ವಿಜಯ್ ರ‍್ಯಾಲಿ ಕಾಲ್ತುಳಿತ ಪ್ರಕರಣ: ಟಿವಿಕೆ ಪಕ್ಷದ ಪದಾಧಿಕಾರಿಗಳಿಗಿಲ್ಲ ನಿರೀಕ್ಷಣಾ ಜಾಮೀನು

ಕರೂರು ಜಿಲ್ಲೆಯ ವೇಲುಸ್ವಾಮಿಪುರಂನಲ್ಲಿ ನಡೆದಿದ್ದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ 41 ಮಂದಿ ಮೃತಪಟ್ಟಿದ್ದರು.
N Anand, CTR Nirmal Kumar
N Anand, CTR Nirmal Kumar
Published on

ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೆಪ್ಟೆಂಬರ್ 27ರಂದು ನಡೆಸಿದ್ದ ರಾಜಕೀಯ ಸಮಾವೇಶದಲ್ಲಿ ಉಂಟಾದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ ನಂತರ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್ ಆನಂದ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ಸಿಟಿಆರ್ ನಿರ್ಮಲ್ ಕುಮಾರ್ ಅವರಿಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ನ್ಯಾಯಮೂರ್ತಿ ಎಂ ಜೋತಿರಾಮನ್ ಹೊರಡಿಸಿರುವ ಆದೇಶದಲ್ಲಿ, "ಆಪಾದಿತ ಅಪರಾಧಗಳಲ್ಲಿ ಅರ್ಜಿದಾರರು/ಆರೋಪಿಗಳ ಪಾತ್ರ, ಈ ಪ್ರಕರಣದಲ್ಲಿನ ಅಪರಾಧಗಳ ಸ್ವರೂಪ ಮತ್ತು ಗಂಭೀರತೆಯನ್ನು ಪರಿಗಣಿಸಿ, ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ನ್ಯಾಯಾಲಯವು ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಲು ಒಲವು ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆಪಾದಿತ ಘಟನೆಯು 27.09.2025 ರಂದು ನಡೆದಿದ್ದು, ಪ್ರಕರಣದಲ್ಲಿ ಗಾಯಗೊಂಡಿರುವ ಅನೇಕ ವ್ಯಕ್ತಿಗಳು ಇನ್ನೂ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಅಂಶವನ್ನು ಇದೇ ವೇಳೆ ನ್ಯಾಯಾಲಯವು ಪರಿಗಣಿಸಿತು.

ಇದಕ್ಕೂ ಮುನ್ನ ನಿರೀಕ್ಷಣಾ ಜಾಮೀನು ಕೋರಿದ್ದ ಆನಂದ್ ಮತ್ತು ನಿರ್ಮಲ್ ಕುಮಾರ್ ಪರವಾಗಿ ವಕೀಲ ವಿ ರಾಘವಾಚಾರಿ ವಾದ ಮಂಡಿಸಿದರು. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವು ಕಟ್ಟುಕಥೆಯಾಗಿದೆ ಎಂದು ವಾದಿಸಿದರು.

"ನನ್ನ ವಿರುದ್ಧದ ಆರೋಪಗಳನ್ನು ದಯವಿಟ್ಟು ಗಮನಿಸಿ. ನಮ್ಮ ನಾಯಕ (ವಿಜಯ್) (ರ‍್ಯಾಲಿಗೆ) ಬಂದರು, ಅವರು 4 ಗಂಟೆ ತಡವಾಗಿ ಬಂದರು. ನನ್ನ ವಿರುದ್ಧ ದಾಖಲಿಸಿರುವ ಪ್ರಕರಣದ ಸಾರವೆಂದರೆ ನಾನು 3 ಗಂಟೆಗೆ ಬರುವ ಬದಲು 7 ಗಂಟೆಗೆ ಏಕೆ ಬಂದೆ ಎನ್ನುವುದಾಗಿದೆ. ನಾನು ಕೇಳುತ್ತೇನೆ, ಇದು (ತಡವಾಗಿ ಬಂದಿರುವುದು) ಕ್ರಿಮಿನಲ್ ಅಪರಾಧವೇ? ಇಡೀ ಪ್ರಕರಣದಲ್ಲಿ ರಾಜ್ಯ ಸರ್ಕಾರವು ತನ್ನ ಕೈಚಳಕ ತೋರಿಸಿದೆ. ಅಪಘಾತವನ್ನು ಅಪರಾಧಿಕ ಕೊಲೆಯಾಗಿ ಪರಿವರ್ತಿಸಲು ಸಾಧ್ಯವಿಲ್ಲ" ಎಂದು ಅವರು ವಾದಿಸಿದರು.

ಮುಂದುವರೆದು, ರ‍್ಯಾಲಿ ನಡೆದ ಸ್ಥಳವನ್ನು ಸ್ಥಳೀಯ ಅಧಿಕಾರಿಗಳು ಟಿವಿಕೆಗೆ ಕಾರ್ಯಕ್ರಮ ಅಯೋಜನೆಗೆ ನೀಡಿದ್ದರು. ಆದರೆ ಟಿವಿಕೆಯು ಕಾರ್ಯಕ್ರಮಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದಾಗ ಕೋರಿದ್ದು ಈ ಸ್ಥಳವನ್ನಲ್ಲ, ಬೇರೆಯ ಸ್ಥಳವನ್ನುಎಂದು ಅವರು ಹೇಳಿದರು.

"ಈ ಸ್ಥಳವನ್ನು ಏಕೆ ನೀಡಲಾಯಿತು ಎಂಬುದನ್ನು ಸರ್ಕಾರವು ವಿವರಿಸಬೇಕಾಗಿದೆ. ಅದು ಅವರ ಕೆಲಸ. ಅವರಿಗೆ ಗುಪ್ತಚರ ಇಲಾಖೆ ಇದೆ. ಇದೇ ಸ್ಥಳದಲ್ಲಿಯೇ ಕಾರ್ಯಕ್ರಮ ಆಯೋಜಿಸಲು ಮತ್ತೊಂದು ಪಕ್ಷಕ್ಕೆ (ಎಐಎಡಿಎಂಕೆ) ಸೂಕ್ತವಲ್ಲ ಎಂದು ಹೇಳಲಾಗಿತ್ತು" ಎಂದು ರಾಘವಾಚಾರಿ ನ್ಯಾಯಾಲಯದ ಗಮನಕ್ಕೆ ತಂದರು. ಅಲ್ಲದೆ, ಜನಸಂದಣಿಯನ್ನು ನಿಯಂತ್ರಿಸುವುದು ರಾಜ್ಯ ಸರ್ಕಾರದ ಕರ್ತವ್ಯದ ಭಾಗವಾಗಿದೆ ಎಂದು ಪ್ರತಿಪಾದಿಸಿದರು.

ಹಿನ್ನೆಲೆ: ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೆಪ್ಟೆಂಬರ್ 27ರಂದು ನಡೆಸಿದ್ದ ರಾಜಕೀಯ ಸಮಾವೇಶದಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟಿದ್ದರು. ಈ  ಹಿನ್ನೆಲೆಯಲ್ಲಿ ವಿಜಯ್‌ ಹೊರತುಪಡಿಸಿ ವಿವಿಧ ಟಿವಿಕೆ ಕಾರ್ಯಕರ್ತರ ವಿರುದ್ಧ ಕೊಲೆಗೆ ಸಮನಲ್ಲದ ಅಪರಾಧಿಕ ನರಹತ್ಯೆ, ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ವೈಫಲ್ಯ, ಜನಸಂದಣಿಯ ಗಾತ್ರ ಮತ್ತು ಸ್ಥಳದ  ವ್ಯವಸ್ಥೆ ಅಂದಾಜಿಸುವಲ್ಲಿ ಎಡವಿದ್ದಕ್ಕಾಗಿ ಎಫ್‌ಐಆರ್‌ ದಾಖಲಿಸಲಾಗಿತ್ತು.

Kannada Bar & Bench
kannada.barandbench.com