ಆರೋಪಿ ಮಹಿಳೆಯರ ಕನ್ಯತ್ವ ಪರೀಕ್ಷೆ ಅಸಾಂವಿಧಾನಿಕ: ದೆಹಲಿ ಹೈಕೋರ್ಟ್

ಪರೀಕ್ಷೆ ಅಮಾನವೀಯವಾಗಿದ್ದು ಮಾನವ ಘನತೆಯ ತತ್ವವನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಸರ್ಕಾರ ಇಂತಹ ಪರೀಕ್ಷೆಯನ್ನು ಅವಲಂಬಿಸಬಾರದು ಎಂದು ನ್ಯಾಯಾಲಯ ಹೇಳಿದೆ.
Justice Swarana Kanta Sharma
Justice Swarana Kanta Sharma

ಬಂಧಿತ ಮಹಿಳೆ ಅಥವಾ ಸ್ತ್ರೀ ಆರೋಪಿಯ ಮೇಲೆ ನಡೆಸುವ 'ಕನ್ಯತ್ವ ಪರೀಕ್ಷೆ' ಅಸಾಂವಿಧಾನಿಕ ಮತ್ತು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಘೋಷಿಸಿದೆ.

ಕನ್ಯತ್ವ ಪರೀಕ್ಷೆ ನಡೆಸುವುದರಿಂದ ಮಹಿಳೆಯ ದೈಹಿಕ ಘನತೆಗೆ ಅಡ್ಡಿಯಾಗುವುದಲ್ಲದೆ ಆಕೆಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಮತ್ತು ಆಳವಾದ ಪರಿಣಾಮ ಉಂಟಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಲಿಂಗ ಮತ್ತು ತಥಾಕಥಿತ ಕಲ್ಪನೆಗಳ ಆಧಾರದಲ್ಲಿ ಭೇದಭಾವ ಮಾಡುವುದು ಅನಪೇಕ್ಷಿತ ಮತ್ತು ಅಸಹ್ಯಕರ ಕಲ್ಪನೆಯಾಗಿದ್ದು ಮಹಿಳೆಯ ದೈಹಿಕ ಘನತೆ ಮಾತ್ರವಲ್ಲದೆ ಆಕೆಯ ಮಾನಸಿಕ ಒಟ್ಟಂದಕ್ಕೂ ಧಕ್ಕೆ ತರುತ್ತದೆ ಎಂದು ನ್ಯಾ. ಸ್ವರಣಾ ಕಾಂತ ಶರ್ಮಾ ತಿಳಿಸಿದರು.

ಪರೀಕ್ಷೆ ಅಮಾನವೀಯವಾಗಿದ್ದು ಮಾನವ ಘನತೆಯ ತತ್ವವನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಸರ್ಕಾರ ಇಂತಹ ಪರೀಕ್ಷೆಯನ್ನು ಅವಲಂಬಿಸಬಾರದು. ಅದು ಸಂವಿಧಾನದ ಮತ್ತು ಅದರ  21ನೇ ವಿಧಿಯಡಿ ಒದಗಿಸಲಾಗಿರುವ ಜೀವಿಸುವ ಹಕ್ಕಿನ ಧ್ಯೇಯ ಕೂಡ ಎಂದು ನ್ಯಾಯಾಲಯ ಹೇಳಿದೆ.

Also Read
ಅಭಯಾ ಹತ್ಯೆ ಪ್ರಕರಣ: ಪಾದ್ರಿ ಥಾಮಸ್, ಸಿಸ್ಟರ್ ಸೆಫಿಗೆ ಕೇರಳ ಹೈಕೋರ್ಟ್ ಮಧ್ಯಂತರ ಜಾಮೀನು

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಮೇಲೆ ಈ ಪರೀಕ್ಷೆ ನಡೆಸುವುದಕ್ಕೂ ಮತ್ತು ಅಪರಾಧವೊಂದರಲ್ಲಿ ಆರೋಪಿಯಾಗಿರುವ ಮಹಿಳೆಯ ಮೇಲೆ ಈ ಪರೀಕ್ಷೆ ನಡೆಯುವುದಕ್ಕೂ ಭಿನ್ನ ನೆಲೆಗಟ್ಟಿನ ವ್ಯತ್ಯಾಸವಿದೆ ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

"ಯಾವುದೇ ಒಬ್ಬ ವ್ಯಕ್ತಿ ಬಂಧನದಲ್ಲಿರುವಾಗಲೂ ಕೆಲವು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸುವಂತಿಲ್ಲ ಅಥವಾ ಉಲ್ಲಂಘಿಸುವಂತಿಲ್ಲ ಇಲ್ಲವೇ ಮೊಟಕುಗೊಳಿಸುವಂತಿಲ್ಲ. ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಘನತೆಯಿಂದ ಜೀವಿಸುವ ಹಕ್ಕು ಅಂತಹ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ” ಎಂದು ನ್ಯಾಯಮೂರ್ತಿಗಳು ತಿಳಿಸಿದರು.

Also Read
ಅಭಯಾ ಹತ್ಯೆ: ಪಾದ್ರಿ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿಗೆ ಜೀವಾವಧಿ ಶಿಕ್ಷೆ

ಕೇರಳದ ಕ್ರೈಸ್ತ ಸನ್ಯಾಸಿನಿ ಸಿಸ್ಟರ್‌ ಅಭಯಾ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಸಿಸ್ಟರ್‌ ಸೆಫಿಗೆ ಸಿಬಿಐ ನಡೆಸಿದ ಕನ್ಯತ್ವ ಪರೀಕ್ಷೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾ. ಸ್ವರಣಾ ಕಾಂತಾ ಈ ಆದೇಶ ನೀಡಿದ್ದಾರೆ. 1992ರಲ್ಲಿ ಅಭಯಾ ಹತ್ಯೆಗೀಡಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ ಫಾದರ್ ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್‌ ಸೆಫಿ ಅವರ ನಡುವಿನ ಖಾಸಗಿ ಕ್ಷಣಗಳನ್ನು ಅಭಯಾ ನೋಡಿದ್ದೇ ಆಕೆಯ ಹತ್ಯೆಗೆ ಕಾರಣ ಎಂದು ತೀರ್ಪು ನೀಡಿ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. 2008 ರಲ್ಲಿ, ತನ್ನನ್ನು ಬಂಧಿಸಿದ ನಂತರ, ತನ್ನ ಒಪ್ಪಿಗೆಯಿಲ್ಲದೆ ಸಿಬಿಐ ಕನ್ಯತ್ವ ಪರೀಕ್ಷೆ ನಡೆಸಿದೆ ಎಂದು ಸೆಫಿ ಆರೋಪಿಸಿದ್ದರು.

ಸೆಫಿ ಕನ್ಯತ್ವ ಪರೀಕ್ಷೆ ಅಸಾಂವಿಧಾನಿಕ ಎಂದು ಹೇಳಿರುವ ದೆಹಲಿ ಹೈಕೋರ್ಟ್, ಆಕೆ ತಮಗೆ ಉಂಟಾದ ಮಾನನಷ್ಟಕ್ಕಾಗಿ ಸಿಬಿಐ ವಿರುದ್ಧ ಕಾನೂನು ಪರಿಹಾರ ಪಡೆಯಬಹುದು. ತಾನು ಅನುಭವಿಸಿದ ಮಾನಸಿಕ ಕಿರುಕುಳ ಕುರಿತಂತೆ ಸೆಫಿ ಸಲ್ಲಿಸಿರುವ ಅರ್ಜಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಹೊಸದಾಗಿ ಪರಿಗಣಿಸಬೇಕು ಎಂದು ತಿಳಿಸಿದೆ.

ಅಲ್ಲದೆ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು, ಕನ್ಯತ್ವ ಪರೀಕ್ಷೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿರುವುದನ್ನು ಕೇಂದ್ರ ಗೃಹ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಎಲ್ಲ ತನಿಖಾ ಸಂಸ್ಥೆಗಳಿಗೆ ತಲುಪಿಸಬೇಕು ಎಂದು ಆದೇಶಿಸಿದರು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Sr__Sephy_v_CBI___Ors.pdf
Preview

Related Stories

No stories found.
Kannada Bar & Bench
kannada.barandbench.com