ಹೊಸ ಚೇಂಬರ್‌ಗಳ ಅವಳಿ ಹಂಚಿಕೆ ಪ್ರಶ್ನಿಸಿದ್ದ ವಕೀಲರೊಬ್ಬರ ಅರ್ಜಿ ಹಿಂಪಡೆಯಲು ತಿಳಿಹೇಳಿದ ನ್ಯಾ. ಚಂದ್ರಚೂಡ್

ಚೇಂಬರ್‌ಗಳ ಅವಳಿ ಹಂಚಿಕೆಯಿಂದ ಎರಡು ಪಟ್ಟು ವಕೀಲರಿಗೆ ಅನುಕೂಲವಾಗಲಿದೆ. ಇದು ದೆಹಲಿಯಂತಹ ಹವಾಮಾನ ವೈಪರೀತ್ಯದ ನಗರದಲ್ಲಿ ವರದಾನವಾಗಲಿದೆ ಎಂದು ಪೀಠ ಹೇಳಿತು.
Justice DY Chandrachud
Justice DY Chandrachud
Published on

ಒಂದು ಚೇಂಬರನ್ನು ಇಬ್ಬರು ಉಪಯೋಗಿಸುವ ಆಧಾರದ ಮೇಲೆ ಇತ್ತೀಚೆಗೆ ಹೊಸದಾಗಿ ನಿರ್ಮಿಸಲಾದ ಚೇಂಬರ್‌ ಹಂಚಿಕೆ ಮಾಡಿರುವುದನ್ನು ಪ್ರಶ್ನಿಸಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಕೀಲ ಸಮೂಹದ ವಿಶಾಲ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿಂಪಡೆಯುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ತಿಳಿ ಹೇಳಿತು.

ಚೇಂಬರ್‌ಗಳು ಹಂಚಿಕೊಳ್ಳಲು ಸಾಧ್ಯವಾಗದಷ್ಟು ಚಿಕ್ಕದಾಗಿರುವುದರಿಂದ ಒಬ್ಬರೇ ಬಳಸಲು ಅನುಕೂಲವಾಗುವಂತೆ ಹಂಚಿಕೆಮಾಡಬೇಕು ಎಂಬುದು ಅರ್ಜಿದಾರರ ವಾದವಾಗಿತ್ತು. ಆದರೆ ನ್ಯಾ. ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠ ಚೇಂಬರ್‌ಗಳ ಅವಳಿ ಹಂಚಿಕೆಯಿಂದ ಎರಡು ಪಟ್ಟು ವಕೀಲರಿಗೆ ಅನುಕೂಲವಾಗಲಿದೆ. ಇದು ದೆಹಲಿಯಂತಹ ಹವಾಮಾನ ವೈಪರೀತ್ಯದ ನಗರದಲ್ಲಿ ವರದಾನವಾಗಲಿದೆ ಎಂದು ಹೇಳಿತು.

ನೀವೇನೇ ಮಾಡಿದರೂ ಅದರಿಂದ ವಕೀಲ ವರ್ಗಕ್ಕೆ ತೊಂದರೆಯಾಗುತ್ತದೆ. 1975 ರಿಂದಲೂ ವಕೀಲರು ಕಾಯುತ್ತಿದ್ದಾರೆ. ನೀವು ಒಬ್ಬರಿಗೆ ಒಂದು ಚೇಂಬರ್‌ ಹಂಚಿ ಎಂದು ಹೇಳಿದರೆ ಆಗ ಅರ್ಧಕ್ಕರ್ಧ ವಕೀಲರಿಗೆ ಈ ಸೌಲಭ್ಯ ದೊರೆಯುವುದಿಲ್ಲ. ದೆಹಲಿಯಂತಹ ತೀವ್ರ ಉಷ್ಣತೆ ಇರುವ ನಗರಗಳಲ್ಲಿ ವಕೀಲರು ಹೊರಗೆ ಕುಳಿತುಕೆಲಸ ಮಾಡುವುದು ಎಷ್ಟು ಕಷ್ಟವಾಗುತ್ತದೆ ಎಂಬುದನ್ನು ಯೋಚಿಸಿ ಎಂದು ನ್ಯಾಯಾಲಯ ಹೇಳಿತು.

Also Read
ಇ-ಕೋರ್ಟ್‌ ಯೋಜನೆ ಮೂರನೇ ಹಂತದ ಸಿದ್ಧತೆ; ಸ್ವಂತ ಸರ್ವರ್‌ನಿಂದ ಸ್ಟ್ರೀಮಿಂಗ್‌, ರೆಕಾರ್ಡಿಂಗ್‌: ನ್ಯಾ. ಚಂದ್ರಚೂಡ್‌

ಒಂದು ಹಂತದಲ್ಲಿ ನ್ಯಾ. ಚಂದ್ರಚೂಡ್‌ ʼನಾನು ಮುಂಬೈನಲ್ಲಿ 120 ಚದರ ಅಡಿ ವಿಸ್ತೀರ್ಣದ ಚೇಂಬರ್‌ನಲ್ಲಿ ಕೆಲಸ ಮಾಡುತ್ತಿದ್ದೆ ಆಗಲೂ ನಾವು ನಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೆವು” ಎಂದರು. ಇದಕ್ಕೆ ದನಿಗೂಡಿಸಿದ ಹಿರಿಯ ವಕೀಲ ಶೇಖರ್‌ ನಾಫಡೆ “ಹಿರಿಯ ನ್ಯಾಯವಾದಿ ಫಾಲಿ ನಾರಿಮನ್‌ ಅವರು ನ್ಯಾಯಾಲಯದ ಪಡಸಾಲೆಯಲ್ಲೇ ಕೆಲಸ ಮಾಡುತ್ತಿದ್ದರು” ಎಂದು ಕಿವಿಮಾತು ಹೇಳಿದರು.


ಅರ್ಜಿದಾರ ವಕೀಲರ ಪರ ಹಾಜರಿದ್ದ ಹಿರಿಯ ನ್ಯಾಯವಾದಿ ಪಿ ಎಸ್‌ ಪಟ್ವಾಲಿಯಾ ಚೇಂಬರ್‌ ಹಂಚಿಕೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ತ್ರಿಸದಸ್ಯ ಸಮಿತಿ ಅವಳಿ ಹಂಚಿಕೆಗೆ ಆರಂಭದಲ್ಲಿ ವಿರೋಧ ವ್ಯಕ್ತವಾದಾಗ ಒಬ್ಬರೇ ಬಳಸಲು ಒಪ್ಪಿಗೆ ನೀಡಿತ್ತು. ನಿಯಮದ ಪ್ರಕಾರ ಯಾವಾಗಲೂ ಒಬ್ಬರಿಗೆ ಒಂದೇ ಚೇಂಬರ್‌ ಹಂಚಿಕೆಯಾಗಬೇಕು ಎಂದು ವಾದಿಸಿದರು.

ಆದರೆ ಸಮಿತಿಯಲ್ಲಿರುವವರು ಕೂಡ ವಕೀಲರೇ ಆಗಿದ್ದಾರೆ ಎಂದು ತಿಳಿಸಿದ ನ್ಯಾಯಾಲಯ ಮಧ್ಯಂತರ ಆದೇಶ ನೀಡಲು ನಿರಾಕರಿಸಿತು. "ಅರ್ಜಿದಾರರು ನಿಜವಾದ ಆತಂಕಗಳನ್ನು ಸಮಿತಿಯ ಮುಂದೆ ಇರಿಸಲಾಗುವುದು ಎಂದು ಹೇಳುತ್ತಿದ್ದಾರೆ. ನಾವು ಲಿಖಿತ ಮನವಿ ಸಲ್ಲಿಸಲು ಅನುಮತಿ ನೀಡುತ್ತೇವೆ. 2 ವಾರಗಳ ಬಳಿಕ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಿ” ಎಂದು ನ್ಯಾಯಾಲಯ ಹೇಳಿತು.

Kannada Bar & Bench
kannada.barandbench.com