ಅಪರಾಧಿಗಳು ತಮ್ಮ ಆದಾಯದ ವಿವರ ಬಹಿರಂಗಪಡಿಸಬೇಕೆಂದು ಆದೇಶ ನೀಡಿದ ದೆಹಲಿ ಹೈಕೋರ್ಟ್‌

“ದುರದೃಷ್ಟವಶಾತ್ ಅಪರಾಧ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಸಂತ್ರಸ್ತರು ಮರೆತುಹೋದ ಜನರಾಗಿದ್ದಾರೆ. ಈ ವ್ಯವಸ್ಥೆ ಎಲ್ಲರಿಗೂ ಅಂದರೆ ಆರೋಪಿಗಳು, ಸಮಾಜ ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸುವುದಕ್ಕಾಗಿ ಇದೆ” ಎಂದು ನ್ಯಾಯಾಲಯ ತಿಳಿಸಿದೆ.
Justices Brijesh Sethi, J.R. Midha, Rajnish Bhatnagar
Justices Brijesh Sethi, J.R. Midha, Rajnish Bhatnagar
Published on

ವಿಚಾರಣಾ ನ್ಯಾಯಾಲಯಗಳು ಸಂತ್ರಸ್ತರಿಗೆ ಪರಿಹಾರ ಒದಗಿಸಲು ಅನುಕೂಲವಾಗುವಂತೆ ಅಪರಾಧ ಸಾಬೀತಾದವರು ತಮ್ಮ ಆಸ್ತಿ, ಆದಾಯ ಹಾಗೂ ಖರ್ಚುವೆಚ್ಚಗಳನ್ನು ಬಹಿರಂಗಪಡಿಸುವ ಅಫಿಡವಿಟ್‌ ಸಲ್ಲಿಸಬೇಕೆಂದು ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಹೈಕೋರ್ಟ್‌ ನಿರ್ದೇಶನ ನೀಡಿದೆ. ಇದರ ಜೊತೆಗೆ ವಿಚಾರಣೆಯ ಸಾರಾಂಶ ಆಧರಿಸಿ ಪ್ರತಿ ಅಪರಾಧ ಪ್ರಕರಣದ ಸಂತ್ರಸ್ತ ಪ್ರಭಾವ ವರದಿಯನ್ನು (Victim Impact Report) ಸಲ್ಲಿಸಬೇಕು ಎಂದು ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಿದೆ.

ಬಳಿಕ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯ ಸಂತ್ರಸ್ತ ಪ್ರಭಾವ ವರದಿ, ಅಪರಾಧಿಗಳ ಪರಿಹಾರ ಪಾವತಿಸುವ ಸಾಮರ್ಥ್ಯ, ವಿಚಾರಣೆಗಾಗಿ ಮಾಡಿದ ಖರ್ಚು, ಸಂತ್ರಸ್ತರಿಗಾಗಿ ಪರಿಹಾರ ನೀಡಲು ಪಕ್ಷಗಳು ಹಾಗೂ ವಿಚಾರಣೆಗಾಗಿ ಸರ್ಕಾರ ವಿನಿಯೋಗಿಸಿದ ಹಣದ ವಿವರವನ್ನು ಪರಿಗಣಿಸಬೇಕು ಎಂದು ಕೂಡ ನ್ಯಾಯಾಲಯ ತಿಳಿಸಿದೆ.

Also Read
ಬೆಂಗಳೂರು ಗಲಭೆ: ಹಾನಿ ಅಂದಾಜಿಗೆ ನಿವೃತ್ತ ನ್ಯಾ. ಎಚ್ ಎಸ್ ಕೆಂಪಣ್ಣರನ್ನು ಪರಿಹಾರ ಆಯುಕ್ತರಾಗಿ ನೇಮಿಸಿದ ಹೈಕೋರ್ಟ್

"ಸಿಆರ್‌ಪಿಸಿಯ ಸೆಕ್ಷನ್ 357 (3)ರಲ್ಲಿ ಸಂತ್ರಸ್ತರಿಗೆ ಪರಿಹಾರ ಪಾವತಿಸುವ ವಿಚಾರ ತಿಳಿಸುವಾಗ may (ಮಾಡಬಹುದು) ಎಂಬುದರ ಅರ್ಥ shall (ಮಾಡತಕ್ಕದ್ದು) ಎಂದಾಗುತ್ತದೆ. ಆದ್ದರಿಂದ ಸಿಆರ್‌ಪಿಸಿಯ 357ನೇ ಸೆಕ್ಷನ್‌ ಕಡ್ಡಾಯವಾಗಿದೆ. ಪ್ರತಿ ಕ್ರಿಮಿನಲ್ ಪ್ರಕರಣಗಳಲ್ಲಿ ಪರಿಹಾರಕ್ಕೆ ಮುಂದಾಗಬೇಕೆಂದು ಸಿಆರ್‌ಪಿಸಿಯ 357ನೇ ಸೆಕ್ಷನ್‌ ನ್ಯಾಯಾಲಯಕ್ಕೆ ಕರ್ತವ್ಯ ನಿಗದಿಪಡಿಸುತ್ತದೆ" ಎಂದು ಪೀಠ ವಿವರಿಸಿದೆ. ಐಪಿಸಿ ಸೆಕ್ಷನ್ 302/34ರ ಅಡಿಯಲ್ಲಿ ಶಿಕ್ಷೆಗೊಳಗಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ವಿವಿಧ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಜೆ ಆರ್ ಮಿಧಾ, ರಜನೀಶ್ ಭಟ್ನಾಗರ್ ಹಾಗೂ ಬ್ರಿಜೇಶ್ ಸೇಥಿ ಅವರಿದ್ದ ಹೈಕೋರ್ಟ್‌ನ ಪೂರ್ಣಪೀಠ ಆದೇಶ ಜಾರಿ ಮಾಡಿದೆ.

ನ್ಯಾಯಾಲಯದ ನಿರ್ದೇಶನದಂತೆ ನಿಗದಿಯಾದ ಪರಿಹಾರ ಮೊತ್ತವನ್ನು ಅಪರಾಧಿ ನೇರವಾಗಿ ಡಿಎಸ್‌ಎಲ್‌ಎಸ್‌ಎಗೆ ಜಮಾ ಮಾಡಲಿದ್ದು ಅದು ಯೋಜನೆಯಂತೆ ಸಂತ್ರಸ್ತರಿಗೆ ವಿತರಿಸಲಿದೆ. ಪರಿಹಾರ ನೀಡುವ ಸಾಮರ್ಥ್ಯ ಆರೋಪಿಗೆ ಇಲ್ಲದಿದ್ದರೆ ಅಥವಾ ಆರೋಪಿಗೆ ನೀಡಲಾಗಿರುವ ಪರಿಹಾರ ಸಮರ್ಪಕವಾಗಿಲ್ಲದಿದ್ದರೆ ಸಿಆರ್‌ಪಿಸಿಯ ಸೆಕ್ಷನ್‌ 357 ಎ ಅಡಿಯಲ್ಲಿ ಡಿಎಸ್‌ಎಲ್‌ಎ, 2018ರ ದೆಹಲಿ ಸಂತ್ರಸ್ತರ ಪರಿಹಾರ ಯೋಜನೆಯಡಿ ಪರಿಹಾರ ನೀಡತಕ್ಕದ್ದು ಎಂದು ಸ್ಪಷ್ಟಪಡಿಸಿದೆ.

ಬಾಕಿ ಇರುವ ಮೇಲ್ಮನವಿ/ ಮರುಪರಿಶೀಲನಾ ಅರ್ಜಿಗಳ ಸಂದರ್ಭದಲ್ಲಿ ಸಿಆರ್‌ಪಿಸಿಯ ಸೆಕ್ಷನ್ 357ರ ಅಡಿ ಪರಿಹಾರ ನೀಡಲು ಸಾಧ್ಯವಾಗದಿದ್ದಾಗ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿಚಾರಣೆ ಪ್ರಕ್ರಿಯೆಯ ಅನುಸರಣೆಗಾಗಿ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ತನ್ನ 133 ಪುಟಗಳ ತೀರ್ಪಿನಲ್ಲಿ "ಸಂತ್ರಸ್ತರು ದುರದೃಷ್ಟವಶಾತ್ ಕ್ರಿಮಿನಲ್ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಮರೆತುಹೋದ ಜನರಾಗಿದ್ದಾರೆ. ಅಪರಾಧ ನ್ಯಾಯ ವ್ಯವಸ್ಥೆ ಎಲ್ಲರಿಗೂ ಅಂದರೆ ಆರೋಪಿಗಳು, ಸಮಾಜ ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸುವುದಕ್ಕಾಗಿ ಇದೆ. ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಇಲ್ಲದಿದ್ದರೆ ನ್ಯಾಯವು ಅಪೂರ್ಣವಾಗಿ ಉಳಿಯುತ್ತದೆ. ಸಂತ್ರಸ್ತರಿಗೆ ಪರಿಹಾರ ದೊರೆತಾಗ ಮಾತ್ರ ನ್ಯಾಯದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ” ಎಂದು ಅದು ತಿಳಿಸಿದೆ.

Kannada Bar & Bench
kannada.barandbench.com