ಮುಸ್ಲಿಂ ಸಹಪಾಠಿಯ ಕಪಾಳಮೋಕ್ಷಕ್ಕೆ ಸೂಚನೆ: ಶಿಕ್ಷಕಿಗೆ ಉತ್ತರ ಪ್ರದೇಶ ನ್ಯಾಯಾಲಯ ಜಾಮೀನು

ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿರುದ್ಧದ ಹಿಂಸೆ ತಡೆಯಲು ಕೋರಿ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಇದರ ವಿಚಾರಣೆ ವೇಳೆ ಪೀಠವು ವಿವಿಧ ನಿರ್ದೇಶನಗಳನ್ನು ನೀಡಿದೆ.
Gavel
Gavel
Published on

ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಹೋಮ್‌ವರ್ಕ್‌ ಮಾಡದಿದ್ದ ಮುಸ್ಲಿಂ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡುವಂತೆ ಅನ್ಯಧರ್ಮದ ವಿದ್ಯಾರ್ಥಿಗಳಿಗೆ ಸೂಚಿಸಿದ್ದ ಶಿಕ್ಷಕಿ ತೃಪ್ತಾ ತ್ಯಾಗಿಗೆ ಉತ್ತರ ಪ್ರದೇಶ ಮುಜಾಫರ್‌ನಗರ ನ್ಯಾಯಾಲಯ ಡಿಸೆಂಬರ್ 5ರಂದು ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದು ತನಿಖೆಯ ಸಮಯದಲ್ಲಿ ಆಕೆಯನ್ನು ಬಂಧಿಸಿರಲಿಲ್ಲ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು ಪೋಕ್ಸೊ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಅಲ್ಕಾ ಭಾರ್ತಿ ಅವರು ಶಿಕ್ಷಕಿಗೆ ಜಾಮೀನು ನೀಡಿದರು.

Also Read
ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಪ್ರಕರಣ: ಕೌನ್ಸೆಲಿಂಗ್‌ ಮಾಡಲು ಉ.ಪ್ರ. ಸರ್ಕಾರ ವಿಫಲ ಎಂದ ಸುಪ್ರೀಂ

ಶಿಕ್ಷಕಿ ತೃಪ್ತಾ ಅವರಿಗೆ 61 ವರ್ಷ ವಯಸ್ಸಾಗಿದ್ದು ಶೇ 40ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಅವರ ವಿರುದ್ಧದ ಅಪರಾಧಗಳಿಗೆ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಕಳೆದ ತಿಂಗಳು ಶಿಕ್ಷಕಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದ ಅಲಾಹಾಬಾದ್‌ ಹೈಕೋರ್ಟ್‌ ಎರಡು ವಾರಗಳಲ್ಲಿ ಸಂಬಂಧಪಟ್ಟ ನ್ಯಾಯಾಲಯದೆದುರು ಶರಣಾಗುವಂತೆ ಸೂಚಿಸಿತ್ತು. ಎರಡು ವಾರಗಳವರೆಗೆ ಅಥವಾ ಕೆಳ ನ್ಯಾಯಾಲಯದ ಮುಂದೆ ಶರಣಾಗುವವರೆಗೆ ಆಕೆಯ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್‌ ಆ ಸಂದರ್ಭದಲ್ಲಿ ತಿಳಿಸಿತ್ತು.

ಹೋಮ್‌ ವರ್ಕ್‌ ಮಾಡದ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಲು ಉಳಿದ ವಿದ್ಯಾರ್ಥಿಗಳಿಗೆ ಶಿಕ್ಷಕಿ ತೃಪ್ತಾ ತ್ಯಾಗಿ ಸೂಚಿಸಿದ್ದರು. ಇದರಂತೆ ಇತರ ವಿದ್ಯಾರ್ಥಿಗಳು ನಡೆದುಕೊಂಡಿದ್ದರು. ಈ ಘಟನೆಯ ನಂತರ ಮಾನಸಿಕವಾಗಿ ಕುಗ್ಗಿದ್ದ. ಮುಸ್ಲಿಂ ವಿದ್ಯಾರ್ಥಿಯ ಧರ್ಮವನ್ನು ಸಹ ಶಿಕ್ಷಕಿ ಅವಹೇಳನ ಮಾಡಿದ್ದರು ಎನ್ನಲಾಗಿತ್ತು. ಮಗುವಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ನಂತರ ಶಾಲೆಗೆ ಬೀಗ ಜಡಿಯಲಾಗಿತ್ತು.

Also Read
ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಪ್ರಕರಣ: ಉ.ಪ್ರ ಸರ್ಕಾರ ನಿರೀಕ್ಷೆಯಂತೆ ನಡೆಯಲಿಲ್ಲ ಎಂದು ಸುಪ್ರೀಂ ಬೇಸರ

ಆದರೆ ಕೋಮುಭಾವನೆಯಿಂದ ತಾನು ಹೀಗೆ ಮಾಡಿರಲಿಲ್ಲ ಎಂದಿದ್ದ ತೃಪ್ತಾ ಕ್ಷಮಾಪಣೆ ವೀಡಿಯೊ ಪ್ರಸಾರ ಮಾಡಿದ್ದರು.

ಪ್ರಕರಣದ ಬಗ್ಗೆ ನಿಗದಿತ ಗಡುವಿನೊಳಗೆ, ಸ್ವತಂತ್ರ ತನಿಖೆ ನಡೆಸಬೇಕು. ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರವನ್ನು ತಡೆಯುವಂತೆ ಕೋರಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯವು ಅನೇಕ ನಿರ್ದೇಶನಗಳನ್ನು ನೀಡಿದೆ.

Kannada Bar & Bench
kannada.barandbench.com