ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ದೇಶದ ವಿವಿಧತೆ ನಾಶವಾಗುತ್ತದೆ: ಕಾನೂನು ಆಯೋಗಕ್ಕೆ ಹಿರಿಯ ವಕೀಲ ಪಿ ವಿಲ್ಸನ್ ಪತ್ರ

ಕಾನೂನು ಆಯೋಗಕ್ಕೆ ಜುಲೈ 3 ರಂದು ಬರೆದ ಪತ್ರದಲ್ಲಿ, ವಿಲ್ಸನ್ ಅವರು ಈ ವಿಷಯದ ಕುರಿತು ಸಭೆ, ಸಮಾಲೋಚನೆ, ಪ್ರಶ್ನಾವಳಿ ಪ್ರಕಟಿಸುವುದು ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಆಯೋಗ ಮಾಡಿದ ವೆಚ್ಚದ ವಿವರಗಳನ್ನು ಕೇಳಿದ್ದಾರೆ.
Senior Advocate P Wilson
Senior Advocate P Wilson

ಹಿರಿಯ ವಕೀಲ ಮತ್ತು ರಾಜ್ಯಸಭಾ ಸದಸ್ಯ ಪಿ ವಿಲ್ಸನ್ ಅವರು 22ನೇ ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದು, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಷಯದ ಬಗ್ಗೆ ಸಾರ್ವಜನಿಕ ಸಮಾಲೋಚನೆ  ಪುನರಾರಂಭಿಸುವ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಡಿಎಂಕೆ ಸಂಸದರೂ ಆಗಿರುವ ವಿಲ್ಸನ್‌ ಅವರು ಜುಲೈ 3 ರಂದು ಬರೆದಿರುವ ಪತ್ರದಲ್ಲಿ ಏಕರೂಪ ನಾಗರಿಕ ಸಂಹಿತೆಯ ಜಾರಿಯಿಂದ ದೇಶದ ವಿವಿಧತೆ ನಶಿಸುತ್ತದೆ ಎಂದಿದ್ದಾರೆ.

ಯುಸಿಸಿ ದೇಶದ ಜಾತ್ಯತೀತತೆಗೆ ಅಪಾಯಕಾರಿಯಾಗಿದ್ದು ಅದು ಒಮ್ಮೆ ಜಾರಿಯಾದರೆ ಅಲ್ಪಸಂಖ್ಯಾತರ ವಿಶಿಷ್ಟ ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ಅಳಿಸಿಹಾಕಬಹುದು. ಈಗಾಗಲೇ ಆಳವಾಗಿ ಅಧ್ಯಯನ ನಡೆಸಿರುವ ವಿಚಾರವನ್ನು ಈಗ ಮತ್ತೆ ಏಕೆ ಕೆದಕಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಮತ್ತೆ ಸಮಾಲೋಚನೆ ನಡೆಸುವುದು ವಿಚಿತ್ರವೆನಿಸಲಿದೆ. ಇದಾಗಲೇ ಯುಸಿಸಿ ಜಾರಿಗೆ ವಿರುದ್ಧವಾಗಿ 21ನೇ ಕಾನೂನು ಆಯೋಗ ಪ್ರಕಟಿಸಿದ್ದ 2018ರ ಸಮಾಲೋಚನಾ ಪತ್ರಿಕೆಯ ಸಂಶೋಧನೆಗಳನ್ನು ದುರ್ಬಲಗೊಳಿಸಲು ಆಯೋಗ ಬಹುಶಃ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Also Read
ಕೇಂದ್ರಪಟ್ಟಿಯಿಂದ ಸಮವರ್ತಿ ಪಟ್ಟಿಗೆ ಜನಗಣತಿ ವಿಷಯ ಬದಲಿಸಿ: ಪ್ರಧಾನಿ ಮೋದಿಗೆ ಡಿಎಂಕೆ ಸಂಸದ ವಿಲ್ಸನ್‌ ಪತ್ರ

ಭಾರತ ವೈವಿಧ್ಯಮಯ ರಾಷ್ಟ್ರವಾಗಿದ್ದು, ಎಲ್ಲಿಯೂ ಕಂಡುಬಾರದಷ್ಟು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಾಷಾ ವೈವಿಧ್ಯತೆ ಇಲ್ಲಿದೆ. ವರದಿಯೊಂದರ ಪ್ರಕಾರ ದೇಶ 398 ಭಾಷೆಗಳಿಗೆ ನೆಲೆಯಾಗಿದೆ, ಅವುಗಳಲ್ಲಿ 387 ಸಕ್ರಿಯವಾಗಿವೆ 11 ಭಾಷೆಗಳು ಅಳಿವಿನಂಚಿನಲ್ಲಿವೆ. ಹಿಂದೂ ಧರ್ಮದಲ್ಲಿಯೂ ಸಹ, ಹಲವಾರು ಉಪ-ಸಂಸ್ಕೃತಿಗಳಿವೆ, ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಗುರುತು, ಸಂಪ್ರದಾಯ ಮತ್ತು ಪದ್ಧತಿಗಳನ್ನು ಹೊಂದಿದೆ. ವೈಯಕ್ತಿಕ ಕಾನೂನುಗಳ ಒಂದು ವರ್ಗವನ್ನು ತೆಗೆದುಕೊಂಡು ಅದನ್ನು ಎಲ್ಲಾ ಧರ್ಮಗಳು, ಉಪ-ಪಂಥಗಳು ಮತ್ತು ಪಂಗಡಗಳಿಗೆ ವಿವೇಚನಾರಹಿತ ಬಲಪ್ರಯೋಗದ ಮೂಲಕ ಅನ್ವಯಿಸಿದರೆ, ಅದು ಅವುಗಳ ಅನನ್ಯತೆ ಮತ್ತು ವೈವಿಧ್ಯತೆಯನ್ನು ನಾಶಪಡಿಸುತ್ತದೆ, ”ಎಂದು ಪತ್ರ ಹೇಳಿದೆ.

ವಿಲ್ಸನ್ ಅವರು ಈ ವಿಷಯದ ಕುರಿತು ಸಭೆ, ಸಮಾಲೋಚನೆ, ಪ್ರಶ್ನಾವಳಿ ಪ್ರಕಟಿಸುವುದು ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಆಯೋಗ ಮಾಡಿದ ವೆಚ್ಚದ ವಿವರಗಳನ್ನು ಕೇಳಿದ್ದಾರೆ. ಅಲ್ಲದೆ ಆ ಸಮಾಲೋಚನೆಯಲ್ಲಿ ಭಾಗವಹಿಸಿದವರು, ಪ್ರತಿವಾದಿಗಳು ಹಾಗೂ ಸಲಹೆಗಾರರ ವಿವರಗಳನ್ನು ಮತ್ತು ಭಾರತದ 21 ನೇ ಕಾನೂನು ಆಯೋಗವು ಬಿಡುಗಡೆ ಮಾಡಿದ ಪತ್ರಿಕೆಯಲ್ಲಿ ಮಾಡಿದ ಶಿಫಾರಸುಗಳು ಮತ್ತು ಸಲಹೆಗಳ ಮೇಲೆ ತೆಗೆದುಕೊಂಡ ಕ್ರಮಗಳನ್ನು ಅವರು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com