ಮಸೂದೆ ಬಗ್ಗೆ ರಾಜ್ಯಪಾಲರ ನಿಷ್ಕ್ರಿಯತೆ ಕುರಿತು ಎಚ್ಚರಿಸಿದರೆ ಅದು ಸುಳ್ಳು ಎನಿಸಿಕೊಳ್ಳುವುದೇ? ಸುಪ್ರೀಂ ಪ್ರಶ್ನೆ

1970ರಿಂದ 2025ರವರೆಗೆ 17,000 ಮಸೂದೆಗಳಲ್ಲಿ ಕೇವಲ 20 ಮಸೂದೆಗಳನ್ನು ಮಾತ್ರ ತಡೆಹಿಡಿಯಲಾಗಿದೆ ಎಂದು ಎಸ್‌ಜಿ ಮೆಹ್ತಾ ಹೇಳಿದರು.
TN Governor RN Ravi, Supreme Court
TN Governor RN Ravi, Supreme Court
Published on

ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳ ಕುರಿತು ರಾಜ್ಯಪಾಲರು ನಿಷ್ಕ್ರಿಯರಾಗಿರುತ್ತಾರೆ ಎಂದು ಸುಳ್ಳು ಎಚ್ಚರಿಕೆ ನೀಡಲಾಗುತ್ತಿದೆ ಎಂಬ ಕೇಂದ್ರ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ.

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎಂಬ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಮಾಡಿದ ಶಿಫಾರಸ್ಸನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ , ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್ ಚಂದೂರ್ಕರ್ ಅವರಿದ್ದ ಸಾಂವಿಧಾನಿಕ ಪೀಠ ಈ ಪ್ರಶ್ನೆ ಕೇಳಿತು.

Also Read
ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ವಿಟೋ ಅಧಿಕಾರ ಇಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ, ಕೇರಳ ವಾದ

ರಾಜ್ಯಪಾಲರೆದುರು 4 ವರ್ಷಗಳಷ್ಟು  ದೀರ್ಘ ಕಾಲ ಮಸೂದೆ ಬಾಕಿ ಉಳಿದರೆ ಏನು ಮಾಡುತ್ತೀರಿ ಎಂದು ಸಿಎಐ ಗವಾಯಿ ಅವರು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ ಅವರು 1970ರಿಂದ 2025ರವರೆಗೆ 17,000 ಮಸೂದೆಗಳಲ್ಲಿ ಕೇವಲ 20 ಮಸೂದೆಗಳನ್ನು ಮಾತ್ರ ರಾಜ್ಯಪಾಲರುಗಳು ತಡೆ ಹಿಡಿದಿದ್ದಾರೆ ಹಾಗೂ 90% ಮಸೂದೆಗಳಿಗೆ ಒಂದು ತಿಂಗಳೊಳಗೆ ಅನುಮೋದನೆ ದೊರೆತಿದೆ ಎಂದರು.

ಆದರೆ ಇದು ಏಕಪಕ್ಷೀಯ ಮಾಹಿತಿ ಎಂದು ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ಆಕ್ಷೇಪಿಸಿದರು. ತಮ್ಮದೇ ಆದ ದತ್ತಾಂಶ ಪ್ರಸ್ತುತಪಡಿಸುವ ಬಗ್ಗೆ ಎಸ್‌ಜಿ ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದರು ಎಂದರು.

ದತ್ತಾಂಶ ಏಕಪಕ್ಷೀಯವಾಗಿರಬಾರದು ಎಂದ ನ್ಯಾಯಾಲಯ ಮೆಹ್ತಾ ಅವರ ಅಂಕಿ ಅಂಶಗಳ ಪ್ರಸ್ತುತತೆಯನ್ನು ಕೂಡ ಪ್ರಶ್ನಿಸಿತು.

Also Read
ಏಕ ರಾಷ್ಟ್ರ ಏಕ ಚುನಾವಣಾ ಮಸೂದೆ ಸಂವಿಧಾನಬಾಹಿರವಲ್ಲ, ಆದರೆ ಇನ್ನಷ್ಟು ಸುಧಾರಣೆ ಆಗಬೇಕು: ನಿವೃತ್ತ ಸಿಜೆಐ ಚಂದ್ರಚೂಡ್

 (ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತ ಚುಕ್ಕಾಣಿ ಹಿಡಿದ) 2014ಕ್ಕಿಂತ ಮೊದಲು ಏನು ನಡೆಯಿತು ಮತ್ತು ನಂತರ ಏನು ನಡೆಯುತ್ತಿದೆ ಎಂಬುದು ನ್ಯಾಯಾಲಯಕ್ಕೆ ಪ್ರಸ್ತುತವಲ್ಲ ಎಂದು ನ್ಯಾ. ನಾಥ್ ಹೇಳಿದರು. ಮೆಹ್ತಾ ಅವರು ಗುರುವಾರ ತಮ್ಮ ವಾದ ಮುಂದುವರೆಸಲಿದ್ದು ರಾಷ್ಟ್ರಪತಿಗಳ ಶಿಫಾರಸ್ಸಿನ ಕುರಿತಾದ ತೀರ್ಪನ್ನು ನಾಳೆ ಕಾಯ್ದಿರಿಸುವ ಸಾಧ್ಯತೆ ಇದೆ.

ತೆಲಂಗಾಣ ಸರ್ಕಾರದ ಪರವಾಗಿ ಹಿರಿಯ ವಕೀಲ ನಿರಂಜನ್ ರೆಡ್ಡಿ, ರಾಜಕೀಯ ಪಕ್ಷವೊಂದರ ಪರವಾಗಿ ಹಿರಿಯ ನ್ಯಾಯವಾದಿ ಪಿ ವಿಲ್ಸನ್‌, ವಕೀಲೆ ಅವನಿ ಬನ್ಸಾಲ್‌, ಮೇಘಾಲಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಅಮಿತ್ ಕುಮಾರ್, ವಕೀಲರೊಬ್ಬರು ಮತ್ತು ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕರೊಬ್ಬರ ಪರವಾಗಿ ಹಿರಿಯ ನ್ಯಾಯವಾದಿ ಗೋಪಾಲ್‌ ಶಂಕರನಾರಾಯಣನ್‌, ಆಂಧ್ರಪ್ರದೇಶ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಸಿದ್ಧಾರ್ಥ್‌ ಲೂತ್ರಾ ವಾದ ಮಂಡಿಸಿದರು.

Kannada Bar & Bench
kannada.barandbench.com