
ವಿವಿಧ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳನ್ನು ನೇಮಿಸುವ ತಮಿಳುನಾಡು ರಾಜ್ಯಪಾಲರ ಅಧಿಕಾರವನ್ನು ಕಸಿದುಕೊಂಡು ಅದನ್ನು ರಾಜ್ಯ ಸರ್ಕಾರಕ್ಕೆ ನೀಡಿರುವ ತಿದ್ದುಪಡಿ ಕಾನೂನುಗಳ ಜಾರಿಗೆ ತಡೆ ನೀಡುವ ಮದ್ರಾಸ್ ಹೈಕೋರ್ಟ್‌ನ ಮೇ 21ರ ನಿರ್ಧಾರವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ರಾಜ್ಯದ ವಾದವನ್ನು ಸರಿಯಾಗಿ ಆಲಿಸದೆ ಮತ್ತು ಹೈಕೋರ್ಟ್‌ನ ರಜಾ ಪೀಠದ ಮುಂದೆ ಪ್ರಕರಣವನ್ನು ಪಟ್ಟಿ ಮಾಡಿರುವ ರೀತಿಯ ಬಗ್ಗೆ ಗಂಭೀರ ಕಳವಳಗಳಿದ್ದರೂ ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ ಎಂದು ತಮಿಳುನಾಡು ಸರ್ಕಾರ ಗಂಭೀರವಾಗಿ ಆಕ್ಷೇಪಿಸಿದೆ.
ಆಕ್ಷೇಪಿಸಲಾಗಿರುವ ತಿದ್ದುಪಡಿ ಕಾಯಿದೆಗಳನ್ನು ತಮಿಳುನಾಡು ಸರ್ಕಾರ ಏಪ್ರಿಲ್‌ನಲ್ಲಿಯೇ ಅಧಿಸೂಚನೆಯ ಮೂಲಕ ಹೊರಡಿಸಿತಾದರೂ ಮೇ ತಿಂಗಳಲ್ಲಿ ರಜಾ ಪೀಠವು ಅಸ್ತಿತ್ವಕ್ಕೆ ಬರುವ ಮೊದಲಷ್ಟೇ ಪ್ರಶ್ನಿಸಲಾಗಿದೆ ಎನ್ನುವ ಅಂಶವನ್ನು ರಾಜ್ಯ ಸರ್ಕಾರವು ಒತ್ತಿ ಹೇಳಿದೆ. ಈ ಕಾನೂನುಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ ವಕೀಲರು ನಿರ್ದಿಷ್ಟ ಪೀಠದ ಮುಂದೆ ಪ್ರಕರಣವನ್ನು ಪಟ್ಟಿ ಮಾಡುವ (ಫೋರಂ ಶಾಪಿಂಗ್) ಇಂಗಿತ ಹೊಂದಿರಬಹುದು ಎಂದೂ ರಾಜ್ಯ ಸರ್ಕಾರವು ಗಂಭೀರ ಕಳವಳವನ್ನು ಹೊರಹಾಕಿದೆ.
"ರಜಾ ದಿನಗಳಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ, ಈ ವಿಷಯದಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ಪ್ರತಿಪಾದಿಸಿಲ್ಲ... ಅರ್ಜಿದಾರರು 9 ಕಾಯಿದೆಗಳನ್ನು ನ್ಯಾಯಾಲಯದ ನಿಯಮಿತ ಪೀಠದ ಮುಂದೆ ಏಕೆ ಪ್ರಶ್ನಿಸಲಿಲ್ಲ ಎಂದು ರಿಟ್ ಅರ್ಜಿಯಲ್ಲಿ ಎಲ್ಲಿಯೂ ವಿವರಿಸಿಲ್ಲ. ಹೀಗಾಗಿ, ಇದು ನಿರ್ದಿಷ್ಟ ಪೀಠದ ಮುಂದೆ ಪ್ರಕರಣವನ್ನು ಪಟ್ಟಿ ಮಾಡಲು ಬಯಸುವ ಫೋರಂ ಶಾಪಿಂಗ್‌ನ ಖಚಿತ ಪ್ರಕರಣವಾಗಿದೆ ... ವಿಭಾಗೀಯ ಪೀಠವು ಹೈಕೋರ್ಟ್‌ನ ರಿಜಿಸ್ಟ್ರಿ ಅಥವಾ ಅರ್ಜಿದಾರರಿಂದ ಈ ಕುರಿತು ವಿವರಣೆಯನ್ನು ಸಹ ಕೇಳಲಿಲ್ಲ, ಬದಲಿಗೆ ಪ್ರಕರಣವನ್ನು ಅತೀವ ಆತುರದಿಂದ ವಿಚಾರಣೆ ನಡೆಸಿತು" ಎಂದು ರಾಜ್ಯ ತನ್ನ ಮನವಿಯಲ್ಲಿ ಹೇಳಿದೆ.
ಹೈಕೋರ್ಟ್‌ನ ನಿಗದಿತ ಸಮಯವನ್ನು ಮೀರಿ ಸಂಜೆ 6.30 ರ ಸುಮಾರಿಗೆ ತಡೆಯಾಜ್ಞೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿದೆ. "ರಜಾ ಪೀಠಗಳು ತುರ್ತು ವಿಷಯಗಳನ್ನು ಆಲಿಸಲು ಸಂಜೆ 4.45 ಕ್ಕಿಂತ ಹೆಚ್ಚು ಸಮಯ ಕುಳಿತುಕೊಳ್ಳುವುದು ಅಸಹಜವಲ್ಲದಿದ್ದರೂ, ಜೂನ್‌ಗಿಂತ ಮುಂಚಿತವಾಗಿ ರಾಜ್ಯವು ಆಕ್ಷೇಪಾರ್ಹ ಕಾನೂನುಗಳ ಅಡಿಯಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳುವ ಉದ್ದೇಶ ಹೊಂದಿಲ್ಲದಿರುವಾಗ, ವಿಭಾಗೀಯ ಪೀಠವು ಈ ರಿಟ್ ಅರ್ಜಿಯನ್ನು ಅತೀವ ಆತುರದಿಂದ ಒಂದೇ ದಿನದಲ್ಲಿ ವಿಚಾರಣೆ ಮಾಡುವ ಅಗತ್ಯವಾಗಲಿ ಅಥವಾ ಕಾರಣವಾಗಲಿ ಇರಲಿಲ್ಲ" ಎಂದು ರಾಜ್ಯವು ಆಕ್ಷೇಪಿಸಿದೆ.
ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಪರವಾಗಿ ಹಾಜರಿದ್ದ ಹಿರಿಯ ವಕೀಲ ಪಿ. ವಿಲ್ಸನ್ ಅವರನ್ನು ಪೀಠವು ತರಾಟೆಗೆ ತೆಗೆದುಕೊಂಡಿದ್ದನ್ನೂ ಸಹ ರಾಜ್ಯ ಸರ್ಕಾರ ಪ್ರಶ್ನಿಸಿದೆ.
ಹೈಕೋರ್ಟ್ ವಿಚಾರಣೆಯ ವೇಳೆ, ರಾಜ್ಯಕ್ಕೆ ಪ್ರತಿಕ್ರಿಯಿಸಲು ಹೆಚ್ಚಿನ ಸಮಯ ನೀಡುವ ಬದಲು ಮೇ 21 ರಂದು ಪ್ರಕರಣದ ವಿಚಾರಣೆ ನಡೆಸಲು ಮುಂದಾದ ಬಗ್ಗೆ ವಿಲ್ಸನ್ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ, ಪ್ರಕರಣದಲ್ಲಿ ವಿಲ್ಸನ್ ಅವರು ತೋರಿರುವ ನಡೆ ನ್ಯಾಯಾಲಯಕ್ಕೆ ಸಹಕರಿಸುವ ರೀತಿಯಲ್ಲಿಲ್ಲ ಬದಲಿಗೆ ನ್ಯಾಯಾಲಯದ ಪ್ರಕ್ರಿಯೆಯನ್ನು ಅಡ್ಡಿಪಡಿಸುವಂತಿದೆ ಎಂದು ಪೀಠವು ಆಕ್ಷೇಪಿಸಿತ್ತು. ಈ ವಿಚಾರವನ್ನು ಸಹ ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗಿದೆ.