ಸೈಬರ್ ಅಪರಾಧ ಕುರಿತು ಉತ್ತರ ಪ್ರದೇಶ ಪೊಲೀಸರ ಕಳಪೆ ತನಿಖೆ: ಅಲಾಹಾಬಾದ್ ಹೈಕೋರ್ಟ್ ಗರಂ

ತನಿಖೆಯಲ್ಲಿ ಅಸಮರ್ಪಕತೆ ಅಥವಾ ವಿಚಾರಣಾ ನ್ಯಾಯಾಲಯ ಅತಿಯಾಗಿ ನಿಯಮಗಳಿಗೆ ಕಟ್ಟುಬಿದ್ದ ಕಾರಣಕ್ಕೆ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
Image sharing (Picture for representation)
Image sharing (Picture for representation)
Published on

ಮಹಿಳೆಯರ ಸಮ್ಮತಿ ಇಲ್ಲದೆ ಅವರ ಚಿತ್ರಗಳನ್ನು ಹಂಚಿಕೊಳ್ಳುವ, ಪ್ರಸಾರ ಮಾಡುವ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಪೊಲೀಸರ ಕಳಪೆ ಗುಣಮಟ್ಟದ ತನಿಖೆಯ ಬಗ್ಗೆ ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದೆ.

ಅಸಭ್ಯ ವೀಡಿಯೊ ಪ್ರಸಾರ ಸಮಾಜಕ್ಕೆ ಹೊಸ ಅಪಾಯ ತಂದೊಡ್ಡಿದ್ದು ಮಹಿಳೆಯರು ದುರ್ಬಲ ಬಲಿಪಶುಗಳಾಗಿದ್ದಾರೆ ಎಂದು ನ್ಯಾ. ಅಜಯ್ ಭಾನೋಟ್ ಹೇಳಿದರು.

ಸೈಬರ್ ಅಪರಾಧಗಳ ಬಗ್ಗೆ ಪೊಲೀಸ್ ತನಿಖೆಯ ಕಳಪೆ ಗುಣಮಟ್ಟದ ಬಗ್ಗೆ ತಾನು ಪದೇ ಪದೇ ಕಳವಳ ವ್ಯಕ್ತಪಡಿಸುತ್ತಿದ್ದರೂ ಹೆಚ್ಚಿನ ಸುಧಾರಣೆಯಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

 “ಸೈಬರ್ ಅಪರಾಧಗಳು ಸಮಾಜಕ್ಕೆ ಮಾರಕವಾಗುತ್ತಿವೆ. ನಿರ್ದಿಷ್ಟವಾಗಿ ವ್ಯಕ್ತಿಗಳ ಅಸಭ್ಯ ಛಾಯಾಚಿತ್ರಗಳನ್ನು ಸೆರೆಹಿಡಿಯುವುದು, ಸಂಗ್ರಹಿಸುವುದು ಅಥವಾ ಡಿಜಿಟಲ್ ಸಾಧನಗಳ ಮೂಲಕ ರವಾನಿಸುವುದು ದೇಶದ ಸಾಮಾಜಿಕ ರಚನೆಗೆ ಧಕ್ಕೆ ತರುತ್ತಿದೆ. ಸಂತ್ರಸ್ತ ಮಹಿಳೆಯರು ಇಂತಹ ಅಪರಾಧಗಳಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ. ಈ ಅಪರಾಧಗಳು ಬಲಿಪಶುವಿಗೆ ಜೀವನ ಪರ್ಯಂತ ಆಘಾತಕಾರಿ ಪರಿಣಾಮ ಉಂಟುಮಾಡಬಹುದು ”ಎಂದು ನ್ಯಾಯಾಲಯ ವಿವರಿಸಿದೆ.

ಅಲ್ಲದೆ ಈ ಹಿಂದೆ ಎರಡು ಬಾರಿ ತಾನು ಎಚ್ಚರಿಕೆ ನೀಡಿದ್ದರೂ ಪೊಲೀಸರು ಕಾರ್ಯೋನ್ಮುಖರಾಗದೆ ಇರುವುದಕ್ಕೆ ಅದು ಬೇಸರ ವ್ಯಕ್ತಪಡಿಸಿದೆ.

ತನಿಖೆಯಲ್ಲಿ ಅಸಮರ್ಪಕತೆ ಅಥವಾ ವಿಚಾರಣಾ ನ್ಯಾಯಾಲಯ ಅತಿಯಾಗಿ ನಿಯಮಗಳಿಗೆ ಕಟ್ಟುಬಿದ್ದ ಕಾರಣಕ್ಕೆ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧವನ್ನು ಪರಿಗಣಿಸುವ ಹಂತದಲ್ಲಿ ತನಿಖೆಯ ಯಾವುದೇ ಲೋಪ ಪರಿಶೀಲಿಸುವುದು ವಿಚಾರಣಾ ನ್ಯಾಯಾಲಯದ ಜವಾಬ್ದಾರಿ ಎಂದು ಕೂಡ ಪೀಠ ಹೇಳಿದೆ.

Kannada Bar & Bench
kannada.barandbench.com