ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ

ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವುದಕ್ಕಾಗಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
Jagdeep Dhankhar, Vice President of India
Jagdeep Dhankhar, Vice President of India
Published on

ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಅವರು ಆರೋಗ್ಯದ ಕಾರಣ ಉಲ್ಲೇಖಿಸಿ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಆರೋಗ್ಯಕ್ಕೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆ ಪಾಲಿಸಲು ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

Also Read
ಉಪ ರಾಷ್ಟ್ರಪತಿ ಚುನಾವಣಾ ಕಣದಲ್ಲಿ ʼಒಲ್ಲದ ಮನಸಿನ ರಾಜಕಾರಣಿʼ ಜಗದೀಪ್ ಧನಕರ್

"ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ, ತಕ್ಷಣದಿಂದ ಜಾರಿಗೆ ಬರುವಂತೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.

ಸೇವೆಯ ಅವಧಿಯಲ್ಲಿ ತಮಗೆ ಬೆಂಬಲ ನೀಡಿದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

"ನನ್ನ ಅಧಿಕಾರಾವಧಿಯಲ್ಲಿ ನನಗೆ ನೀಡಿದ ಅಚಲ ಬೆಂಬಲ ಮತ್ತು ಕಾರ್ಯ ಸಂಬಂಧಕ್ಕಾಗಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಅರ್ಪಿಸುತ್ತೇನೆ. ಗೌರವಾನ್ವಿತ ಪ್ರಧಾನ ಮಂತ್ರಿ ಮತ್ತು ಗೌರವಾನ್ವಿತ ಸಚಿವ ಸಂಪುಟಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. ಪ್ರಧಾನ ಮಂತ್ರಿಯವರ ಸಹಕಾರ ಮತ್ತು ಬೆಂಬಲ ಅಮೂಲ್ಯವಾದುದು. ನಾನು ನನ್ನ ಅಧಿಕಾರಾವಧಿಯಲ್ಲಿ ಬಹಳಷ್ಟು ಕಲಿತಿದ್ದೇನೆ" ಎಂದು ಅವರು ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾರೆ.

ಧನಕರ್‌ ಅವರು ಆಗಸ್ಟ್ 11 2022ರಂದು ಭಾರತದ 14ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿುದ್ದರು.

1951ರಲ್ಲಿ ರಾಜಸ್ಥಾನದಲ್ಲಿ ಜನಿಸಿದ ಅವರು ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದರು. 1990ರಲ್ಲಿ ರಾಜಸ್ಥಾನ ಹೈಕೋರ್ಟ್‌ನ ಹಿರಿಯ ವಕೀಲರಾಗಿ ನೇಮಕಗೊಂಡರು.

Also Read
ಕೊಲಿಜಿಯಂ ಕುರಿತಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ

ತೊಂಬತ್ತರ ದಶಕದ ಆರಂಭದಲ್ಲಿ ಧನಕರ್‌ ಅವರು ಸಂಸತ್ ಸದಸ್ಯರಾಗಿ, ಶಾಸಕರಾಗಿ ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. 2019ರಿಂದ 2022ರವರೆಗೆ, ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರದೊಂದಿಗಿನ ಘರ್ಷಣೆಗಳಿಂದಾಗಿ ಅವರು ಗಮನ ಸೆಳೆದಿದ್ದರು.   

ರಾಜ್ಯಸಭೆಯ ಉಪಸಭಾಪತಿಯಾಗಿ ಸಭಾಪತಿಯಾಗಿ ಧನಕರ್‌ ಅವರು ಸಂಸತ್‌ ಸದಸ್ಯರೊಂದಿಗೆ ನಡೆಸಿದ ಚರ್ಚೆ ಹಾಗೂ ನ್ಯಾಯಾಂಗದ ವಿರುದ್ಧ ಮಾಡಿದ ಕಟು ಟೀಕೆಗಳಿಂದಾಗಿಯೂ ಧನಕರ್‌ ಸುದ್ದಿಯಲ್ಲಿದ್ದರು.

[ರಾಜೀನಾಮೆ ಪತ್ರದ ಪ್ರತಿ]

Attachment
PDF
Jagdeep_Dhankar_Resignation_Letter
Preview
Kannada Bar & Bench
kannada.barandbench.com