ಮದುವೆಗಳಲ್ಲಿ ಪ್ಲಾಸ್ಟಿಕ್ ಬದಲು ಗಾಜಿನ ಬಾಟಲಿ ಬಳಸಿ: ಕೇರಳ ಹೈಕೋರ್ಟ್

"ಸಣ್ಣ ಬಾಟಲಿಗಳು ಹಾನಿಕಾರಕವಾಗಿದ್ದು ಗಾಜಿನ ಬಾಟಲಿಗಳನ್ನು ಬಳಸುವ ಮೂಲಕ ಸುಲಭವಾಗಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬಹುದು" ಎಂದು ನ್ಯಾಯಾಲಯ ಹೇಳಿದೆ.
Plastic Bottles
Plastic Bottles
Published on

ಪ್ಲಾಸ್ಟಿಕ್‌ ಬಾಟಲಿಗಳು ವ್ಯಾಪಕವಾಗಿ ಬಳಕೆಯಾಗುತ್ತಿರುವುದಕ್ಕೆ ಕಳೆದ ವಾರ ಅಸಮಾಧಾನ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್‌ ಅಂತಹ ಬಾಟಲಿಗಳನ್ನು ರಾಜ್ಯ ಸರ್ಕಾರ ನಿಷೇಧಿಸಿರುವುದನ್ನು ಸಮರ್ಪಕವಾಗಿ ಜಾರಿಗೊಳಿಸದೆ ಇರುವ ಬಗ್ಗೆ ಪ್ರಶ್ನಿಸಿತು [ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪ್ರಕರಣ ಮತ್ತು ಕೇರಳ ಸರ್ಕಾರ ನಡುವಣ ದಾವೆ].

ತ್ಯಾಜ್ಯ ನಿರ್ವಹಣೆ ಸಮಸ್ಯೆ ಕುರಿತು ತಾನು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬೆಚು ಕುರಿಯನ್ ಥಾಮಸ್ ಮತ್ತು ಪಿ ಗೋಪಿನಾಥ್ ಅವರಿದ್ದ ಪೀಠ ತನ್ನ ಹಿಂದಿನ ಆದೇಶದಂತೆ ಗಿರಿಧಾಮಗಳಲ್ಲಿ ಪ್ಲಾಸ್ಟಿಕ್‌ ನಿಷೇಧಿಸುವ ಬಗ್ಗೆ ಸರ್ಕಾರದ ವರದಿಯನ್ನು ಪರಿಗಣಿಸಿತು. ಇದೇ ವೇಳೆ ರಾಜ್ಯದಲ್ಲಿ ಒಟ್ಟಾರೆ ತ್ಯಾಜ್ಯ ವಿಲೇವಾರಿ ಕುರಿತು ಕಳವಳ ವ್ಯಕ್ತಪಡಿಸಿತು.

Also Read
ಗುಡ್ಡಗಾಡು ಪ್ರದೇಶಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಲು ಕೇರಳ ಹೈಕೋರ್ಟ್ ಸಲಹೆ

ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ಪ್ರವಾಸಿ ತಾಣಗಳಲ್ಲಿ ಪರಿಸರ ನಾಶವನ್ನು ತಡೆಗಟ್ಟಲು ಗುಡ್ಡಗಾಡು ಪ್ರದೇಶಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸುವ ಬಗ್ಗೆ ನ್ಯಾಯಪೀಠವು ಪ್ರಸ್ತಾಪಿಸಿತ್ತು. ತಮಿಳುನಾಡಿನಲ್ಲಿ ಮದ್ರಾಸ್ ಹೈಕೋರ್ಟ್ ಇದೇ ರೀತಿಯ ನಿಷೇಧವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದನ್ನು ಉಲ್ಲೇಖಿಸಿ, ಅಂಥದ್ದೇ ಕಾರ್ಯತಂತ್ರವನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ (ಎಲ್‌ಎಸ್‌ಜಿಡಿ) ವಿಶೇಷ ಕಾರ್ಯದರ್ಶಿ ಅನುಪಮಾ ಟಿವಿ ಐಎಎಸ್ ತ್ಯಾಜ್ಯ ವಿಲೇವಾರಿ ಕಾರ್ಯವಿಧಾನದ ಕುರಿತು ವರದಿಯನ್ನು ಮಂಡಿಸಿದರು. ಈ ವೇಳೆ ನ್ಯಾಯಮೂರ್ತಿ ಗೋಪಿನಾಥ್ ಅವರು ಸಣ್ಣ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಮೇಲಿನ ನಿಷೇಧ ಪರಿಣಾಮಕಾರಿಯಾಗಿ ಜಾರಿಯಾಗಿದೆಯೇ ಎಂದು ಪ್ರಶ್ನಿಸಿದರು.

" ಸಣ್ಣ ಬಾಟಲಿಗಳಿಗೆ ಈಗಾಗಲೇ ನಿಷೇಧ ಜಾರಿಯಲ್ಲಿದ್ದು, ಈಗ ಪ್ರತಿಯೊಂದು ಕಾರ್ಯಕ್ರಮಗಳಲ್ಲಿಯೂ ಸಣ್ಣ ಬಾಟಲಿಗಳು ಕಂಡುಬರುತ್ತಿದೆ. ನಿಷೇಧ ಪರಿಣಾಮಕಾರಿಯಾಗಿ ಜಾರಿಯಲ್ಲಿದೆ ಎಂದು ನಾವು ಖಾತ್ರಿಪಡಿಸಿಕೊಳ್ಳುವುದಾದರೂ ಹೇಗೆ?   ಇದನ್ನು ಹೇಗೆ ಕಾರ್ಯಗತಗೊಳಿಸಬಹುದು? " ಎಂದು ನ್ಯಾಯಾಲಯ ಕೇಳಿತು.

ಕೇರಳದಾದ್ಯಂತ ಮದುವೆ ಸಮಾರಂಭಗಳಲ್ಲಿ ಸಣ್ಣ ಪ್ಲಾಸ್ಟಿಕ್ ನೀರಿನ ಬಾಟಲಿಗಳು ವ್ಯಾಪಕವಾಗಿ ಬಳಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಅಂತಹ ಬಾಟಲಿಗಳ ಬಳಕೆಯನ್ನು ತಪ್ಪಿಸಬೇಕು ಎಂದು ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಅನುಪಮಾ, 100 ಕ್ಕೂ ಹೆಚ್ಚು ಜನರು ಸೇರುವ ಸಭೆಗಳಿಗೆ ಸ್ಥಳೀಯ ಆಡಳಿತದಿಂದ ಪರವಾನಗಿ ಅಗತ್ಯವಿದೆ ಮತ್ತು 500 ಮಿಲಿಗಿಂತ ಕಡಿಮೆ ಪ್ಲಾಸ್ಟಿಕ್ ನೀರಿನ ಬಾಟಲಿಗಳಿಗೆ ಈಗಾಗಲೇ ನಿಷೇಧ ಜಾರಿಯಲ್ಲಿದೆ ಎಂದು ತಿಳಿಸಿದರು.

ಆದಾಗ್ಯೂ, ರಾಜ್ಯದೆಲ್ಲೆಡೆ ನಿಷೇಧ ಜಾರಿಯಲ್ಲಿದೆಯೇ ಎಂದು ಪರಿಶೀಲಿಸಿದಾಗ 100 ಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳು ಕಂಡು ಬಂದಿವೆ ಎಂದು ಸರ್ಕಾರ ತಿಳಿಸಿತು. ಇಂತಹ ಘಟನೆಗಳನ್ನು ನಾಗರಿಕರೇ ನೇರವಾಗಿ ವರದಿ ಮಾಡಿ ಆಡಳಿತ ವ್ಯವಸ್ಥೆ ದಂಡ ವಿಧಿಸಲು ಸಾಧ್ಯವಾಗುವಂತಹ ಆನ್‌ಲೈನ್‌ ವಿಧಾನ ಜಾರಿಗೊಳಿಸುವಂತೆ ನ್ಯಾಯಾಲಯ ಸೂಚಿಸಿತು.

ಇಂತಹ ಉಲ್ಲಂಘನೆಗಳ ಮೇಲೆ ನಿಗಾ ಇಡಲು ಜಿಲ್ಲಾ ಮಟ್ಟದ ನಿಷೇಧ ಜಾರಿ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವ ಗುರಿ ಸರ್ಕಾರದ್ದಾಗಿದೆ ಎಂದು ಅನುಪಮಾ ತಿಳಿಸಿದರು.

Also Read
ಕೃಷಿ ಹೊಂಡಕ್ಕೆ ರಾಸಾಯನಿಕ ಎಸೆದು ಸ್ಫೋಟ: ಡ್ರೋನ್‌ ಪ್ರತಾಪ್‌ಗೆ ಜಾಮೀನು ಮಂಜೂರು ಮಾಡಿದ ಮಧುಗಿರಿ ನ್ಯಾಯಾಲಯ

ಕೇರಳದಲ್ಲಿ ವಂದೇ ಭಾರತ್ ರೈಲುಗಳಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯ, ವಿಶೇಷವಾಗಿ ರೈಲುಗಳು ರೈಲ್ವೆ ಹಳಿಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ವಿಲೇವಾರಿ ಮಾಡುವ ಸಮಸ್ಯೆಯನ್ನು ನ್ಯಾಯಾಲಯ ಪರಿಗಣಿಸಿತು.

ತ್ಯಾಜ್ಯ ವಿಲೇವಾರಿ ಕಾರ್ಯವಿಧಾನಗಳ ಕುರಿತು ರೈಲ್ವೆ ಇಲಾಖೆಯಿಂದ ಪ್ರತಿಕ್ರಿಯೆ ಕೋರಿದ ನ್ಯಾಯಾಲಯ, ರೈಲುಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ತೆಗೆದುಹಾಕಲು ಸ್ಥಳೀಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿತು. ಅಲ್ಲದೆ ಕೇರಳದಲ್ಲಿ ಸಾರ್ವಜನಿಕ ನೈರ್ಮಲ್ಯ ಸಮಸ್ಯೆ ಬಗೆಹರಿಸುವ ಕುರಿತಂತೆಯೂ ಅದು ವಿವಿಧ ನಿರ್ದೇಶನಗಳನ್ನು ನೀಡಿತು.

Kannada Bar & Bench
kannada.barandbench.com