ಬಂಧನದಿಂದ ರಣವೀರ್ ಅಲಾಹಾಬಾದಿಯಾಗೆ ರಕ್ಷಣೆ ನೀಡಿದ ಸುಪ್ರೀಂ; ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ತರಾಟೆ

ಅಲಾಹಾಬಾದಿಯಾ ನೀಡಿದ ವಿವಾದಿತ ಹೇಳಿಕೆಗೆ ಸಂಬಂಧಿಸಿದಂತೆ ಆತನ ವಿರುದ್ಧ ಹೊಸದಾಗಿ ಮತ್ತಾವುದೇ ಎಫ್ಐಆರ್ ದಾಖಲಿಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ.
Ranveer Allahbadia and Supreme Court
Ranveer Allahbadia and Supreme Courtx.com
Published on

ಇಂಡಿಯಾ'ಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ನೀಡಿದ ಅಶ್ಲೀಲ ಹೇಳಿಕೆಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ, ಅಸ್ಸಾಂ ಹಾಗೂ ರಾಜಸ್ಥಾನದಲ್ಲಿ ಯೂಟ್ಯೂಬರ್‌ (ಬೀರ್ ಬೈಸೆಪ್ಸ್ ಎಂದೇ ಗುರುತಿಸುವ) ರಣವೀರ್‌ ಅಲಹಾಬಾದಿಯಾ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆ ನೀಡಿದೆ.

ವಿವಿಧ ರಾಜ್ಯಗಳಲ್ಲಿ ತನ್ನ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳನ್ನು ಒಗ್ಗೂಡಿಸಿ ಮಧ್ಯಂತರ ರಕ್ಷಣೆ ನೀಡುವಂತೆ ಕೋರಿ ಅಲಾಹಾಬಾದಿಯಾ ಮೆಟ್ಟಿಲೇರಿದ್ದ. ಆದರೆ, ಪ್ರಸ್ತುತ ಅಲಾಹಾಬಾದಿಯಾ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ಮಾತ್ರವಿದ್ದು ಅದನ್ನು ಆತ ಪ್ರತ್ಯೇಕವಾಗಿ ಸಮರ್ಥಿಸಿಕೊಳ್ಳಬಹುದು ಎಂದು ಹೇಳಿದ ನ್ಯಾಯಾಲಯ ಪ್ರಕರಣಗಳನ್ನು ಒಗ್ಗೂಡಿಸಿ ಆಲಿಸಲು ನಿರಾಕರಿಸಿತು.

Also Read
ಅಶ್ಲೀಲ ಹೇಳಿಕೆ: ತನ್ನ ಮೇಲೆ ದಾಖಲಾಗಿರುವ ವಿವಿಧ ಎಫ್‌ಐಆರ್‌ಗಳ ವಿರುದ್ಧ ಸುಪ್ರೀಂ ಮೊರೆಹೋದ ಯೂಟ್ಯೂಬರ್ ರಣವೀರ್‌

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ಮಧ್ಯಂತರ ರಕ್ಷಣೆ ನೀಡಿತಾದರೂ ಎಲ್ಲಾ ಪ್ರಕರಣಗಳ ತನಿಖೆಗೆ ಸಹಕರಿಸಬೇಕು ಹಾಗೂ ಸದ್ಯಕ್ಕೆ ಯಾವುದೇ ಕಾರ್ಯಕ್ರಮ ನೀಡುವಂತಿಲ್ಲ ಎಂದು ಆದೇಶಿಸಿತು.

 ಜೈಪುರ ಸೇರಿದಂತೆ ಅಲಹಾಬಾದಿಯಾ ವಿರುದ್ಧ ವಿವಿಧೆಡೆ ದಾಖಲಾಗಿರುವ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಆತನನ್ನು ಬಂಧಿಸದಂತೆ ತಡೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ ಹೊಸದಾಗಿ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಬಾರದು. ಜೀವ ಬೆದರಿಕೆ ಇದ್ದಲ್ಲಿ ಮಹಾರಾಷ್ಟ್ರ ಮತ್ತು ಅಸ್ಸಾಂನ ಸ್ಥಳೀಯ ಪೊಲೀಸರ ನೆರವು ಪಡೆಯಲು ಅಲಹಾಬಾದಿಯಾ ಸ್ವತಂತ್ರ. ಪೊಲೀಸರಿಗೆ ಆತ ಪಾಸ್‌ಪೋರ್ಟ್‌ ಒಪ್ಪಿಸಬೇಕು. ಸುಪ್ರೀಂ ಕೋರ್ಟ್‌ ಅನುಮತಿ ಇಲ್ಲದೆ ಆತ ದೇಶ ತೊರೆಯುವಂತಿಲ್ಲ. ಆತ ಹಾಗೂ ಆತನ ಸಹಚರರು ಸದ್ಯಕ್ಕೆ ಬೇರಾವುದೇ ಪ್ರದರ್ಶನ ನೀಡುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ವಿಚಾರಣೆ ವೇಳೆ, ಅಲಾಹಾಬಾದಿಯಾ ಮಾತುಗಳನ್ನು ನ್ಯಾಯಾಲಯ ತೀವ್ರವಾಗಿ ಖಂಡಿಸಿತು.

"ನಿಮ್ಮ ಮಾತುಗಳಿಂದ ಪೋಷಕರು, ಹೆಣ್ಣುಮಕ್ಕಳು ಹಾಗೂ ಸಹೋದರಿಯರು ನಾಚಿಕೆಪಡುತ್ತಿದ್ದಾರೆ. ಇಡೀ ಸಮಾಜವೇ ನಾಚಿಕೆಪಡುವಂತಾಗಿದೆ. ನೀವು ಮತ್ತು ನಿಮ್ಮ ಬೆಂಬಲಿಗರು ಇಷ್ಟು ಅಧಃಪತನಕ್ಕೆ ಇಳಿದಿದ್ದೀರಿ. ಕಾನೂನು ಮತ್ತು ವ್ಯವಸ್ಥೆಯ ನಿಯಮ ಪಾಲಿಸಬೇಕು. ತನ್ನ ಹೆತ್ತವರಿಗೆ ನೋವು ಮಾಡಿರುವ ಬಗ್ಗೆ ಆತ ನಾಚಿಕೆಪಡಬೇಕು. ನಾವೇನು ದಂತ ಗೋಪುರಗಳಲ್ಲಿಲ್ಲ. ಅವನು ಆಸ್ಟ್ರೇಲಿಯಾದ ಕಾರ್ಯಕ್ರಮವೊಂದನ್ನು ಹೇಗೆ ನಕಲು ಮಾಡಿ ಪ್ರದರ್ಶಿಸಿದ್ದಾನೆ ಎಂಬುದು ನಮಗೆ ತಿಳಿದಿದೆ. ಅಂತಹ ಕಾರ್ಯಕ್ರಮಗಳಲ್ಲಿ ಎಚ್ಚರಿಕೆ ನೀಡಲಾಗಿರುತ್ತದೆ" ಎಂದು ನ್ಯಾಯಾಲಯ ಅಲಾಹಾಬಾದಿಯಾ ವಿರುದ್ಧ ಸಿಡಿಯಿತು.

ಅಲಾಹಾಬಾದಿಯಾ ಅವರ ಮಾತುಗಳಿಂದ ಪೋಷಕರು, ಹೆಣ್ಣುಮಕ್ಕಳು ಹಾಗೂ ಸಹೋದರಿಯರು ನಾಚಿಕೆಪಡುತ್ತಿದ್ದಾರೆ.
ಸುಪ್ರೀಂ ಕೋರ್ಟ್

ವಿಚಾರಣೆ ವೇಳೆ ನ್ಯಾಯಾಲಯ ಇಂತಹ ಮಾತನಾಡಿರುವವರದ್ದು ತುಂಬಾ ಕೊಳಕು ಹಾಗೂ ಕೆಟ್ಟ ಮನಸ್ಸು. ಇದು ಹೊಣೆಗೇಡಿತನದ ಪರಮಾವಧಿ ಇರಬೇಕು. ಇಂತಹ ಹೇಳಿಕೆ ಮೂಲಕ ಜನರನ್ನು ಪೋಷಕರನ್ನು ಅವಮಾನಿಸುತ್ತಿದ್ದೀರಿ. ಅವು ವಿಕೃತ ಮನಸ್ಸಿನ ಮಾತುಗಳು ಎಂದಿತು.

ವಿಚಾರಣೆಯ ಒಂದು ಹಂತದಲ್ಲಿ ಅಲಾಹಾಬಾದಿಯಾ ನೀಡಿದ ಹೇಳಿಕೆ ಅಶ್ಲೀಲವಲ್ಲದೆ ಹೋದರೆ ಅಶ್ಲೀಲತೆಯ ಮಾನದಂಡ ಏನು ಎಂದು ತಿಳಿಯಲು ಬಯಸುವುದಾಗಿ ಹೇಳಿತು. ಅಪೂರ್ವಾ ಅರೋರಾ ಪ್ರಕರಣದ ತೀರ್ಪನ್ನು ಅಭಿನವ್‌ ಅವರು ಮತ್ತೊಮ್ಮೆ ಪ್ರಸ್ತಾಪಿಸಿದಾಗ ನ್ಯಾಯಾಲಯ "ನಾವು ತೀರ್ಪನ್ನು ನೋಡಿದ್ದೇವೆ... ಹಾಗೆಂದ ಮಾತ್ರಕ್ಕೆ ನೀವು ಎಲ್ಲಾ ರೀತಿಯ ಅಸಭ್ಯ ನುಡಿಗಳನ್ನಾಡಲು ಪರವಾನಗಿ ಪಡೆದಿದ್ದೀರೋ. ನಿಮ್ಮ ಕೆಟ್ಟ ಮನಸ್ಸನ್ನು ಎಲ್ಲಿ ಮತ್ತು ಯಾವಾಗ ಬೇಕಾದರೂ ಪ್ರದರ್ಶಿಸಬಹುದೇ? ಗುಣಮಟ್ಟ ಎನ್ನುವುದು ಇದನ್ನೇ?" ಎಂದು ಕಿಡಿಕಾರಿತು.

ಅಲಹಾಬಾದಿಯ ಪರವಾಗಿ ವಾದ ಮಂಡಿಸಿದ ಅಭಿನವ್‌ ಚಂದ್ರಚೂಡ್‌ ಕೇವಲ ಹತ್ತು ಸೆಕೆಂಡ್‌ಗಳಷ್ಟು ಅವಧಿಯ ಹೇಳಿಕೆ ನೀಡಿರುವ ತನ್ನ ಕಕ್ಷಿದಾರನಿಗೆ ಜೀವ ಬೆದರಿಕೆ ಇದೆ. ಆತನ ನಾಲಿಗೆ ಕತ್ತರಿಸಿದರೆ ರೂ 5 ಲಕ್ಷ ಬಹುಮಾನ ನೀಡುವುದಾಗಿ ಹೇಳುತ್ತಿದ್ದಾರೆ ಎಂದರು.

Also Read
ನಗ್ನ ಚಿತ್ರಗಳೆಲ್ಲಾ ಅಶ್ಲೀಲವಲ್ಲ: ಕಲಾಕೃತಿಗಳ ಜಪ್ತಿ ಮಾಡಿದ್ದ ಕಸ್ಟಮ್ಸ್ ಅಧಿಕಾರಿಗಳ ನಡೆಗೆ ಬಾಂಬೆ ಹೈಕೋರ್ಟ್ ಕಿಡಿ

ಆದರೆ ಇದಕ್ಕೆ ಅನುಕಂಪ ತೋರದ ನ್ಯಾಯಾಲಯ ಅಲಾಹಾಬಾದಿಯಾ ಬಳಸಿರುವ ಭಾಷೆ ಮತ್ತು ಆತನ ನಡವಳಿಕೆಯನ್ನು ಪ್ರಶ್ನಿಸಿತು.

'ಅರ್ಜಿದಾರ ಬಳಸಿದ ಭಾಷೆಯನ್ನು ಸಮರ್ಥಿಸಿಕೊಳ್ಳುತ್ತಿದ್ದೀರಾ' ಎಂದು ನ್ಯಾ. ಕಾಂತ್‌ ಪ್ರಶ್ನಿಸಿದರು. ಆಗ ಅಭಿನವ್‌ ಅವರು "ನ್ಯಾಯಾಲಯದ ಅಧಿಕಾರಿಯಾಗಿ, ಬಳಸಿದ ಭಾಷೆಯ ಬಗ್ಗೆ ನನಗೆ ಅಸಹ್ಯವಿದೆ" ಎಂದು ಉತ್ತರಿಸಿದರು. ಜೊತೆಗೆ ವಿಚಾರಣೆಯ ಒಂದು ಹಂತದಲ್ಲಿ ಆತನಿಗೆ ಆಸಿಡ್‌ ದಾಳಿಯ ಬೆದರಿಕೆ ಇದೆ ತಮ್ಮ ಕಕ್ಷಿದಾರ ಬಡವ ಎಂದರು. ಆದರೆ ಇದಾವುದಕ್ಕೂ ಕಿವಿಗೊಡದ ನ್ಯಾಯಾಲಯ "ನೀವು (ಅಲಾಹಾಬಾದಿಯಾ) ಜನಪ್ರಿಯತೆಗಾಗಿ ಇಂತಹ ಮಾತುಗಳನ್ನು ಆಡಿದ್ದೀರಿ ಮತ್ತು ಈಗ ಅದಕ್ಕಾಗಿ ಬೆದರಿಕೆ ಒಡ್ಡಲಾಗುತ್ತಿದೆ. ಹಾಲಿ ಮುಖ್ಯಮಂತ್ರಿಯ ವಿರುದ್ಧವೂ ಬೆದರಿಕೆಗಳು ಬಂದಿದ್ದವು ಮತ್ತು ಬೆದರಿಕೆ ಹಾಕಿದ ವ್ಯಕ್ತಿಯೂ ಬಡವ ಎಂದು ನಮಗೆ ತಿಳಿದಿತ್ತು" ಎಂದು ನ್ಯಾಯಮೂರ್ತಿ ಕಾಂತ್ ಎಂದರು.

Kannada Bar & Bench
kannada.barandbench.com