
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಅವರ ಕುಟುಂಬ ಭೋಪಾಲ್ ನವಾಬರ ವೈಯಕ್ತಿಕ ಆಸ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗಳು ಎಂದು ತೀರ್ಪು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ [ಬೇಗಂ ಸುರೈಯಾ ರಾಶಿ ಮತ್ತಿತರರು ಹಾಗೂ ಬೇಗಂ ಮೆಹರ್ ತಾಜ್ ನವಾಬ್ ಸಾಜಿದಾ ಸುಲ್ತಾನ್ ಇನ್ನಿತರರ ನಡುವಣ ಪ್ರಕರಣ].
ಪ್ರಸ್ತುತ ಈ ಆಸ್ತಿಗಳ ಮೌಲ್ಯ ₹15,000 ಕೋಟಿ ಎಂದು ಅಂದಾಜಿಸಲಾಗಿದೆ. ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಆಧಾರವಾಗಿದ್ದ ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ದ್ವಿವೇದಿ ತಿಳಿಸಿದರು.
ನವಾಬರ ಖಾಸಗಿ ಆಸ್ತಿಗಳು ಭೋಪಾಲ್ ರಾಜಮನೆತನದ ಭಾಗವಾಗಿದ್ದು ರಾಜಮನೆತನದ ಉತ್ತರಾಧಿಕಾರಿ ಸೈಫ್ ಅಲಿ ಖಾನ್ ಅವರ ಅಜ್ಜಿಗೆ ಆ ಆಸ್ತಿ ವರ್ಗಾವಣೆಯಾಗುತ್ತದೆ ಎಂದು ತೀರ್ಪು ನೀಡಿತ್ತು.
ಸೈಫ್ ಅಲಿ ಖಾನ್, ಅವರ ತಾಯಿ ಶರ್ಮಿಳಾ ಟ್ಯಾಗೋರ್ ಮತ್ತು ಸಹೋದರಿಯರಾದ ಸೋಹಾ ಅಲಿ ಖಾನ್ ಮತ್ತು ಸಬಾ ಅಲಿ ಖಾನ್ ಅವರು ತಮ್ಮ ತಂದೆಯ ತಾಯಿ ಸಾಜಿದಾ ಸುಲ್ತಾನ್ ಮೂಲಕ ಆಸ್ತಿ ಪಡೆದಿದ್ದರು.
ಸಾಜಿದಾ ಸುಲ್ತಾನರ ತಂದೆ ಹಮೀದುಲ್ಲಾ ಖಾನ್, 1949ರಲ್ಲಿ ಭಾರತದೊಂದಿಗೆ ವಿಲೀನಗೊಂಡ ಭೋಪಾಲ್ ರಿಯಾಸತ್‌ನ ನವಾಬರಾಗಿದ್ದರು. 1960ರಲ್ಲಿ ಹಮೀದುಲ್ಲಾ ಖಾನ್ ನಿಧನರಾದ ನಂತರ, ಸಾಜಿದಾ ಸುಲ್ತಾನರು ನವಾಬರಾದರು. ಸಿಂಹಾಸನ ಸಾಮಾನ್ಯವಾಗಿ ಸಾಜಿದಾ ಸುಲ್ತಾನರ ಅಕ್ಕ ಅಬಿದಾ ಸುಲ್ತಾನರಿಗೆ ಹಸ್ತಾಂತರವಾಗಬೇಕಿತ್ತು. ಆದರೆ ಅವರು 1950ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದರು.
1962ರಲ್ಲಿ, ಭಾರತ ಸರ್ಕಾರ ನವಾಬ್ ಹಮೀದುಲ್ಲಾ ಖಾನ್ ಅವರ ವೈಯಕ್ತಿಕ ಆಸ್ತಿಯನ್ನು ಸಾಜಿದಾ ಸುಲ್ತಾನ್ ಅವರ ಖಾಸಗಿ ಆಸ್ತಿ ಎಂದು ಘೋಷಿಸಿತು. ಆದರೆ ನವಾಬ್ ಹಮೀದುಲ್ಲಾ ಖಾನ್ ಅವರ ಇತರ ಕುಟುಂಬ ಸದಸ್ಯರು, ಅವರ ಸಹೋದರ ಒಬೈದುಲ್ಲಾ ಖಾನ್ ಮತ್ತು ಅವರ ಮೂರನೇ ಮಗಳು ರಬಿಯಾ ಸುಲ್ತಾನ್ ಅವರ ವಂಶಸ್ಥರು ಸಾಜಿದಾ ಸುಲ್ತಾನ್ ಅವರಿಗೆ ಆಸ್ತಿಗಳನ್ನು ವರ್ಗಾಯಿಸುವುದನ್ನು ಪ್ರಶ್ನಿಸಿದ್ದರು.
ಸಾಜಿದಾ ಸುಲ್ತಾನ್ ಅವರನ್ನು ನವಾಬರ ಆಸ್ತಿಯ ಮಾಲೀಕರು ಎಂದು ಗುರುತಿಸುವ ಭಾರತ ಸರ್ಕಾರದ ಆದೇಶ ಕಾನೂನುಬದ್ಧವಲ್ಲ ಏಕೆಂದರೆ ಅವರ ಮರಣದ ನಂತರ, ಅವರ ವೈಯಕ್ತಿಕ ಆಸ್ತಿಯ ವಿಭಜನೆಯನ್ನು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಉತ್ತರಾಧಿಕಾರಿಗಳ ನಡುವೆ ಮಾಡಬೇಕಿತ್ತು ಎಂದು ಅವರು ವಾದಿಸಿದ್ದರು.
ಸೈಫ್ ಅಲಿ ಖಾನ್ ಮತ್ತು ಅವರ ಕಡೆಯವರು ನವಾಬರ ಆಸ್ತಿಗಳ ವರ್ಗಾವಣೆಯು ಭೋಪಾಲ್ ರಿಯಾಸತ್ ಮತ್ತು ಭಾರತದ ನಡುವಿನ ವಿಲೀನ ಒಪ್ಪಂದದಿಂದ ನಿಯಂತ್ರಿಸಲ್ಪಡುತ್ತದೆ, ವೈಯಕ್ತಿಕ ಕಾನೂನಿನಿಂದಲ್ಲ ಎಂದು ವಾದಿಸಿದರು.
ವಿಲೀನ ಒಪ್ಪಂದದ ನಿಯಮಗಳ ಪ್ರಕಾರ, ಭೋಪಾಲ್ ರಾಜಮನೆತನದ ಆಸ್ತಿ ಮುಂದಿನ ಆಡಳಿತಗಾರನಿಗೆ ಸಲ್ಲಬೇಕು. ಭಾರತ ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ ಮುಂದಿನ ಆಡಳಿತಗಾರ ನವಾಬ್ ಸಾಜಿದಾ ಸುಲ್ತಾನ್ ಎಂದು ವಾದಿಸಲಾಗಿತ್ತು.
ಸಾಜಿದಾ ಸುಲ್ತಾನನ ಉತ್ತರಾಧಿಕಾರಿಗಳು ಮಾತ್ರ ನವಾಬರ ಆಸ್ತಿಯ ಮಾಲೀಕತ್ವದ ಹಕ್ಕನ್ನು ಪಡೆಯಬಹುದು. ಬೇರೆ ಯಾರೂ ಅಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ವಾದ ಆಲಿಸದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಆದೇಶವು 1996ರ ಕುಮಾರಿ ತಲಾತ್ ಫಾತಿಮಾ ಹಸನ್ ಮತ್ತು ನವಾಬ್ ಸೈಯದ್ ಮುರ್ತಾಜಾ ಅಲಿ ಖಾನ್ ಸಾಹಿಬ್ ಬಹದ್ದೂರ್ ಮತ್ತಿತರರ ನಡುವಣ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನು ಆಧರಿಸಿದೆ ಎಂದು ಹೈಕೋರ್ಟ್ ತಿಳಿಸಿತು. ಈ ಪ್ರಕರಣ ರಾಂಪುರದ ನವಾಬರ ಆಸ್ತಿ ಉತ್ತರಾಧಿಕಾರಕ್ಕೆ ಸಂಬಂಧಿಸಿದೆ.
2019ರಲ್ಲಿ ಸುಪ್ರೀಂ ಕೋರ್ಟ್ ʼ ಸಾಂವಿಧಾನಿಕ ವಕೀಲ ಸೈಯದ್ ಮೆಹದಿ ಹುಸೇನ್ ಮತ್ತು ಸೈಯದ್ ಮುರ್ತಾಜಾ ಅಲಿ ಖಾನ್ (ಮೃತ) ಅವರ ಕಾನೂನು ಪ್ರತಿನಿಧಿಗಳು ಮತ್ತಿತರರ ನಡುವಣ ಪ್ರಕರಣದಲ್ಲಿ ನೀಡಿದ ತೀರ್ಪನ್ನು ರದ್ದುಗೊಳಿಸಿದೆ ಎಂದು ನ್ಯಾ. ದ್ವಿವೇದಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಹೊಸದಾಗಿ ತೀರ್ಮಾನಿಸುವಂತೆ ಅವರು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದರು.