ಸಬ್ಇನ್ಸ್ಪೆಕ್ಟರ್ ಒಬ್ಬರು ಠಾಣೆಗೆ ಎಳೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಸಂತ್ರಸ್ತನಾಗಿದ್ದ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸೇರಿದ ಚಿಕ್ಕಮಗಳೂರು ಜಿಲ್ಲೆ ಕಿರಗುಂದದ ಯುವಕ ಕೆ ಎಲ್ ಪುನೀತ್ ವಿರುದ್ಧ ಹೂಡಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚಿಕ್ಕಮಗಳೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಇತ್ತೀಚೆಗೆ ಜಾಮೀನು ನೀಡಿದೆ. ಪುನೀತ್ ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಗ್ರಾಮದ ಮಹಿಳೆಯೊಬ್ಬರು ದೂರು ನೀಡಿದ್ದರು.
ಪ್ರಸ್ತುತ ಪ್ರಕರಣವನ್ನು ಪ್ರತ್ಯೇಕ ನೆಲೆಯಲ್ಲಿ ನೋಡಬಾರದು ಇದಕ್ಕೂ ಮೂತ್ರ ನೆಕ್ಕಿಸಿದ ಪ್ರಕರಣಕ್ಕೂ ಸಂಬಂಧವಿದೆ ಎಂಬ ನೆಲೆಯಲ್ಲಿ ಗ್ರಹಿಸಬೇಕು. ಮಹಿಳೆ ದೂರು ನೀಡುವಲ್ಲಿ ವಿಳಂಬವಾಗಿದೆ. ಪೊಲೀಸರ ವಿರುದ್ಧ ತಮ್ಮ ಕಕ್ಷೀದಾರರು ದೂರು ನೀಡುವವರೆಗೂ ಮಹಿಳೆ ದೂರು ನೀಡಿರಲಿಲ್ಲ. ಪುನೀತ್ ದೂರು ನೀಡಿದ ಕೆಲ ಗಂಟೆಗಳಲ್ಲೇ ಮಹಿಳೆ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ದೂರು ನೀಡಿದರು. ಆಕೆಗೆ ದೂರು ನೀಡುವ ಹಕ್ಕಿದ್ದರೂ ದೂರು ನೀಡಿದ ಸಮಯ ಅನೇಕ ಅನುಮಾನಗಳನ್ನು ಹುಟ್ಟುಹಾಕುತ್ತದೆ ಇತ್ಯಾದಿ ಅಂಶಗಳನ್ನು ಪುನೀತ್ ಪರ ವಕೀಲರಾದ ಎಂ ಸಿ ರೋಹನ್ ಮತ್ತು ಎಸ್ ಎಲ್ ಪಲ್ಲವಿ ನ್ಯಾಯಾಲಯವನ್ನು ಕೋರಿದ್ದರು. ವಕೀಲರ ವಾದಗಳನ್ನು ಪುರಸ್ಕರಿಸಿ ನ್ಯಾಯಾಧೀಶ ಕೆ ಎಲ್ ಅಶೋಕ್ ಕಳೆದ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಲಾಕ್‌ಡೌನ್ ಮುಗಿದ ಒಂದು ವಾರದೊಳಗಾಗಿ ತನಿಖಾಧಿಕಾರಿ ಮುಂದೆ ಶರಣಾಗಬೇಕು, ಹದಿನೈದು ದಿನಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ತನಿಖಾಧಿಕಾರಿಗೆ ಅಗತ್ಯವಾದಾಗ ಹಾಜಾರಾಗಿ ಸಂಪೂರ್ಣ ಸಹಕರಿಸಬೇಕು. ಇಂಥದ್ದೇ ಇನ್ನೊಂದು ಅಪರಾಧ ಎಸಗುವಂತಿಲ್ಲ,ಸಾಕ್ಷ್ಯಗಳನ್ನು ನಾಶಪಡಿಸುವಂತಿಲ್ಲ. ಸಂತ್ರಸ್ತೆಯನ್ನು ಅರ್ಜಿದಾರ ನೇರವಾಗಿಯಾಗಲೀ ಪರೋಕ್ಷವಾಗಿಯಾಗಲೀ ಭೇಟಿ ಮಾಡುವಂತಿಲ್ಲ ಎಂಬ ಷರತ್ತುಗಳೊಡನೆ ರೂ 50,000 ಮೊತ್ತದ ವೈಯಕ್ತಿಕ ಬಾಂಡ್, ಒಂದು ಶ್ಯೂರಿಟಿಯೊಡನೆ ನ್ಯಾಯಾಲಯ ಜಾಮೀನು ನೀಡಿದೆ.
ಪುನೀತ್ ಅವರನ್ನು ಠಾಣೆಗೆ ಎಳೆದೊಯ್ದು ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಗೋಣಿಬೀಡು ಪೊಲೀಸ್ ಠಾಣೆಯ ಸಬ್ಇನ್ಸ್‌ಪೆಕ್ಟರ್ ಅರ್ಜುನ್ ಹೊರಕೇರಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಚಿಕ್ಕಮಗಳೂರು ನ್ಯಾಯಾಲಯ ಈ ತಿಂಗಳ ಆರಂಭದಲ್ಲಿ ಆದೇಶಿಸಿತ್ತು.