ಐಷಾರಾಮಿ ಸೆರೆವಾಸ: ಪ್ರಕರಣದ ವಜಾ ಕೋರಿ ಹೈಕೋರ್ಟ್‌ ಕದ ತಟ್ಟಿದ ವಿ ಕೆ ಶಶಿಕಲಾ, ಇಳವರಸಿ

ಪ್ರತಿವಾದಿ ಲೋಕಾಯುಕ್ತ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ ನ್ಯಾಯಾಲಯವು ವಿಚಾರಣೆಯನ್ನು ಜೂನ್‌ 28ಕ್ಕೆ ಮುಂದೂಡಿದೆ.
V K Sasikala and Karnataka HC
V K Sasikala and Karnataka HC
Published on

ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ತಮಗೆ ವಿಶೇಷ ಆತಿಥ್ಯ ನೀಡಲಾಗಿದೆ ಎಂಬ ಆರೋಪದ ಮೇಲೆ ದಾಖಲಿಸಿರುವ ಪ್ರಕರಣವನ್ನು ವಜಾ ಮಾಡುವಂತೆ ಕೋರಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಆಪ್ತೆ ವಿ ಕೆ ಶಶಿಕಲಾ ಮತ್ತು ಜೆ ಇಳವರಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ಇಬ್ಬರು ಉನ್ನತಾಧಿಕಾರಿಗಳ ಪ್ರತಿಷ್ಠೆಯಿಂದಾಗಿ ತಮ್ಮ ಘನತೆಗೆ ಹಾನಿ ಮಾಡಲು ಪ್ರಕರಣ ದಾಖಲಿಸಲಾಗಿದೆ ಎಂದು ಆಕ್ಷೇಪಿಸಿ ಶಶಿಕಲಾ ಮತ್ತು ಇಳವರಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಪ್ರತಿವಾದಿ ಲೋಕಾಯುಕ್ತ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ ನ್ಯಾಯಾಲಯವು ವಿಚಾರಣೆಯನ್ನು ಜೂನ್‌ 28ಕ್ಕೆ ಮುಂದೂಡಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ತನಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂದು ಐಪಿಎಸ್‌ ಅಧಿಕಾರಿ ಡಿ ರೂಪಾ ಅವರು ಆರೋಪಿಸಿದ ಬಳಿಕ ಸರ್ಕಾರದ ಆದೇಶದಂತೆ ತನಿಖೆ ನಡೆಸಿ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ಅವರ ನೇತೃತ್ವದ ಸಮಿತಿಯು 2017ರ ಅಕ್ಟೋಬರ್‌ 21ರಂದು ನೀಡಿದ ವರದಿಯನ್ನು ರಾಜ್ಯ ಸರ್ಕಾರವು 2018ರ ಫೆಬ್ರವರಿ 26ರಂದು ಒಪ್ಪಿಕೊಂಡಿದೆ. ಇದಲ್ಲಿ ತಮ್ಮ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 13(1) (ಸಿ) ಜೊತೆಗೆ ಸೆಕ್ಷನ್‌ 13(2) ಹಾಗೂ 109, 465, 468, 474 ಜೊತೆಗೆ 120-ಬಿ ಅಡಿ ದಾಖಲಿಸಿರುವ ಪ್ರಕರಣಕ್ಕೆ ಪೂರಕವಾದ ಯಾವುದೇ ಅಂಶ ಪತ್ತೆಯಾಗಿಲ್ಲ. ಹಿರಿಯ ಐಪಿಎಸ್‌ ಅಧಿಕಾರಿಗಳಾದ ಸತ್ಯನಾರಾಯಣ ರಾವ್‌ ಮತ್ತು ಡಿ ರೂಪಾ ಮೌದ್ಗಿಲ್‌ ನಡುವಿನ ಪ್ರತಿಷ್ಠೆಗಾಗಿ ನಮ್ಮನ್ನು ಕಾನೂನು ಹೋರಾಟದಲ್ಲಿ ಸಿಲುಕಿಸಲಾಗಿದ್ದು, ತಾವು ಮುಗ್ಧರಾಗಿದ್ದೇವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಇದಲ್ಲದೇ, ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ಸರ್ಕಾರಿ ಅಧಿಕಾರಿಗಳಾದ ಕೃಷ್ಣ ಕುಮಾರ್‌, ಬಿ ಸುರೇಶ್‌ ಮತ್ತು ಗಜರಾಜ ಮಾಕನೂರು ವಿರುದ್ಧ ಪ್ರಕರಣವನ್ನು ಈಗಾಗಲೇ ಹೈಕೋರ್ಟ್‌ ವಜಾ ಮಾಡಿದೆ. ಹೀಗಾಗಿ, ತಮ್ಮ ವಿರುದ್ಧ ಕಾನೂನುಬಾಹಿರವಾಗಿ ಕಾನೂನು ಪ್ರಕ್ರಿಯೆ ನಡೆಸಲಾಗುತ್ತಿದ್ದು, ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಇರುವ ಪ್ರಕರಣವನ್ನು ವಜಾ ಮಾಡುವಂತೆ ಕೋರಲಾಗಿದೆ.

ಈ ಮಧ್ಯೆ, ಎರಡನೇ ಆರೋಪಿಯಾಗಿರುವ ಡಾ. ಆರ್‌ ಅನಿತಾ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದು, ಪ್ರಕರಣವು ವಿಚಾರಣೆಯ ಹಂತದಲ್ಲಿದೆ.

Also Read
ಶಶಿಕಲಾ ಐಷಾರಾಮಿ ಸೆರೆವಾಸ ಪ್ರಕರಣ: ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ಎಸಿಬಿಗೆ ಹೈಕೋರ್ಟ್‌ ನಿರ್ದೇಶನ

ಪ್ರಕರಣದ ಹಿನ್ನೆಲೆ: 2014ರಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಮತ್ತು ಶಶಿಕಲಾ ಸೇರಿದಂತೆ ನಾಲ್ವರು ದೋಷಿಗಳು ಎಂದು ವಿಚಾರಣಾಧೀನ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಹೀಗಾಗಿ, ಶಶಿಕಲಾ ಅವರು 2017ರ ಫೆಬ್ರುವರಿ 15ರಂದು ಪೊಲೀಸರಿಗೆ ಶರಣಾಗಿ, 2020ರ ಜನವರಿ 21ರ ವರೆಗೆ ಜೈಲು ಶಿಕ್ಷೆ ಪೂರೈಸಿದ್ದರು.

ಈ ಸಂದರ್ಭದಲ್ಲಿ ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಅಪರಾಧಿಯಾಗಿರುವ ಶಶಿಕಲಾ ಮತ್ತು ಇತರರಿಗೆ ಅಧಿಕಾರಿಗಳ ನೆರವಿನಿಂದ ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದಲ್ಲಿ ಬಂಧೀಖಾನೆಯ ಡಿಜಿಪಿ ಸತ್ಯನಾರಾಯಣ ರಾವ್‌ ಅವರ ಪಾತ್ರವಿದೆ ಎಂದು ಅಂದಿನ ಡಿಐಜಿಯಾಗಿದ್ದ ಡಿ ರೂಪಾ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ಅವರ ನೇತೃತ್ವದ ಸಮಿತಿಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿತ್ತು. ಆನಂತರ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Kannada Bar & Bench
kannada.barandbench.com