

“ಸಾಕ್ಷಿಗಳ ಮೇಲೆ ಒತ್ತಡ ಹೇರುವುದಿಲ್ಲ ಎಂಬ ಮುಚ್ಚಳಿಕೆಯನ್ನು ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನ್ಯಾಯಾಲಯಕ್ಕೆ ನೀಡಿದ್ದಾರೆಯೇ ವಿನಾ ಪ್ರಾಸಿಕ್ಯೂಷನ್‌ಗಲ್ಲ. ನ್ಯಾಯಾಲಯ ವಿಧಿಸುವ ಎಲ್ಲ ಷರತ್ತಿಗೆ ಬದ್ದವಾಗಿರುವುದಾಗಿ ಮುಚ್ಚಳಿಕೆ ಬರೆದುಕೊಟ್ಟು, ಈಗ ಅದನ್ನು ಉಲ್ಲಂಘಿಸಿರುವವರೂ ಅವರೇ” ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು.
ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಜಾಮೀನು ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು.
ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು “ಸಾಕ್ಷಿಗಳ ವಿಚಾರಣೆಯಾಗಿರುವುದು ಬದಲಾದ ಪರಿಸ್ಥಿತಿ ಎಂದಾದರೆ ಆ ಸಾಕ್ಷಿಗಳು ಏನು ಹೇಳಿವೆ ಎಂಬುದನ್ನು ಪರಿಶೀಲಸದೇ ಜಾಮೀನು ಮಂಜೂರು ಮಾಡಲು ಆಧಾರವಾಗಲ್ಲ. ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಜಾಮೀನು ರದ್ದುಪಡಿಸಿದ ಬಳಿಕ ಏನಾಗಲಿದೆ ಎಂಬ ಅಂಶಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ತೀರ್ಪುಗಳಿಲ್ಲ” ಎಂದೂ ಹೇಳಿದರು.
ಅಲ್ಲದೇ, “ಪ್ರಕರಣದಲ್ಲಿ ಇನ್ನೂ ಮೂರು ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ ಎಂಬ ಮಾಹಿತಿ ಒಳಗೊಂಡ ಮೆಮೊ ಸಲ್ಲಿಸಿ, ಮೆರಿಟ್ ಮೇಲೆ ನ್ಯಾಯಾಲಯಗಳು ವಿನಯ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿವೆ” ಎಂಬ ವಿಚಾರವನ್ನೂ ಪೀಠದ ಗಮನಕ್ಕೆ ತಂದರು.
ಈ ಹಂತದಲ್ಲಿ ನ್ಯಾಯಾಲಯವು “ಪ್ರಕರಣದಲ್ಲಿ ಎಲ್ಲಾ ಸಾಕ್ಷಿಗಳು ಪ್ರತಿಕೂಲವಾಗಿದ್ದಾವೆಯೇ?” ಎಂದಿತು.
ಇದಕ್ಕೆ ಪ್ರಸನ್ನಕುಮಾರ್ ಅವರು “ಎಲ್ಲರೂ ಅಲ್ಲ. ಕೆಲವರು ಬೆಂಬಲಿಸಿದ್ದಾರೆ, ಕೆಲವರು ವಿರುದ್ಧವಾಗಿದ್ದಾರೆ... ಸಿಆರ್‌ಪಿಸಿ 164 ಹೇಳಿಕೆ ನೀಡಿದ್ದ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಸಿಪಿ ಶ್ರೇಣಿಯ ಅಧಿಕಾರಿ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದಾರೆ. ಆರಂಭದಲ್ಲಿ ಡಮ್ಮಿ ಆರೋಪಿಗಳು ಶರಣಾಗಿದ್ದರು. ಸಿಬಿಐ ತನಿಖೆ, ಆರೋಪ ಪಟ್ಟಿ ರದ್ದತಿ ಎಲ್ಲವನ್ನೂ ಪ್ರಶ್ನಿಸಿದ್ದ ವಿನಯ್ ಕುಲಕರ್ಣಿ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿದೆ” ಎಂದರು.
“ಜಾಮೀನು ವಿನಾಯಿತಿಯಾಗಿದ್ದು, ಆರೋಪಿ ವಿನಯ್‌ಗೆ ಅದನ್ನು ನೀಡಲಾಗಿತ್ತು. ಷರತ್ತು ಉಲ್ಲಂಘಿಸಿರುವುದರಿಂದ ವಿನಯ್ ಹೊರಗಿರಲು ಲಾಯಕ್ಕಿಲ್ಲ. ವಿನಯ್‌ಗೆ ನೀಡಿದ್ದ ವಿನಾಯಿತಿಗೆ ಅಪಚಾರವಾಗಿದೆ. ಹೀಗಾಗಿ, ಜಾಮೀನು ನೀಡಬಾರದು” ಎಂದರು.
ವಾದ ಆಲಿಸಿದ ಪೀಠವು ವಿಚಾರಣೆಯನ್ನು ನಾಳೆಗೆ ಮುಂದೂಡಿತು.