ಮನೆ, ಗುಡ್ಡಗಳಿಗೆ ಹಾನಿ: ಬಾಗೇಶ್ವರದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು ಉತ್ತರಾಖಂಡ ಹೈಕೋರ್ಟ್ ಆದೇಶ

ವರದಿಯಲ್ಲಿರುವ ಅಂಶಗಳು ಆಘಾತಕಾರಿಯಾಗಿವೆ ಎಂದ ಪೀಠ ಗಣಿ ಮಾಲೀಕರು ಸಂಪೂರ್ಣ ಅಕ್ರಮವಾಗಿ ನಡೆದುಕೊಂಡಿದ್ದು ಇಂತಹ ಅಕ್ರಮಗಳ ಬಗ್ಗೆ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದೆ.
Mining
MiningImage for representative purpose
Published on

ಗಣಿಗಾರಿಕೆಗೆ ಸಂಬಂಧಿಸಿದಂತೆ ಕೋರ್ಟ್‌ ಕಮಿಷನರ್‌ಗಳು ನೀಡಿದ ವರದಿಯ ಬಗ್ಗೆ ಈಚೆಗೆ ಆಘಾತ ವ್ಯಕ್ತಪಡಿಸಿರುವ ಉತ್ತರಾಖಂಡ ಹೈಕೋರ್ಟ್‌ ಬಾಗೇಶ್ವರ ಜಿಲ್ಲೆಯ ಎಲ್ಲಾ ಗಣಿಗಾರಿಕೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆದೇಶಿಸಿದೆ [ಸಜ್ಜನ್ ಲಾಲ್ ತಮ್ತಾ ಮತ್ತು ಉತ್ತರಾಖಂಡ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಕಾನೂನುಬಾಹಿರ ಚಟುವಟಿಕೆಗಳಿಂದಾಗಿ ವಾಸಸ್ಥಳಗಳಿಗೆ ಹಾನಿ, ಭೂಕುಸಿತ ಸೇರಿದಂತೆ ಗಮನಾರ್ಹ ಪರಿಸರ ಮತ್ತು ಸುರಕ್ಷತಾ ಆತಂಕಗಳಿವೆ ಎಂದು ವರದಿ ಹೇಳಿತ್ತು.

Also Read
ಗಣಿ ಬಾಧಿತ ವಿಜಯನಗರ ಜಿಲ್ಲೆಗೆ ನಿಧಿ ವರ್ಗಾವಣೆ: ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

ವರದಿಯಲ್ಲಿರುವ ಅಂಶಗಳು ಆಘಾತಕಾರಿಯಾಗಿವೆ ಎಂದ ಮುಖ್ಯ ನ್ಯಾಯಮೂರ್ತಿ ಜಿ ನರೇಂದರ್ ಮತ್ತು ನ್ಯಾಯಮೂರ್ತಿ ಮನೋಜ್ ಕುಮಾರ್ ತಿವಾರಿ ಅವರನ್ನೊಳಗೊಂಡ ಪೀಠ ಗಣಿ ಮಾಲೀಕರು ಸಂಪೂರ್ಣ ಅಕ್ರಮವಾಗಿ ನಡೆದುಕೊಂಡಿದ್ದು ಇಂತಹ ಅಕ್ರಮಗಳ ಬಗ್ಗೆ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂಬುದಾಗಿ ಕಿಡಿಕಾರಿತು.

ಗಣಿಗಾರಿಕೆಯಿಂದಾಗಿ ಮನೆಗಳಿಗೆ ಹಾನಿಯಾಗಿದ್ದು ಭೂಕುಸಿತ ಮತ್ತು ಜೀವಹಾನಿಗೆ ಕಾರಣವಾಗಬಹುದು ಎಂಬುದನ್ನು ವರದಿ ಮತ್ತು ಅದರ ಜೊತೆಗಿರುವ ಛಾಯಾಚಿತ್ರಗಳು ಎತ್ತಿ ತೋರಿಸಿವೆ ಎಂದು ನ್ಯಾಯಾಲಯ ತಿಳಿಸಿತು. ಹೀಗಾಗಿ ಜಿಲ್ಲೆಯ ಎಲ್ಲಾ ಗಣಿಗಾರಿಕೆ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಅದು ಜನವರಿ 6ರಂದು ಆದೇಶಿಸಿತು.

Also Read
ಗಣಿ ನಿರ್ವಾಹಕರು ಪಾವತಿಸುವ ರಾಯಧನಕ್ಕೆ ಜಿಎಸ್‌ಟಿ ಅಥವಾ ಸೇವಾ ತೆರಿಗೆ ವಿಧಿಸಬಹುದೇ? ನಿರ್ಧರಿಸಲಿದೆ ಸುಪ್ರೀಂ ಕೋರ್ಟ್

ತನ್ನ ಆದೇಶ ಪಾಲನೆ ಕುರಿತು ವರದಿ ಸಲ್ಲಿಸಲು ಕೈಗಾರಿಕಾ ಅಭಿವೃದ್ಧಿ ಕಾರ್ಯದರ್ಶಿ ಮತ್ತು ಬಾಗೇಶ್ವರದ ಜಿಲ್ಲಾಧಿಕಾರಿ ಹಾಗೂ ಗಣಿಗಾರಿಕೆ ನಿರ್ದೇಶಕರು ನಾಳೆ  (ಜನವರಿ 9) ಖುದ್ದು ಹಾಜರಿರಬೇಕೆಂದು ಪೀಠ ಸಮನ್ಸ್ ನೀಡಿತು.

ಪಟ್ಟಭದ್ರ ಹಿತಾಸಕ್ತಿಗಳ ಅಡ್ಡಿ ಆತಂಕಗಳ ನಡುವೆಯೂ ಕೋರ್ಟ್‌ ಕಮಿಷನರ್‌ಗಳಾದ ಮಯಾಂಕ್ ರಾಜನ್ ಜೋಷಿ ಮತ್ತು ಶರಂಗ್ ಧುಲಿಯಾ ಅವರು ಶ್ರಮವಹಿಸಿ ವರದಿ ಸಲ್ಲಿಸಿದ್ದನ್ನು ನ್ಯಾಯಾಲಯ ಇದೇ ವೇಳೆ ಶ್ಲಾಘಿಸಿತು. ಪ್ರಕರಣದಲ್ಲಿ ಎಲ್ಲ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ಕಕ್ಷಿದಾರರನ್ನಾಗಿ ಸೇರಿಸುವಂತೆ ಅಮಿಕಸ್ ಕ್ಯೂರಿ ದುಶ್ಯಂತ್ ಮೈನಾಲಿ ಅವರಿಗೆ ಅದು ಸೂಚಿಸಿತು.

Kannada Bar & Bench
kannada.barandbench.com