[ಕೋಚಿಂಗ್‌ ಕೇಂದ್ರ ದುರಂತ] ಐವರಿಗೆ ದೆಹಲಿ ನ್ಯಾಯಾಲಯ ಜಾಮೀನು ನಿರಾಕರಣೆ: ಕಾರು ಚಾಲಕನ ಬಂಧನ ಪ್ರಶ್ನಿಸಿದ ಹೈಕೋರ್ಟ್‌

ಎಸ್‌ಯುವಿ ಚಾಲಕ ಮತ್ತು ಕಟ್ಟಡದ ನಾಲ್ವರು ಮಾಲೀಕರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
Flooded Roads
Flooded Roads
Published on

ದೆಹಲಿಯ ರಾಜೇಂದ್ರ ನಗರದಲ್ಲಿರುವ ಕೋಚಿಂಗ್ ಕೇಂದ್ರವೊಂದಕ್ಕೆ ಮಳೆ ನೀರು ನುಗ್ಗಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಬುಧವಾರ ಜಾಮೀನು ನಿರಾಕರಿಸಿದೆ.

ಎಸ್‌ಯುವಿ ಚಾಲಕ ಮನುಜ್ ಕಥುರಿಯಾ ಮತ್ತು ಕಟ್ಟಡದ ಮಾಲೀಕರಾದ ತೇಜಿಂದರ್ ಸಿಂಗ್, ಪರ್ವಿಂದರ್ ಸಿಂಗ್, ಹರ್ವಿಂದರ್ ಸಿಂಗ್ ಮತ್ತು ಸರಬ್ಜೀತ್ ಸಿಂಗ್ ಅವರಿಗೆ ತೀಸ್ ಹಜಾರಿ ನ್ಯಾಯಾಲಯದ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿನೋದ್ ಕುಮಾರ್ ಜಾಮೀನು ನಿರಾಕರಿಸಿದರು.

Also Read
ಮಳೆನೀರು ನುಗ್ಗಿ ಯುಪಿಎಸ್‌ಸಿ ಆಕಾಂಕ್ಷಿಗಳ ಸಾವು: ಉನ್ನತ ಮಟ್ಟದ ತನಿಖೆ ಕೋರಿ ದೆಹಲಿ ಹೈಕೋರ್ಟ್‌ಗೆ ಪಿಐಎಲ್

ಕಥುರಿಯಾ ಅವರಿಗೂ ಘಟನೆಗೂ ಸಂಬಂಧವಿಲ್ಲ. ಅವರನ್ನು ದೂಷಿಸಲಾಗದು ಎಂದು ಅವರ ಪರ ವಕೀಲರು ವಾದಿಸಿದರು.

ಕಥುರಿಯಾ ತಮ್ಮ ʼಫೋರ್ಸ್‌ ಗೂರ್ಖಾʼ ಕಾರನ್ನು ಮಳೆ ನೀರು ತುಂಬಿದ ರಸ್ತೆಯಲ್ಲಿ ಚಲಾಯಿಸಿದ್ದರು. ಹೀಗಾಗಿ ನೀರು ಕಟ್ಟಡದ ನೆಲಮಾಳಿಗೆಯ ಗೇಟ್‌ ಮುರಿದು ಒಳ ನುಗ್ಗಿತು ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ವಾದಿಸಿದರು.

Also Read
ಮೊರ್ಬಿ ಸೇತುವೆ ಕುಸಿತವು ಅಸಮರ್ಪಕ ನಿರ್ವಹಣೆಯಿಂದಾಗಿ ಉಂಟಾದ ಎಂಜಿನಿಯರಿಂಗ್ ದುರಂತ: ಗುಜರಾತ್ ಹೈಕೋರ್ಟ್

ಘಟನೆಗೆ ಸಿವಿಲ್‌ ಸಂಸ್ಥೆಗಳು ಹೊಣೆಗಾರರಾಗಿದ್ದು ಇದು ದೇವರ ಕೃತ್ಯ ಎಂದು ನೆಲಮಾಳಿಗೆಯ ಮಾಲೀಕರ ಪರವಾಗಿ ವಕೀಲ ಅಮಿತ್ ಚಡ್ಡಾ ತಿಳಿಸಿದರು.

ವಾದಗಳನ್ನು ಆಲಿಸಿದ ನ್ಯಾಯಾಲಯ ಕಡೆಗೆ ಐವರಿಗೂ ಜಾಮೀನು ನಿರಾಕರಿಸಿತು.

ಕಥುರಿಯಾ ಬಂಧನ ವಿಚಿತ್ರ ಎಂದ ದೆಹಲಿ ಹೈಕೋರ್ಟ್‌

ಮತ್ತೊಂದೆಡೆ ಕಥುರಿಯಾ ಬಂಧನವನ್ನು ವಿಚಿತ್ರ ಎಂದು ದೆಹಲಿ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲಿ ಸಾಗಿದ ವಾಹನ ಚಾಲಕನನ್ನು ಬಂಧಿಸಿ ಪೊಲೀಸರು ಏನು ಸಾಧಿಸುತ್ತಿದ್ದಾರೆ? ಹೂಳೆತ್ತದವರನ್ನು ಪ್ರಶ್ನಿಸಿದ್ದೀರಾ? ಎಂದು ಅದು ಕೇಳಿತು.  

ಈ ಸಂಬಂಧ ದೆಹಲಿ ಪೊಲೀಸರು ಮತ್ತು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ವತಿಯಿಂದ ಹೈಕೋರ್ಟ್ ವರದಿ ಕೇಳಿದ್ದು, ಆಗಸ್ಟ್ 2 ರಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

Kannada Bar & Bench
kannada.barandbench.com