ಪಿತೃ ಸಂಬಂಧಿಯ ದೃಢೀಕೃತ ಜಾತಿ ಪ್ರಮಾಣಪತ್ರ ವ್ಯಕ್ತಿಯ ಸಾಮಾಜಿಕ ಸ್ಥಾನಮಾನಕ್ಕೆ ನಿರ್ಣಾಯಕ ಪುರಾವೆ: ಬಾಂಬೆ ಹೈಕೋರ್ಟ್

ಈ ಸಂಬಂಧ ನ್ಯಾಯಾಲಯಗಳ ಆದೇಶ ಉಲ್ಲಂಘಿಸದಂತೆ ಮಹಾರಾಷ್ಟ್ರದಾದ್ಯಂತ ಇರುವ ಜಾತಿ ಪರಿಶೀಲನಾ ಸಮಿತಿಗಳಿಗೆ ಪೀಠ ಎಚ್ಚರಿಕೆ ನೀಡಿದೆ.
ಪಿತೃ ಸಂಬಂಧಿಯ ದೃಢೀಕೃತ ಜಾತಿ ಪ್ರಮಾಣಪತ್ರ ವ್ಯಕ್ತಿಯ ಸಾಮಾಜಿಕ ಸ್ಥಾನಮಾನಕ್ಕೆ ನಿರ್ಣಾಯಕ ಪುರಾವೆ: ಬಾಂಬೆ ಹೈಕೋರ್ಟ್
ramesh sogemane
Published on

ಒಬ್ಬ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ನಿರ್ಧರಿಸಲು ಆತನ ಪಿತೃ ಸಂಬಂಧಿಯ ದೃಢೀಕೃತ ಜಾತಿ ಪ್ರಮಾಣಪತ್ರ ನಿರ್ಣಾಯಕ ಪುರಾವೆಯಾಗುತ್ತದೆ ಎಂದು ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. [ಭರತ್ ಭಗವಂತ ತಾಯಡೆ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಭಾರತದಲ್ಲಿ ಬಹುತೇಕ ಕುಟುಂಬಗಳು ಪಿತೃಪ್ರಭುತ್ವ ಕುಟುಂಬ ಮಾದರಿಯನ್ನು ಅನುಸರಿಸುತ್ತಿವೆ. ಆದ್ದರಿಂದ ಆ ಕುಟುಂಬದ ಎಲ್ಲಾ ಸದಸ್ಯರನ್ನು ಒಂದೇ ಜಾತಿ ಅಥವಾ ಬುಡಕಟ್ಟಿಗೆ ಸೇರಿದವರು ಎಂದು ಕಾನೂನಿನಲ್ಲಿ ಪರಿಗಣಿಸಬೇಕು ಎಂಬುದಾಗಿ ನ್ಯಾಯಮೂರ್ತಿಗಳಾದ ಎಸ್‌ ಬಿ ಶುಕ್ರೆ ಮತ್ತು ಜಿ ಎ ಸನಪ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ಜಾತಿ ಅಥವಾ ಬುಡಕಟ್ಟಿಗೆ ಸಂಬಂಧಿಸಿದಂತೆ ವಂಚನೆ, ವಾಸ್ತವಾಂಶಗಳ ತಿರುಚುವಿಕೆ ಅಥವಾ ಸತ್ಯ ಹತ್ತಿಕ್ಕುವ ಸಂದರ್ಭ ಹೊರತುಪಡಿಸಿ ಒಬ್ಬ ವ್ಯಕ್ತಿಗೆ ನಿರ್ಣಾಯಕ ಪುರಾವೆಯಾಗಿರುವ ದಾಖಲೆಯು ಮತ್ತೊಬ್ಬ ವ್ಯಕ್ತಿ ಪಿತೃ ಸಂಬಂಧಿಯಾಗಿದ್ದರೆ ಆತನ ಸಾಮಾಜಿಕ ಸ್ಥಾನಮಾನ ನಿರ್ಧರಿಸಲು ಕೂಡ ಅನ್ವಯವಾಗುತ್ತದೆ ಎಂದು ಅದು ಹೇಳಿದೆ.

ಇದೇ ವೇಳೆ, ಈ ಸಂಬಂಧ ನ್ಯಾಯಾಲಯಗಳು ನೀಡಿರುವ ಆದೇಶ ಉಲ್ಲಂಘಿಸದಂತೆ ಮಹಾರಾಷ್ಟ್ರದಾದ್ಯಂತ ಇರುವ ಜಾತಿ ಪರಿಶೀಲನಾ ಸಮಿತಿಗಳಿಗೆ ಪೀಠ ಎಚ್ಚರಿಕೆ ನೀಡಿದ್ದು ಹಾಗೇನಾದರೂ ಆದೇಶ ಉಲ್ಲಂಘನೆಯಾದರೆ ಮುಂದಿನ ದಿನಗಳಲ್ಲಿ ಗಂಭೀರ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

Also Read
ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗದು; ಗ್ರಾಮ ಪಂಚಾಯಿತಿ ಸದಸ್ಯೆ ಆಯ್ಕೆ ಅಸಿಂಧು ತೀರ್ಪು ಎತ್ತಿ ಹಿಡಿದ ಹೈಕೋರ್ಟ್‌

ಟೋಕ್ರೆ ಕೋಲಿ ಎಂಬ ಪರಿಶಿಷ್ಟ ಜಾತಿಗೆ ಸೇರಿದ ಭರತ್ ತಾಯಡೆ ಎಂಬವವರ ಜಾತಿ ಪ್ರಮಾಣಪತ್ರವನ್ನು ಎರಡನೇ ಬಾರಿ ಅಮಾನ್ಯಗೊಳಿಸಿದ ಥಾಣೆಯ ಪರಿಶೀಲನಾ ಸಮಿತಿ ಆದೇಶ ಪ್ರಶ್ನಿಸಿ ಸಲ್ಲಿಸಿದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಈ ಆದೇಶ ನೀಡಿದೆ.

ತಾಯಡೆ ಅವರ ಸೋದರ ಸಂಬಂಧಿ ಕೈಲಾಶ್ ತಾಯಡೆ ಅವರಿಗೆ ನಾಸಿಕ್ ಜಿಲ್ಲೆಯ ಪರಿಶೀಲನಾ ಸಮಿತಿ ದೃಢೀಕೃತ ಜಾತಿ ಪ್ರಮಾಣಪತ್ರ ನೀಡಿತ್ತು. ಆದರೂ ಥಾಣೆಯ ಸಮಿತಿ ಕೈಲಾಶ್‌ಗೆ ನೀಡಿದ ದೃಢೀಕೃತ ಜಾತಿ ಪ್ರಮಾಣಪತ್ರವನ್ನು ಪರಿಗಣಸದೇ ಟೋಕ್ರೆ ಕೋಲಿ ಸಮುದಾಯಕ್ಕೆ ಸೇರಿದ ತಾಯಡೆ ಅವರಿಗೆ ನೀಡಬೇಕಿದ್ದ ಪ್ರಮಾಣಪತ್ರವನ್ನು ತಿರಸ್ಕರಿಸಿತ್ತು.

ಈ ಹಿನ್ನೆಲೆಯಲ್ಲಿ” ಅರೆ ನ್ಯಾಯಾಂಗ ಸಂಸ್ಥೆಯಾದ ಸಮಿತಿಯ ಈ ನಡೆ ʼನ್ಯಾಯಾಂಗ ಅಶಿಸ್ತಿಗೆʼ ಕಾರಣವಾಗುತ್ತದೆ” ಎಂದು ಅಭಿಪ್ರಾಯಪಟ್ಟ ಪೀಠ ಸಮಿತಿಯ ಆದೇಶಗಳನ್ನು ರದ್ದುಗೊಳಿಸಿ ಎರಡು ವಾರದೊಳಗೆ ತಾಯಡೆ ಅವರಿಗೆ ದೃಢೀಕೃತ ಜಾತಿ ಪ್ರಮಾಣಪತ್ರ ನೀಡುವಂತೆ ನಿರ್ದೇಶಿಸಿತು.

Kannada Bar & Bench
kannada.barandbench.com