ಮೈಸೂರಿನ ಗನ್‌ ಹೌಸ್‌ನಲ್ಲಿ ಶಿವರಾತ್ರಿ ರಾಜೇಂದ್ರ ಶ್ರೀ ಪುತ್ಥಳಿ ಅನಾವರಣಗೊಳಿಸದಂತೆ ಸರ್ಕಾರಕ್ಕೆ ಸುಪ್ರೀಂ ಆದೇಶ

ಸಾರ್ವಜನಿಕ ಸ್ಥಳದಲ್ಲಿ ಪ್ರತಿಮೆ ನಿರ್ಮಾಣವು ಸುಪ್ರೀಂ ಕೋರ್ಟ್‌ 2013ರ ಜನವರಿ 18ರಂದು ಮಾಡಿರುವ ಆದೇಶಕ್ಕೆ ವಿರುದ್ಧ ಎಂದು ಮೇಲ್ನೋಟಕ್ಕೆ ನಮಗೆ ಅನ್ನಿಸಿದೆ ಎಂದಿರುವ ಸರ್ವೋಚ್ಚ‌ ನ್ಯಾಯಾಲಯ.
Sri Shivaratri Rajendra Swamiji and SC
Sri Shivaratri Rajendra Swamiji and SC

ಮೈಸೂರಿನ ಗನ್‌ ಹೌಸ್‌ ವೃತ್ತದಲ್ಲಿ ನಿರ್ಮಿಸಲಾಗಿರುವ ಶ್ರೀ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ಪುತ್ಥಳಿಯನ್ನು ಮುಂದಿನ ಆದೇಶದವರೆಗೆ ಅನಾವರಣಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಈಚೆಗೆ ಆದೇಶಿಸಿದೆ.

ಮೈಸೂರಿನ ಗಿರಿಯಾಭೋವಿ ಪಾಳ್ಯ ನಿವಾಸಿ ಸುಬ್ರಹ್ಮಣ್ಯ ಮತ್ತು ಕುರುಬರಹಳ್ಳಿ ನಿವಾಸಿ ಎನ್ ಶೀಲಾವತಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ, ಪ್ರಶಾಂತ್‌ ಕುಮಾರ್‌ ಮಿಶ್ರಾ ಮತ್ತು ಸಂದೀಪ್‌ ಮೆಹ್ತಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿ ವಿಚಾರಣೆ ನಡೆಸಿದ ಪೀಠವು “ಸಾರ್ವಜನಿಕ ಸ್ಥಳದಲ್ಲಿ ಪ್ರತಿಮೆ ನಿರ್ಮಾಣವು ಸುಪ್ರೀಂ ಕೋರ್ಟ್‌ 2013ರ ಜನವರಿ 18ರಂದು ಮಾಡಿರುವ ಆದೇಶಕ್ಕೆ ವಿರುದ್ಧ ಎಂದು ಮೇಲ್ನೋಟಕ್ಕೆ ನಮಗೆ ಅನ್ನಿಸಿದೆ. ಹೀಗಾಗಿ, ಮುಂದಿನ ಆದೇಶದವರೆಗೆ ಶ್ರೀ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ಪುತ್ಥಳಿ ಅನಾವರಣ ಮಾಡಬಾರದು” ಎಂದು ಆದೇಶಿಸಿದೆ.

ಜನವರಿ 2ರಂದು ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ “ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಅಗತ್ಯ ಸೂಚನೆ ಪಡೆದು, ಸೂಕ್ತ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕಾಗಿ ಸಮಯ ಕೋರಿದ್ದು, ಎರಡು ವಾರ ನೀಡಲಾಗಿದೆ. ಅರ್ಜಿದಾರರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಪುತ್ಥಳಿಯನ್ನು ಜನವರಿ 4ರಂದು ಅನಾವರಣ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪುತ್ಥಳಿ ಅನಾವರಣ ಕಾರ್ಯಕ್ರಮ ಆಯೋಜಿಸಿರುವ ಆಹ್ವಾನ ಪತ್ರಿಕೆ ನೀಡುವಂತೆ ಅರ್ಜಿದಾರರಿಗೆ ತಿಳಿಸಲಾಗಿದೆ. ಆದರೆ, ಅದನ್ನು ನೀಡಿಲ್ಲವಾದ್ದರಿಂದ ಮಧ್ಯಂತರ ಆದೇಶ ಮಾಡುವ ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸಲಾಗಿದೆ” ಎಂದು ಆದೇಶಿಸಿತ್ತು.

Also Read
ಮೈಸೂರಿನ ಗನ್‌ಹೌಸ್‌ ವೃತ್ತದಲ್ಲಿ ಸುತ್ತೂರು ಶ್ರೀ ಪುತ್ಥಳಿ: 2 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

ಮೈಸೂರಿನ ಗನ್‌ ಹೌಸ್‌ ಸರ್ಕಲ್‌ನಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪುತ್ಥಳಿಯನ್ನು ಇತ್ತೀಚೆಗೆ ರಾತ್ರೋರಾತ್ರಿ ಪ್ರತಿಷ್ಠಾಪಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸ್ಥಳದಲ್ಲಿ ಪ್ರತಿಭಟನೆ ನಡೆದಿವೆ. ಸ್ವಾಮೀಜಿ ಪ್ರತಿಮೆಯನ್ನು ಅನಧಿಕೃತವಾಗಿ ಸ್ಥಾಪಿಸಲಾಗಿದೆ. ಆದ್ದರಿಂದ ಸ್ವಾಮೀಜಿಯ ಪುತ್ಥಳಿಯನ್ನು ತೆರವುಗೊಳಿಸಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿದೆ.

Attachment
PDF
Subramanya and others Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com