನೋಡಿದರೆ ನಮಗೆ ನೋವಾಗುತ್ತದೆ. ರಿಟ್‌ ಅರ್ಜಿಯಿಂದ ಆದೇಶ, ಆನಂತರ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿದೆ. ಇದಕ್ಕಿಂತ ನಾಚಿಕೆ ಏನಿದೆ. ಇದು ಸರ್ಕಾರಕ್ಕೆ ನಾಚಿಕೆ ಉಂಟು ಮಾಡುವುದಿಲ್ಲವೇ? ಸಮವಸ್ತ್ರ ಕೊಟ್ಟರೆ ಕೊಡಿ, ಇಲ್ಲ ಆಗಲ್ಲ ಎಂದು ಹೇಳಿ. ನ್ಯಾಯಾಲಯದ ಆದೇಶವನ್ನು ನೀವು (ಸರ್ಕಾರ) ಪ್ರಶ್ನಿಸಬೇಕು. ಸಾಂವಿಧಾನಿಕ ಹೊಣೆಗಾರಿಕೆ, ಆರ್‌ಟಿಇ ಕಾಯಿದೆ ಜಾರಿ ಮಾಡಲ್ಲ ಎಂದು ಅಫಿಡವಿಟ್‌ ಹಾಕಿ. ಇದು ದುರದೃಷ್ಟಕರ” ಎಂದು ಪೀಠವು ಮೌಖಿಕವಾಗಿ ಹೇಳಿತು.

ವಿಚಾರಣೆಯ ವೇಳೆ ನ್ಯಾಯಾಲಯ ಹೇಳಿದ್ದೇನು?

  • ಕಿರಣ್‌ ಕುಮಾರ್‌ ಅವರು ಸರ್ಕಾರದ ವಕೀಲರು. ಆದರೆ, ತಮ್ಮ ಮಕ್ಕಳನ್ನು ಸರ್ಕಾರದ ಶಾಲೆ ಕಳುಹಿಸುವುದಿಲ್ಲ. ಖಾಸಗಿ ಕಳುಹಿಸುತ್ತಾರೆ. ನಾವೆಲ್ಲರೂ ಸರ್ಕಾರದ ಶಾಲೆಗಳಲ್ಲೇ ಓದಿದ್ದು.

  • ನೀವು (ಸರ್ಕಾರ) ಎರಡು ಜೊತೆ ಸಮವಸ್ತ್ರಕ್ಕೆ ಹಣ ಕಳುಹಿಸಿರುವುದಾಗಿ ಹೇಳುತ್ತೀರಿ. ಇಲ್ಲಿ ಒಂದು ಜೊತೆಗೆ ಮಾತ್ರ ಇದೆ. ಬಹುಶಃ ಒಂದು ಜತೆಯಲ್ಲಿ ಒಂದು ಬಟ್ಟೆಯಿರುವುದಿಲ್ಲ. ಇನ್ನೊಂದರಲ್ಲಿ ಮತ್ತೊಂದಿರುವುದಿಲ್ಲ. ಹೀಗಾಗಿರಬಹುದು. ಒಂದು ಸಾಕ್ಸ್‌ ಮತ್ತು ಒಂದು ಶೂಗೆ ಹಣ ಕಳುಹಿಸಿರಬೇಕು ಎಂದು ವ್ಯಂಗ್ಯ.

  • ಸಮವಸ್ತ್ರ, ಶೂ-ಕಾಲುಚೀಲ ವಿತರಣೆಗೆ ಸಂಬಂಧಿಸಿದ ಅಧಿಕಾರಿ ಯಾರು? ಕಾವೇರಿ ಅವರೇ? ನಾವು ಅವರ ವಿರುದ್ಧ ಆರೋಪ ನಿಗದಿ ಮಾಡುತ್ತೇವೆ.

  • ಸಮವಸ್ತ್ರ ವಿತರಿಸಲು, ಶೂ-ಕಾಲು ಚೀಲ ನೀಡಲು ಶಾಲೆಯ ಮುಖ್ಯ ಶಿಕ್ಷಕರಿಗೆ ಹಣ ವರ್ಗಾವಣೆ ಮಾಡುವಂತೆ ಆದೇಶದಲ್ಲಿ ಹೇಳಲಾಗಿದೆ. ಸರ್ಕಾರ ಸುತ್ತೋಲೆ ಹೊರಡಿಸಿದೆ. ಈಗ ಕೊಟ್ಟರೆ ಕೊಟ್ಟರು, ಬಿಟ್ಟರೆ ಬಿಟ್ಟರು. ಇದರ ಮೇಲೆ ನಿಗಾ ಇಡುವವರು ಯಾರು? ಇದರ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್‌ಗೆ ಜವಾಬ್ದಾರಿ ನೀಡಿದ್ದೀರಾ? ಈ ಯೋಜನೆಯ ರಾಜ್ಯ ನಿರ್ದೇಶಕರು ಯಾರು? ಪ್ರತಿ ತಾಲ್ಲೂಕಿನಲ್ಲಿ ಇದ್ದಾರೆಯೇ? ಒಂದು ಜೊತೆ ಸಮವಸ್ತ್ರದಂತೆ ರಾಜ್ಯದಲ್ಲಿ ಅಂದಾಜು 126 ಲಕ್ಷ ಮೀಟರ್‌ ಬಟ್ಟೆ ಬೇಕಾಗುತ್ತದೆ ಎಂದು ಹೇಳಲಾಗಿದೆ. ಬಟ್ಟೆ ಹೊಲೆಯಲು ಹಣ ಯಾರು ಕೊಡುತ್ತಾರೆ? ಮಕ್ಕಳ ಪೋಷಕರೇ ಕೊಡಬೇಕೆ? ಕೊಟ್ಟರೆ ಕೊಡಬೇಕು ಇಲ್ಲವಾದರೆ ಬೇಡ. ಅರ್ಧಂಬರ್ಧ ಸಾಯಿಸಬೇಡಿ. ಪೂರ್ತಿಯಾಗಿ ಸಾಯಿಸಿಬಿಡಿ. ಮಕ್ಕಳ ಶೈಕ್ಷಣಿಕ ಬದುಕನ್ನು ಹೀಗೆ ಮಾಡಿದರೆ ಏನು ಕತೆ?

  • ಮಕ್ಕಳ ಮಧ್ಯೆ ತಾರತಮ್ಯ ಉಂಟು ಮಾಡಬಾರದು. ಒಂದು ಬಾರಿ ಅವರ ಮನಸ್ಸು ಹಾಳಾದರೆ ಜೀವನಪೂರ್ತಿ ಅವರು ಯಾತನೆಗೆ ಸಿಲುಕುತ್ತಾರೆ. ಏಕೆ ಸರಿಯಾದ ರೀತಿಯಲ್ಲಿ ಸಮವಸ್ತ್ರ ನೀಡಿಲ್ಲ ಎಂದು ಆಕೆಯನ್ನು (ಅಧಿಕಾರಿ ಕಾವೇರಿ) ಕೇಳಿ. ಅವರ ವಿರುದ್ಧ ಆರೋಪ ನಿಗದಿ ಮಾಡುತ್ತೇವೆ.

  • ಕಾಯಿದೆ ಕಾಗದದ ಮೇಲೆ ಜಾರಿಯಾಗುವುದು ಬೇಡ. ವಾಸ್ತವಿಕವಾಗಿ ಜಾರಿಯಾಗುವುದು ಬೇಕು. ನ್ಯಾಯಾಧೀಶರು ನಿಮ್ಮ ಅಕೌಂಟ್‌ ಪುಸ್ತಕಗಳನ್ನು ಪರಿಶೀಲಿಸಬೇಕೆ? ಇದಕ್ಕಾಗಿ ಖಾಸಗಿ ಏಜೆನ್ಸಿಯನ್ನು ನೇಮಕ ಮಾಡುತ್ತೇವೆ. ಅದಕ್ಕೆ ತಗುಲುವ ವೆಚ್ಚವನ್ನು ನೀವು (ಸರ್ಕಾರ) ಪಾವತಿಸಬೇಕು. ನಿಮ್ಮವರೆಲ್ಲವೂ ಅವರೇ, ಇಲ್ಲಿ ವ್ಯತ್ಯಾಸವೆಲ್ಲಿದೆ. ಆ ಸ್ಥಾನಗಳಲ್ಲಿ ಕುಳಿತಿಕೊಳ್ಳುವ ಜನರಿಗೆ ಮಾನವೀಯತೆ ಇಲ್ಲ. ಇದು ಸಮಸ್ಯೆಯ ಮೂಲ. ಅವರಿಗೆ ಮಾನೀಯತೆ ಇರಬೇಕು. ಅವರ ಮಕ್ಕಳು ಸರ್ಕಾರಿ ಶಾಲೆಗೆ ಹೋಗುವುದಿಲ್ಲ. ಅಧಿಕಾರಿಗಳ ಮಕ್ಕಳು ಖಾಸಗಿ ಶಾಲೆಗೆ ಕಾರಿನಲ್ಲಿ ಹೋಗಿ, ಬರುತ್ತಾರೆ. ಅವರಾರೂ ಸರ್ಕಾರಿ ಶಾಲೆಯಲ್ಲಿ ಓದುವುದಿಲ್ಲ. ಮಕ್ಕಳ ವಿಚಾರದಲ್ಲಿ ಈ ಥರದ ಮಲತಾಯಿ ಧೋರಣೆಯನ್ನು ನ್ಯಾಯಾಲಯ ಸಹಿಸುವುದಿಲ್ಲ.

  • ಈಚೆಗೆ 520 ಮಕ್ಕಳು ಕಲಿಯುವ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಒಂದೇ ಒಂದು ಶೌಚಾಲಯ ಇತ್ತು. ಅದರಲ್ಲೂ ಗಿಡ-ಗಂಟಿ ಬೆಳೆದು ಮಕ್ಕಳು ಅದನ್ನು ಬಳಸಲು ಹೆದರುತ್ತಿದ್ದರು. ಹಾವು ಬರುತ್ತದೆ ಎಂದು. ಕೊನೆಗೆ ನಾವೇ ಅದನ್ನು ಸ್ವಚ್ಛಗೊಳಿಸಿದೆವು. ಈ ಕೆಲಸ ಮಾಡಿ 40 ವರ್ಷಗಳಾಗಿತ್ತು. ಇದನ್ನು ನಾವು ಮಾಡಿದೆವು. ಇವರಿಗೆ ನಾಚಿಕೆ ಆಗಬೇಕು. ಮಾನ-ಮಾರ್ಯಾದೆ ಏನೂ ಇಲ್ಲ. ಉತ್ಸವಗಳನ್ನು, ಎಲ್ಲವನ್ನೂ ಮಾಡುತ್ತಾರೆ.

ನ್ಯಾ. ಓಕಾ ನೇತೃತ್ವದ ವಿಭಾಗೀಯ ಪೀಠದ ಆದೇಶವೇನಿತ್ತು?

ಆರ್‌ಟಿಇ ಕಾಯಿದೆ ಸೆಕ್ಷನ್‌ 3ರ ಅಡಿ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ನೀಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ. ಶೂ ಧರಿಸುವ ನಿಯಮ ಯಾವ ಶಾಲೆಗಳಲ್ಲಿ ಇದೆಯೋ ಅಲ್ಲಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡುವ ಹೊಣೆಗಾರಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲಿದೆ ಎಂದು ನ್ಯಾಯಾಲಯ ಆದೇಶಿಸಿತ್ತು.

Also Read
[ಸಮವಸ್ತ್ರ] ಹೈಕೋರ್ಟ್‌ ಆದೇಶದ ಕುರಿತು ತಪ್ಪು ಹೇಳಿಕೆ ಹಿಂಪಡೆಯಲು ಸಚಿವ ನಾಗೇಶ್‌ಗೆ ನೋಟಿಸ್‌ ಜಾರಿ ಮಾಡಿದ ಎಐಎಲ್‌ಎಜೆ

ಅಲ್ಲದೇ, ಈ ಆದೇಶ ಮಾಡಿದ ಎರಡು ತಿಂಗಳ ಒಳಗೆ ರಾಜ್ಯ ಸರ್ಕಾರವು ಎರಡನೇ ಜೊತೆ ಸಮವಸ್ತ್ರ, ಶೂ-ಕಾಲು ಚೀಲ (ಅಗತ್ಯವಿದ್ದ ಕಡೆ) ನೀಡಬೇಕು. ಆರ್‌ಟಿಇ ಕಾಯಿದೆ ಸೆಕ್ಷನ್‌ 7ರ ಅಡಿ ಕೇಂದ್ರ ಸರ್ಕಾರದಿಂದ ನೆರವು ಕೋರಲು ರಾಜ್ಯ ಸರ್ಕಾರ ಮುಕ್ತವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸಂಬಂಧಪಟ್ಟ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ನೀಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಎಂದು ಬಿಡಿಸಿ ಹೇಳಬೇಕಿಲ್ಲ. ಅರ್ಜಿದಾರ ಮಾಸ್ಟರ್‌ ಮಂಜುನಾಥ್‌ ಅವರಿಗೆ ಎರಡನೇ ಜೊತೆ ಹೊಲಿದಿರುವ ಸಮವಸ್ತ್ರ, ಒಂದು ಜೊತೆ ಶೂ ಹಾಗೂ ಎರಡು ಜೊತೆ ಕಾಲು ಚೀಲವನ್ನು ಎರಡು ವಾರದಲ್ಲಿ ವಿತರಿಸಬೇಕು ಎಂದು ಅಂದಿನ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ಮೊಹಮ್ಮದ್‌ ನವಾಜ್‌ ಅವರ ನೇತೃತ್ವದ ವಿಭಾಗೀಯ ಪೀಠವು 2019ರ ಆಗಸ್ಟ್‌ 28ರಂದು ಆದೇಶಿಸಿತ್ತು.

Kannada Bar & Bench
kannada.barandbench.com