
ಬುಡಕಟ್ಟು ಮಹಿಳೆಯರು ಅಥವಾ ಅವರ ಉತ್ತರಾಧಿಕಾರಿಗಳಿಗೆ ಪೂರ್ವಜರ ಆಸ್ತಿಯ ಆನುವಂಶಿಕ ಹಕ್ಕು ದೊರೆಯದಂತೆ ಮಾಡುವುದಕ್ಕೆ ಸಾಬೀತುಪಡಿಸಲಾಗದ ಪದ್ಧತಿಗಳನ್ನು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ [ರಾಮ್ ಚರಣ್ ಮತ್ತು ಸುಖ್‌ರಾಮ್ ನಡುವಣ ಪ್ರಕರಣ] .
ಅಂತಹ ಆನುವಂಶಿಕತೆ ನಿಷೇಧಿಸುವ ವೈಯಕ್ತಿಕ ಕಾನೂನು ಅಥವಾ ಸಾಬೀತುಪಡಿಸಬಹುದಾದ ಪದ್ಧತಿ ಇಲ್ಲದಿದ್ದಾಗ, ನ್ಯಾಯಾಲಯಗಳು ನ್ಯಾಯ, ಸಮಾನತೆ ಮತ್ತು ಉತ್ತಮ ಆತ್ಮಸಾಕ್ಷಿಯ ತತ್ವವನ್ನು ಆಧರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿದೆ.
ಅಂತೆಯೇ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಆಚರಣೆಗಳು ವಿಕಸನಗೊಳ್ಳಬೇಕು. ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಹಳೆಯ ಪದ್ದತಿಗಳನ್ನು ಗುರಾಣಿಯಾಗಿ ಬಳಸುವಂತಿಲ್ಲ ಎಂದು ಅದು ಹೇಳಿದೆ.
ಕಾನೂನಿನಂತೆಯೇ ಆಚರಣೆಗಳು ಕೂಡ ಗತಕಾಲದಲ್ಲಿ ಸಿಲುಕಿಕೊಳ್ಳಬಾರದು. ಜನರ ಹಕ್ಕುಗಳನ್ನು ಕಸಿದುಕೊಳ್ಳುವುದಕ್ಕಾಗಿ ಆಚರಣಾಪದ್ದತಿಗಳ ಆಶ್ರಯ ಪಡೆಯಲು ಅಥವಾ ಅವುಗಳ ಹಿಂದೆ ಅಡಗಿಕೊಳ್ಳಲು ಉಳಿದವರನ್ನು ಬಿಡಬಾರದು ಎಂದು ನ್ಯಾಯಾಲಯ ಹೇಳಿದೆ.
ಬುಡಕಟ್ಟು ಮಹಿಳೆಯೊಬ್ಬಳ ಉತ್ತರಾಧಿಕಾರಿಗಳು ಆಕೆಯ ತಂದೆಗೆ ಸೇರಿದ ಆಸ್ತಿಯಲ್ಲಿ ಪಾಲಿಗಾಗಿ ಒತ್ತಾಯಿಸಿದ್ದು ಆಸ್ತಿ ವ್ಯಾಜ್ಯಕ್ಕೆ ಕಾರಣವಾಗಿತ್ತು. ಪರಿಶಿಷ್ಟ ಪಂಗಡದ ಹೆಣ್ಣುಮಕ್ಕಳಿಗೆ ಆಸ್ತಿಯ ಆನುವಂಶಿಕತೆಯನ್ನು ನೀಡುವ ಯಾವುದೇ ಪದ್ಧತಿ ಇರುವುದನ್ನು ಅರ್ಜಿದಾರರು ಸಾಬೀತುಪಡಿಸಿಲ್ಲ ಎಂದು ತಿಳಿಸಿ ಕೆಳ ಹಂತದ ನ್ಯಾಯಾಲಯಗಳು ಅವರಿಗೆ ಪರಿಹಾರ ನಿರಾಕರಿಸಿದ್ದವು.
ಅಂತಹ ಯಾವುದೇ ಪದ್ದತಿ ಇರುವುದು ಸಾಬೀತಾಗದ ಕಾರಣ ಮತ್ತು ಹಿಂದೂ ಉತ್ತರಾಧಿಕಾರ ಕಾಯಿದೆ ಪರಿಶಿಷ್ಟ ಪಂಗಡಗಳಿಗೆ ಅನ್ವಯವಾಗದ ಕಾರಣ ಮೊಕದ್ದಮೆ ಊರ್ಜಿತವಲ್ಲ ಎಂದು ಹೈಕೋರ್ಟ್ ಕೂಡ ತಿಳಿಸಿತ್ತು.
ಆದರೆ ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್ ನೀಡಿರುವ ತೀರ್ಪುಗಳು ದೋಷದಿಂದ ಕೂಡಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಚಾಲ್ತಿಯಲ್ಲಿರುವ ಪದ್ಧತಿ ಮಹಿಳೆಯರನ್ನು ಆನುವಂಶಿಕತೆಯಿಂದ ಹೊರಗಿಡುತ್ತದೆ ಎಂದು ಕೆಳ ನ್ಯಾಯಾಲಯಗಳು ತಪ್ಪಾಗಿ ಭಾವಿಸಿವೆ. ಜೊತೆಗೆ ಅಂತಹ ಆಸ್ತಿ ದೊರೆಯದಂತೆ ಮಾಡುವ ಪದ್ದತಿ ಅಸ್ತಿತ್ವದಲ್ಲಿಲ್ಲ ಎಂದು ಸಾಬೀತುಪಡಿಸುವ ಹೊಣೆಯನ್ನು ನ್ಯಾಯಾಲಯಗಳು ಅರ್ಜಿದಾರರಿಗೆ ವಹಿಸಿವೆ ಎಂದು ಅದು ತಿಳಿಸಿದೆ.
ಮಹಿಳಾ ಉತ್ತರಾಧಿಕಾರವನ್ನು ನಿಷೇಧಿಸುವ ಯಾವುದೇ ಸಾಬೀತುಪಡಿಸುವಂತಹ ಪದ್ಧತಿ ಇಲ್ಲದಿದ್ದರೆ, ಮಹಿಳೆ ಅಥವಾ ಅವಳ ಉತ್ತರಾಧಿಕಾರಿಗಳಿಗೆ ಸಮಾನ ಆಸ್ತಿ ಹಕ್ಕುಗಳನ್ನು ನಿರಾಕರಿಸುವುದು ತಾರತಮ್ಯಕ್ಕೆ ಸಮನಾಗಿರುತ್ತದೆ ಎಂದು ಅದು ಹೇಳಿದೆ.
ಅಂತೆಯೇ ಬುಡಕಟ್ಟು ಮಹಿಳೆಯ ಕಾನೂನುಬದ್ಧ ಉತ್ತರಾಧಿಕಾರಿಗಳಾಗಿರುವ ಅರ್ಜಿದಾರರು ಪೂರ್ವಜರ ಆಸ್ತಿಯಲ್ಲಿ ತಮ್ಮ ಪಾಲು ಪಡೆಯಲು ಅರ್ಹರು ಎಂದು ಪೀಠ ತೀರ್ಪು ನೀಡಿತು. ವಿಚಾರಣಾ ನ್ಯಾಯಾಲಯ, ಮೊದಲ ಮೇಲ್ಮನವಿ ನ್ಯಾಯಾಲಯ (ಜಿಲ್ಲಾ ನ್ಯಾಯಾಲಯ) ಹಾಗೂ ಹೈಕೋರ್ಟ್ ತೀರ್ಪುಗಳನ್ನು ಅದು ರದ್ದುಗೊಳಿಸಿತು.