ಸಂತ್ರಸ್ತೆ ಅಪಹರಣ: ಶಾಸಕ ರೇವಣ್ಣ ಜಾಮೀನು ರದ್ದು ಕೋರಿರುವ ಎಸ್‌ಐಟಿ ಅರ್ಜಿ ಕುರಿತ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಸಂತ್ರಸ್ತೆ ಕೈಮುಗಿದು ಮಾಜಿ ಸಂಸದ ಪ್ರಜ್ವಲ್‌ ಅನ್ನು ಅತ್ಯಾಚಾರ ಮಾಡದಂತೆ ಕೋರಿದ್ದಾರೆ. ಇಂಥ ಆರೋಪಿಯನ್ನು ರಕ್ಷಿಸಲು ರೇವಣ್ಣ ಅವರು ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ್ದಾರೆ. ಇದು ಅತ್ಯಂತ ಘೋರ ಕೃತ್ಯವಾಗಿದೆ ಎಂದು ವಾದಿಸಿದ ಎಸ್‌ಐಟಿ ವಕೀಲರು.
H D Revanna and Karnataka HC
H D Revanna and Karnataka HC
Published on

ಸಂತ್ರಸ್ತೆ ಅಪಹರಣದ ಪ್ರಕರಣದಲ್ಲಿ ಶಾಸಕ ಎಚ್‌ ಡಿ ರೇವಣ್ಣಗೆ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ವಿಶೇಷ ತನಿಖಾ ದಳ (ಎಸ್‌ಐಟಿ) ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಆದೇಶ ಕಾಯ್ದಿರಿಸಿದೆ.

ಜೆಡಿಎಸ್‌ ಮುಖಂಡ ಎಚ್‌ ಡಿ ರೇವಣ್ಣಗೆ ವಿಚಾರಣಾಧೀನ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಎಸ್‌ಐಟಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಎಸ್‌ಐಟಿ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್‌ ಅವರು “ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ರೇವಣ್ಣಗೆ ಜಾಮೀನು ನೀಡುವಾಗ ವಿಚಾರಣಾಧೀನ ನ್ಯಾಯಾಲಯ ಪ್ರಮಾದ ಎಸಗಿದೆ. ಸಂತ್ರಸ್ತೆ ಮಹಿಳೆಯರನ್ನು ಅಪಹರಿಸಿ ಏಳನೇ ಆರೋಪಿಯ ಮನೆಯಲ್ಲಿ ಇಡಲಾಗಿತ್ತು. ಆಕೆಗೂ ಆತನಿಗೂ ಯಾವುದೇ ಸಂಬಂಧ ಇರಲಿಲ್ಲ. ಆ ಸ್ಥಳದಲ್ಲಿ ಮಹಜರ್‌ ನಡೆಸಿದಾಗ, ಆಕೆಯ ಕೂದಲು ದೊರೆತಿದೆ” ಎಂದರು.

ಮುಂದುವರಿದು, “ಸಂತ್ರಸ್ತ ಮಹಿಳೆಯನ್ನು ಒತ್ತೆ ಇಟ್ಟಿದ್ದ ಏಳನೇ ಆರೋಪಿಯು ಈ ಹಿಂದೆ ರೇವಣ್ಣಗೆ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದರು ಎಂಬುದು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ, ಅವರ ಜಾಮೀನು ರದ್ದುಪಡಿಸಬೇಕು” ಎಂದು ಕೋರಿದರು.

“ಸಂತ್ರಸ್ತೆಯು ಕೈಮುಗಿದು ಮಾಜಿ ಸಂಸದ ಪ್ರಜ್ವಲ್‌ ಅನ್ನು ಅತ್ಯಾಚಾರ ಮಾಡದಂತೆ ಕೋರಿದ್ದಾರೆ. ಇಂಥ ಆರೋಪಿಯನ್ನು ರಕ್ಷಿಸಲು ರೇವಣ್ಣ ಅವರು ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ್ದಾರೆ. ಇದು ಅತ್ಯಂತ ಘೋರ ಕೃತ್ಯವಾಗಿದೆ” ಎಂದು ಆಪಾದಿಸಿದರು.

ರೇವಣ್ಣ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಇಡೀ ಘಟನೆ ನೋಡಿದರೆ ಇಲ್ಲಿ ಐಪಿಸಿ ಸೆಕ್ಷನ್‌ 364ಎ ಅನ್ವಯಿಸುವುದಿಲ್ಲ. ಪ್ರಕರಣದಲ್ಲಿ ಯಾವುದೇ ಆರೋಪಿಯು ಸಂತ್ರಸ್ತೆಗೆ ಯಾವುದೇ ಹಾನಿ ಮಾಡಿಲ್ಲ. ಬೆದರಿಕೆ ಹಾಕಿಲ್ಲ ಎಂಬುದು ವಿಚಾರಣಾಧೀನ ನ್ಯಾಯಾಲಯ ಸ್ಪಷ್ಟವಾಗಿ ಆದೇಶದಲ್ಲಿ ದಾಖಲಿಸಿದೆ” ಎಂದರು.

Also Read
ಲೈಂಗಿಕ ದೌರ್ಜನ್ಯ ಪ್ರಕರಣ: ಶಾಸಕ ಎಚ್‌ ಡಿ ರೇವಣ್ಣಗೆ ಜಾಮೀನು ಮಂಜೂರು ಮಾಡಿದ ವಿಶೇಷ ನ್ಯಾಯಾಲಯ

ಇದಲ್ಲದೆ, ಮೈಸೂರು ಜಿಲ್ಲೆಯ ಕೆ ಆರ್‌ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಆಗಸ್ಟ್‌ 8ಕ್ಕೆ ನ್ಯಾಯಾಲಯ ಮುಂದೂಡಿತು.

ಉಳಿದಂತೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಆರು ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆ 4 ಗಂಟೆಗೆ ನಡೆಸಲಾಗುವುದು ಎಂದು ಹೇಳಿ ಹೈಕೋರ್ಟ್‌ ವಿಚಾರಣೆ ಮುಂದೂಡಿದೆ. 

Kannada Bar & Bench
kannada.barandbench.com