ದಂಪತಿಗೆ ರಕ್ಷಣೆ ನೀಡದಿರಲು ವಿವಾಹದ ಸಿಂಧುತ್ವ ಕುರಿತ ವಿವಾದ ಆಧಾರವಾಗಬಾರದು ಎಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

"ಅರ್ಜಿದಾರರ ಜೀವನ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ಮಾತ್ರ ಪ್ರಸ್ತುತ ನಿರ್ದೇಶನ ನೀಡಲಾಗಿದ್ದು ವಿವಾಹದ ಸಿಂಧುತ್ವದ ಬಗ್ಗೆ ಇದು ಏನನ್ನೂ ತಿಳಿಸಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ದಂಪತಿಗೆ ರಕ್ಷಣೆ ನೀಡದಿರಲು ವಿವಾಹದ ಸಿಂಧುತ್ವ ಕುರಿತ ವಿವಾದ ಆಧಾರವಾಗಬಾರದು ಎಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್
Published on

ಸಂಬಂಧಿಕರಿಂದ ಬೆದರಿಕೆ ಎದುರಿಸುತ್ತಿರುವ ಅಂತರಧರ್ಮೀಯ ವಿವಾಹವಾದ ದಂಪತಿಗೆ ರಕ್ಷಣೆ ನೀಡದೆ ಇರಲು ವಿವಾಹದ ಸಿಂಧುತ್ವ ಕುರಿತ ವಿವಾದ ಆಧಾರವಾಗಬಾರದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. (ಫರ್ಜಾನಾ ಬೇಗಂ ಅಲಿಯಾಸ್‌ ಅಮನ್ ಮತ್ತು ಪಂಜಾಬ್ ಸರ್ಕಾರ ನಡುವಣ ಪ್ರಕರಣ).

ರಕ್ಷಣೆ ಕೋರಿ ಅಂತರ್‌ಧರ್ಮೀಯ ವಿವಾಹವಾಗಿದ್ದ ದಂಪತಿ ಸಲ್ಲಿಸಿದ್ದ ಮನವಿ ಮೇರೆಗೆ ನ್ಯಾ. ಜಸ್ಗುರ್‌ಪ್ರೀತ್‌ ಸಿಂಗ್‌ ಪುರಿ ಈ ಆದೇಶ ನೀಡಿದ್ದು ಸಂಬಂಧಪಟ್ಟ ಪೊಲೀಸ್‌ ಅಧಿಕಾರಿ ದಂಪತಿಗಳಿಗೆ ರಕ್ಷಣೆ ನೀಡಲು ಮುಂದಾಗಬೇಕು ಮತ್ತು ಅವರ ಜೀವಿಸುವ ಹಕ್ಕು ಮತ್ತ ಸ್ವಾತಂತ್ರ್ಯದ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.

ಅರ್ಜಿದಾರರಿಬ್ಬರೂ ವಿವಾಹವಾಗುವ ವಯಸ್ಸು ತಲುಪಿದ್ದು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದರು. ಅರ್ಜಿದಾರರಲ್ಲೊಬ್ಬರು ಮೊದಲು ಮುಸ್ಲಿಂ ಧರ್ಮಕ್ಕೆ ಸೇರಿದ್ದು ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡು ವಿವಾಹವಾಗಿದ್ದರು. ಸಂಬಂಧಿಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು ಅರ್ಜಿದಾರರಿಗೆ ಬೆದರಿಕೆಯೊಡ್ಡಿದ್ದರು.

ಒಂದು ವೇಳೆ ಅರ್ಜಿದಾರರ ವಿವಾಹಕ್ಕೆ ಮಾನ್ಯತೆ ಇಲ್ಲದಿದ್ದರೂ ಕೂಡ ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ನೀಡಬೇಕಿದೆ. ಆದ್ದರಿಂದ ಅವರ ಜೀವ ರಕ್ಷಣೆಗೆ ಅಗತ್ಯ ನಿರ್ದೇಶನ ನೀಡಬೇಕೆಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ನ್ಯಾಯಾಲಯ ಈ ವಾದವನ್ನು ಒಪ್ಪಿ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶ ನೀಡಿತು. "ಅರ್ಜಿದಾರರ ಜೀವನ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ಮಾತ್ರ ಪ್ರಸ್ತುತ ನಿರ್ದೇಶನ ನೀಡಲಾಗಿದ್ದು ವಿವಾಹದ ಸಿಂಧುತ್ವದ ಬಗ್ಗೆ ಇದು ಏನನ್ನೂ ತಿಳಿಸಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Also Read
ಲಿವ್ ಇನ್‌ ಸಂಬಂಧ ನೈತಿಕ, ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ: ರಕ್ಷಣೆ ನೀಡಲು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನಕಾರ

ಸಹ ಜೀವನ (ಲಿವ್‌-ಇನ್) ಸಂಬಂಧ ಮತ್ತು ಅಂತಹ ಸಂಬಂಧದಲ್ಲಿರುವ ಜೋಡಿಗೆ ರಾಜ್ಯ ಅಧಿಕಾರಿಗಳಿಂದ ರಕ್ಷಣೆ ನೀಡಬೇಕೆ ಎಂಬ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ರಾಜ್ಯ ಹೈಕೋರ್ಟ್ ಸಂಘರ್ಷಾತ್ಮಕ ತೀರ್ಪುಗಳನ್ನು ನೀಡಿತ್ತು.

ಸಹ ಜೀವನ ಸಂಬಂಧ ಎಲ್ಲರಿಗೂ ಒಪ್ಪಿತವಾಗದಿರಬಹುದು, ಆದರೆ ಕಾನೂನುಬಾಹಿರ, ಅಪರಾಧವಲ್ಲ ಎಂದು ಮೇ 18 ರಂದು ನ್ಯಾಯಮೂರ್ತಿ ಜೈಶ್ರೀ ಠಾಕೂರ್ ತಿಳಿಸಿದ್ದರು. ಆದ್ದರಿಂದ ಪ್ರಕರಣದ ಅರ್ಜಿದಾರರಿಗೆ ರಕ್ಷಣೆ ಒದಗಿಸುವಂತೆ ಅವರು ಸೂಚಿಸಿದ್ದರು.

ಅದೇ ದಿನ ನ್ಯಾ. ಸುಧೀರ್‌ ಮಿತ್ತಲ್‌ ನೇತೃತ್ವದ ಮತ್ತೊಂದು ಏಕಸದಸ್ಯ ಪೀಠ ಸಹ ಜೀವನ ಸಂಬಂಧವನ್ನು ನಿಷೇಧಿಸಿಲ್ಲ. ಅಂತಹ ಸಂಬಂಧ ಬಯಸುವ ವ್ಯಕ್ತಿಗಳು ಕಾನೂನಿನ ಸಮಾನ ರಕ್ಷಣೆಗೆ ಅರ್ಹರು ಎಂದು ಹೇಳಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ, ಮೇ 11 ರಂದು ನ್ಯಾ. ಎಚ್ ಎಸ್ ಮದನ್ ಅವರು ಸಹ ಜೀವನ ಸಂಬಂಧಗಳನ್ನು ನೈತಿಕವಾಗಿ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಬಣ್ಣಿಸಿದ್ದರು.

ಮರು ದಿನ ನೀಡಿದ ಆದೇಶವೊಂದರಲ್ಲಿ ನ್ಯಾ. ಅನಿಲ್‌ ಕ್ಷೇತ್ರಪಾಲ್‌ ಅವರು ಕೂಡ ಇಂಥದ್ದೇ ಅರ್ಜಿಯನ್ನು ತಿರಸ್ಕರಿಸಿ ಜೋಡಿಗೆ ರಕ್ಷಣೆ ಒದಗಿಸಿದರೆ ಸಾಮಾಜಿಕ ವ್ಯವಸ್ಥೆ ಹದಗೆಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

Kannada Bar & Bench
kannada.barandbench.com