
ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತರ ಗುರುತನ್ನು ಎಫ್‌ಐಆರ್ ಸೇರಿದಂತೆ ಪ್ರಕರಣದ ಯಾವುದೇ ದಾಖಲೆಯಲ್ಲಿ ಬಹಿರಂಗಪಡಿಸಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಈಚೆಗೆ ಆದೇಶಿಸಿದೆ.
ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ ಅತ್ಯಾಚಾರ ಸಂತ್ರಸ್ತೆಯ ಹೆಸರಿರುವುದನ್ನು ಗಮನಿಸಿದ ನ್ಯಾಯಮೂರ್ತಿ ಪಿ ವೇಲ್ಮುರುಗನ್ ಜೂನ್ 19ರಂದು ಈ ಆದೇಶ ಹೊರಡಿಸಿದರು.
ಇಂತಹ ಲೋಪಗಳು ಪುನರಾವರ್ತನೆಯಾದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವುದಾಗಿ ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಕಾನೂನಿನಡಿ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಕೆಲವು ಸೆಕ್ಷನ್‌ಗಳಡಿಯಲ್ಲಿನ ಅಪರಾಧಗಳು, ಅದರಲ್ಲಿಯೂ ಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಮಗು ಇಲ್ಲವೇ ಸಂತ್ರಸ್ತರ ಗುರುತನ್ನು ಯಾವುದೇ ರೂಪದಲ್ಲಿ ಬಹಿರಂಗಪಡಿಸಬಾರದು ಇದಕ್ಕೆ ಹೊರತಾಗಿ ನಡೆದುಕೊಂಡಿರುವುದು ಕಂಡುಬಂದರೆ, ಇಡೀ ಪೊಲೀಸ್ ಇಲಾಖೆಯೇ ಜವಾಬ್ದಾರನಾಗುತ್ತದೆ ಮತ್ತು ನ್ಯಾಯಾಲಯ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಕ್ರಮ ಆರಂಭಿಸುವ ಮೂಲಕ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಎಲ್ಲಾ ತನಿಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವಂತೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರು ಮತ್ತು ಚೆನ್ನೈ ಮಹಾನಗರದ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಅತ್ಯಾಚಾರಕ್ಕೊಳಗಾದವರ ಗುರುತನ್ನು ಬಹಿರಂಗಪಡಿಸುವಂತಿಲ್ಲ ಎಂದು ಭಾರತೀಯ ಕಾನೂನೇ ಹೇಳುತ್ತದೆ. ಈ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟವಾದ ನಿರ್ದೇಶನ ನೀಡಿದ್ದರೂ ತನಿಖಾಧಿಕಾರಿಗಳು ಆ ಕಾನೂನನ್ನಾಗಲೀ, ಸುಪ್ರೀಂ ಕೋರ್ಟ್ ನಿರ್ದೇಶನವನ್ನಾಗಲೀ ಪಾಲಿಸುತ್ತಿಲ್ಲ ಎಂದು ಅದು ಕಿಡಿಕಾರಿದೆ.
ಪ್ರಸ್ತುತ ಪ್ರಕರಣದ ಸಂತ್ರಸ್ತೆಯ ಹೆಸರನ್ನು ಎಫ್‌ಐಆರ್ ಮತ್ತಿತರ ಹೇಳಿಕೆ ಅಥವಾ ದಾಖಲೆಗಳಿಂದ ತಕ್ಷಣವೇ ತೆಗೆದುಹಾಕುವಂತೆ ಅದು ಪೊಲೀಸರಿಗೆ ಆದೇಶಿಸಿದೆ.
[ತೀರ್ಪಿನ ಪ್ರತಿ]