ವೀರೇಂದ್ರ ಹೆಗ್ಗಡೆ ಕುಟುಂಬದ ಪಿತೂರಿ: ಅಂತಿಮ ವರದಿ ಸಲ್ಲಿಸಲು ಎಸ್‌ಐಟಿಗೆ ನಿರ್ದೇಶನ ಕೋರಿದ ಆರೋಪಿ ಚಿನ್ನ

ತನ್ನೊಬ್ಬನನ್ನೇ ಬಲಿಪಶು ಮಾಡಲಾಗಿದ್ದು, ಪಿತೂರಿ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಲು ಎಸ್ಐಟಿಗೆ ‌ನಿರ್ದೇಶಿಸಬೇಕು ಎಂದು ಕೋರಲಾಗಿದೆ.
Veerendra Heggade and Karnataka HC
Veerendra Heggade and Karnataka HCX Corp
Published on

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣಗಳ ಕುರಿತ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬದ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಿರುವವರ ವಿರುದ್ಧ ಕ್ರಮ ಕೈಗೊಂಡು, ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಲು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ನಿರ್ದೇಶಿಸುವಂತೆ ಕೋರಿ ಆರೋಪಿ ಸಿ ಎನ್ ಚಿನ್ನ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರಕರಣದಲ್ಲಿ ತನ್ನೊಬ್ಬನನ್ನೇ ಬಲಿಪಶು ಮಾಡಲಾಗಿದ್ದು, ಪಿತೂರಿ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಲು ಎಸ್ಐಟಿಗೆ ‌ನಿರ್ದೇಶಿಸಬೇಕು ಎಂದು ಕೋರಿ ಮಂಡ್ಯ ಮೂಲದ, ಪ್ರಸ್ತುತ ಧರ್ಮಸ್ಥಳ ವಾಸ್ತವ್ಯ ಹೊಂದಿರುವ ಸಿ ಎನ್ ಚಿನ್ನ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಸ್‌ಐಟಿ ಮುಖ್ಯಸ್ಥರು ಹಾಗೂ ಧರ್ಮಸ್ಥಳ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿತು.

ಧರ್ಮಸ್ಥಳದಲ್ಲಿ ಈ ಹಿಂದೆ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ನನ್ನನ್ನು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠ್ಠಲ್ ಗೌಡ, ಜಯಂತ್ ಹಾಗೂ ಮತ್ತಿತರರು ಸಂಪರ್ಕಿಸಿ, ಧರ್ಮಸ್ಥಳದಲ್ಲಿ ಸಾವಿರಾರು ಹೆಣಗಳನ್ನು ಹೂಳಲಾಗಿದೆ ಎಂದು ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಲಾಗಿತ್ತು. ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯಿಂದ ನನ್ನನ್ನು ಜಯಂತ್ ಎಂಬಾತನ ಮನೆಗೆ ಕರೆದೊಯ್ದು, ಅಲ್ಲಿ ಅಯ್ಯಪ್ಪ ಸ್ವಾಮಿ ಟವಲ್ ಮೇಲೆ ಮಾನವನ ತಲೆಬುರುಡೆ, ಮಣ್ಣು ಮತ್ತು ಅರ್ಧ ಬಾಟಲಿ ನೀರನ್ನು ಇಟ್ಟು, ತಲೆಬುರುಡೆಯನ್ನು ಕೈಯಲ್ಲಿ ಹಿಡಿಯುವಂತೆ ಹೆದರಿಸಲಾಗಿತ್ತು. ತಲೆ ಬುರುಡೆ‌ ಮುಟ್ಟುವ ರೀತಿಯಲ್ಲಿ ಫೋಟೋಗಳನ್ನು ತೆಗೆಯಲಾಗಿತ್ತು. ನಂತರ ವಕೀಲರಾದ ಕೆ ವಿ ಧನಂಜಯ್ ಅವರ ಕಚೇರಿಗೆ ಕರೆದೊಯ್ಯಲಾಗಿತ್ತು ಎಂದು ಚಿನ್ನಯ್ಯ ಅರ್ಜಿಯಲ್ಲಿ ವಿವರಿಸಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ನನ್ನನ್ನು ಕೂಡಿಹಾಕಲಾಗಿತ್ತು. ರಾತ್ರಿ ವೇಳೆ ಗಿರೀಶ್ ಮಟ್ಟಣ್ಣವರ್ ಹಾಸಿಗೆ ಮೇಲೆ ಮಲಗುತ್ತಿದ್ದರೆ, ನನ್ನನ್ನು ನೆಲದ ಮೇಲೆ ಮಲಗಿಸಿ ಅವರ ಕೈಕಾಲು ಹಾಗೂ ತಲೆ ಮಸಾಜ್ ಮಾಡುವಂತೆ ಒತ್ತಾಯಿಸಲಾಗುತ್ತಿತ್ತು. ತಪ್ಪಿಸಿಕೊಂಡು ಹೋಗದಂತೆ ಪ್ರದೀಪ್ ಎಂಬಾತ ಕಾವಲು ಕಾಯುತ್ತಿದ್ದನು. 'ಕುಡ್ಲ ರ್ಯಾಂಪೇಜ್‌' ಯೂಟ್ಯೂಬ್ ಚಾನೆಲ್‌ನ ಅಜಯ್ ಹಾಗೂ ಯೂಟ್ಯೂಬರ್ ಸಮೀರ್ ಎಂಬುವವರು ನನ್ನಿಂದ ಬಲವಂತವಾಗಿ 30-35 ವಿಡಿಯೊ ಹೇಳಿಕೆಗಳನ್ನು ರೆಕಾರ್ಡ್ ಮಾಡಿಸಿದ್ದರು ಎಂದು ಚಿನ್ನಯ್ಯನ ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಕರಣದ ಸಂಬಂಧ ಇಷ್ಟು ದೊಡ್ಡ ಮಟ್ಟದ ಕಾನೂನು ಹೋರಾಟ ಮತ್ತು ತನಿಖೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ನಾನು ಮಹೇಶ್ ಶೆಟ್ಟಿ ಹಾಗೂ ಗಿರೀಶ್ ಅವರನ್ನು ಕೇಳಿದಾಗ ಮೊದಲು ಅದರ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದ್ದರು. ಆದರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಸಾಕ್ಷ್ಯ ನುಡಿಯಲು ಒಪ್ಪಿದಾಗ, ಕೇರಳದಿಂದ ಹಣ ಬರುತ್ತಿದೆ ಹಾಗೂ ಚಿತ್ರದುರ್ಗದ ರಮಾ ನಾಗರಾಜ್ ಎಂಬುವವರು ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರಲು ನಿಯಮಿತವಾಗಿ ಫಂಡಿಂಗ್ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಅಲ್ಲದೆ, ವೀರೇಂದ್ರ ಹೆಗ್ಗಡೆಯವರನ್ನು ಜೈಲಿಗೆ ಕಳುಹಿಸಸಲು ಸಹಕರಿಸಿದರೆ 50 ಲಕ್ಷ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು ಎಂದಯ ಚಿನ್ನಯ್ಯ ಅರ್ಜಿಯಲ್ಲಿ ವಿವರಿಸಿದ್ದಾರೆ.

ಕೇರಳದ ರೆಸಾರ್ಟ್ ಒಂದರಲ್ಲಿ ತಂಗಿದ್ದಾಗ, ಗಿರೀಶ್ ಮಟ್ಟಣ್ಣವರ್ ಅವರು ಪ್ರಖ್ಯಾತ ನಟ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ನನಗೆ ಮೊಬೈಲ್ ನೀಡಿದ್ದರು. ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿ, ಗಿರೀಶ್ ಹೇಳಿಕೊಟ್ಟಂತೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡು, 29ರಂದು ಬಂದು ನಾನು ನಿನ್ನನ್ನು ಕಾಣುತ್ತೇನೆ ಎಂದು ಧೈರ್ಯ ತುಂಬಿದ್ದರು ಎಂದು ಅರ್ಜಿಯಲ್ಲಿ ಚಿನ್ನಯ್ಯ ವಿವರಿಸಿದ್ದಾರೆ.

ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ತಲೆಗೆ ಕಪ್ಪು ಬಟ್ಟೆ ಹಾಕಿ ಕರೆದೊಯ್ಯಲಾಗಿತ್ತು. ಈ ವೇಳೆ ತಿಮರೋಡಿ ಮನೆಯಿಂದ ತರಲಾದ ತಲೆ‌ ಬುರುಡೆಯನ್ನು ಕೊಂಡೊಯ್ಯಲಾಗಿತ್ತು. ಕೋರ್ಟ್‌ನಲ್ಲಿ ಬಲವಂತವಾಗಿ ಸುಳ್ಳು ಸಾಕ್ಷ್ಯ ಹೇಳಿಸಲಾಗಿತ್ತು. ಆನಂತರ, ನನಗೆ ಹಲವು ಬಾರಿ ಜೀವ ಬೆದರಿಕೆಯನ್ನೂ ಹಾಕಲಾಗಿತ್ತು. ಆದರೆ, ನಂತರ ಪಶ್ಚಾತ್ತಾಪದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳ ಮುಂದೆ ಪಿತೂರಿಯ ಸಂಪೂರ್ಣ ಸತ್ಯವನ್ನು ಒಪ್ಪಿಕೊಂಡಿದ್ದೆ. ಅಧಿಕಾರಿಗಳು ನನ್ನನ್ನು ಕೋರ್ಟ್ ಮುಂದೆ ಹಾಜರುಪಡಿಸಿ, ಅಲ್ಲಿ ನನ್ನ ಹೇಳಿಕೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನನ್ನ ಮೇಲೆ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ 2025ರ ಡಿಸೆಂಬರ್ 18ರಂದು ಕೋರ್ಟ್‌ನಿಂದ ಜಾಮೀನು ಮಂಜೂರಾಯಿತು. ಜಾಮೀನಿನ ಪ್ರಮುಖ ಷರತ್ತಿನಂತೆ ಮಾಧ್ಯಮಗಳ ಮುಂದೆ ಮಾತನಾಡುವಂತಿರಲಿಲ್ಲ. ಇದರಿಂದಾಗಿ, ಸಾರ್ವಜನಿಕರಿಗೆ ಸತ್ಯ ತಿಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಎಸ್‌ಐಟಿಯ ಪ್ರಾಥಮಿಕ ತನಿಖಾ ವರದಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಸೇರಿದಂತೆ ಪಿತೂರಿದಾರರಾದ ಐವರನ್ನು ಹೆಸರಿಸಿದ್ದರೂ, ಕಳೆದ 9 ತಿಂಗಳುಗಳಿಂದ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಹಾಗೂ ಅಂತಿಮ ವರದಿ ಸಲ್ಲಿಸಿಲ್ಲ. ಪರಿಶಿಷ್ಟ ಜಾತಿಗೆ ಸೇರಿದ ನಾನು ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವನಾಗಿದ್ದೇನೆ. ನನ್ನ ಈ ಪರಿಸ್ಥಿತಿಯನ್ನು ಲಾಭ ಪಡೆದು ಇತರ ಪಿತೂರಿದಾರರು ಸಂಚು ರೂಪಿಸಿದ್ದಾರೆ. ಇದರಿಂದ, ನಾನೊಬ್ಬನೇ ಬಲಿಪಶುವಾಗಿ, ಪ್ರಕರಣದಲ್ಲಿ ಸಿಲುಕಿ ಕಷ್ಟ ಅನುಭವಿಸುತ್ತಿರುವುದಾಗಿ ಚಿನ್ನಯ್ಯ ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.

Also Read
ಮಾಧ್ಯಮಗಳ ವಿರುದ್ಧದ ವೀರೇಂದ್ರ ಹೆಗ್ಗಡೆ ಪರ ಪ್ರತಿಬಂಧಕಾದೇಶ ಜಾರಿಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ (ಅಪರಾಧ ಸಂಖ್ಯೆ: 39/2025) ಅಂತಿಮ ವರದಿಯನ್ನು (ಚಾರ್ಜ್‌ಶೀಟ್) ಸಲ್ಲಿಸಲು ಹಾಗೂ ಪ್ರಾಥಮಿಕ ವಿಚಾರಣ ವರದಿಯಲ್ಲಿ ಹೆಸರಿಸಲಾದ ಪಿತೂರಿದಾರರ ವಿರುದ್ಧ ಕ್ರಮ ಕೈಗೊಳ್ಳಲು 3ನೇ ಪ್ರತಿವಾದಿಯಾದ ಎಸ್‌ಐಟಿಗೆ ನಿರ್ದೇಶನ ನೀಡಬೇಕು. ಜತೆಗೆ, ಪ್ರಕರಣದ ಒಳಸಂಚು, ತನಗೆ ನೀಡಲಾದ ದೈಹಿಕ ಮತ್ತು ಮಾನಸಿಕ ಕಿರುಕುಳ ಹಾಗೂ ಬೆದರಿಕೆಯ ಬಗ್ಗೆ 2025ರ ಡಿಸೆಂಬರ್ 18ರಂದು ನೀಡಲಾದ ದೂರಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಧರ್ಮಸ್ಥಳ ಪೊಲೀಸರಿಗೆ ನಿರ್ದೇಶಿಸಬೇಕು. ಪ್ರಕರಣದ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ, ವಿಚಾರಣಾ ನ್ಯಾಯಾಲಯದ ಮುಂದೆ ಆದಷ್ಟು ಬೇಗ ಅಂತಿಮ ವರದಿಯನ್ನು ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶಿಸಬೇಕು ಎಂದು ಚಿನ್ನಯ್ಯ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Kannada Bar & Bench
kannada.barandbench.com