

ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಡಿಜಿಟಲ್ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳ ನೇಮಕಾತಿ ಕುರಿತು ಕೇರಳ ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ನಡುವಿನ ಬಿಕ್ಕಟ್ಟು ಬಗೆಹರಿದಿರುವ ವಿಚಾರವನ್ನು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಯಿತು [ಕುಲಪತಿಗಳು, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ನ್ಯಾಯಾಲಯವೇ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ನೇತೃತ್ವದ ಸಮಿತಿಯ ಕಾರ್ಯವನ್ನು ಸುಪ್ರೀಂ ಕೋರ್ಟ್ ಪ್ರಶಂಸಿಸಿದ್ದು, ಬಿಕ್ಕಟ್ಟು ಬಗೆಹರಿಯಲು ಸಹಕರಿಸಿದ ಎಲ್ಲ ಕಕ್ಷಿದಾರರನ್ನು ಶ್ಲಾಘಿಸಿದೆ ಅದನ್ನು ಆದೇಶದಲ್ಲಿ ದಾಖಲಿಸಿದೆ.
ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಡಿಜಿಟಲ್ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಾತಿ ಕುರಿತಾಗಿ ಕೇರಳ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಉಂಟಾಗಿದ್ದ ಗೊಂದಲ ಈಗ ಪರಿಹಾರವಾಗಿದೆ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠಕ್ಕೆ ರಾಜ್ಯಪಾಲರ ಪರವಾಗಿ ಅಟಾರ್ನಿ ಜನರಲ್ (ಎಜಿ) ಎನ್ ವೆಂಕಟರಮಣಿ ಮತ್ತು ಕೇರಳ ಸರ್ಕಾರದ ಪರವಾಗಿ ಹಿರಿಯ ವಕೀಲ ಜೈದೀಪ್ ಗುಪ್ತಾ ತಿಳಿಸಿದರು.
ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯಪಾಲರೇ ಮುಖ್ಯಮಂತ್ರಿಗೆ ಕರೆ ಮಾಡಿದ್ದಾರೆ ಎಂದು ಎಜಿ ವೆಂಕಟರಮಣಿ ಹೇಳಿದರು. ನ್ಯಾಯಮೂರ್ತಿ ಪಾರ್ದಿವಾಲಾ ಅವರು, ಮುಂದಿನ ದಿನಗಳಲ್ಲಿಯೂ ಪ್ರಾಧಿಕಾರಿಗಳು ಇದೇ ರೀತಿಯಲ್ಲಿ ಪರಸ್ಪರ ಸಂವಾದ ನಡೆಸಿ, ದೇಶದ ಹಿತದೃಷ್ಟಿಯಿಂದ ವಿಷಯಗಳನ್ನು ಬಗೆಹರಿಸಿಕೊಳ್ಳಲಿ ಎಂಬ ಆಶಯ ವ್ಯಕ್ತಪಡಿಸಿದರು.
ಎರಡು ವಿಶ್ವವಿದ್ಯಾಲಯಗಳಿಗೆ ಉಪ ಕುಲಪತಿಗಳ ನೇಮಕಾತಿ ವಿಚಾರದಲ್ಲಿ ರಾಜ್ಯಪಾಲರು ಮತ್ತು ಕೇರಳ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ತಲೆದೋರಿ ಈ ವಿಚಾರ ಬಾಕಿ ಉಳಿದಿತ್ತು. ವಿಶ್ವವಿದ್ಯಾಲಯ ಕುಲಪತಿಗಳಿಲ್ಲದೆ ಉಳಿಯದಂತೆ ನೋಡಿಕೊಳ್ಳುವಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಮಹತ್ತರ ಕೆಲಸ ಮಾಡಿದೆ ಎಂದು ನ್ಯಾಯಾಲಯ ಹೇಳಿದೆ.
ರಾಜ್ಯಪಾಲ ಮತ್ತು ಸರ್ಕಾರದ ನಡುವಿನ ಸಂಘರ್ಷದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ಹಾಗೂ ಬೋಧಕ–ಬೋಧಕೇತರ ಸಿಬ್ಬಂದಿಯ ಹಿತವೇ ತನ್ನ ಪ್ರಾಥಮಿಕ ಕಾಳಜಿ ಎಂದು ನ್ಯಾಯಾಲಯ ಹೇಳಿತು. ಆದರೆ ಅರ್ಜಿಯಲ್ಲಿ ಉಲ್ಲೇಖಿಸಲಾದ ಉಳಿದ ಕಾನೂನು ಪ್ರಶ್ನೆಗಳನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ವಿಚಾರಣೆ ಅಂತ್ಯಗೊಳ್ಳುವ ಮೊದಲು, ಹಿರಿಯ ವಕೀಲ ಗುಪ್ತ ಅವರು, ನ್ಯಾಯಾಲಯದ ಮಧ್ಯಪ್ರವೇಶ ಇಲ್ಲದಿದ್ದರೆ ಈ ಒಮ್ಮತ ಮೂಡುತ್ತಿರಲಿಲ್ಲ ಎಂದು ಹೇಳಿದರು.