ರಾಜ್ಯಸಭಾ ಚುನಾವಣೆ ವೇಳೆ ಶಾಸಕ ಬೆಳಿಗ್ಗೆ ಮತ ಚಲಾಯಿಸಿ ಮಧ್ಯಾಹ್ನ ಅಪರಾಧಿ ಎಂದು ಘೋಷಿತವಾದರೂ ಮತ ಸಿಂಧು: ಸುಪ್ರೀಂ

ಕಾಂಗ್ರೆಸ್‌ನ ಧೀರಜ್‌ ಪ್ರಸಾದ್‌ ಸಾಹು ಅವರನ್ನು 2018ರಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಪ್ರದೀಪ್‌ ಕುಮಾರ್‌ ಸೊಂಥಾಲಿಯಾ ಸಲ್ಲಿಸಿದ್ದ ಮನವಿ ಆಲಿಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ರಾಜ್ಯಸಭಾ ಚುನಾವಣೆ ವೇಳೆ ಶಾಸಕ ಬೆಳಿಗ್ಗೆ ಮತ ಚಲಾಯಿಸಿ ಮಧ್ಯಾಹ್ನ ಅಪರಾಧಿ ಎಂದು ಘೋಷಿತವಾದರೂ ಮತ ಸಿಂಧು: ಸುಪ್ರೀಂ

ಬೆಳಿಗ್ಗೆ 9.15ಕ್ಕೆ ವಿಧಾನಸಭೆಯ ಸದಸ್ಯರೊಬ್ಬರು ರಾಜ್ಯಸಭೆ ಸದಸ್ಯರ ಆಯ್ಕೆಗಾಗಿ ಮತ ಚಲಾಯಿಸಿ, ಮಧ್ಯಾಹ್ನ 2.30ರ ಹೊತ್ತಿಗೆ ಅಪರಾಧಿ ಎಂದು ಘೋಷಿಸಲ್ಪಟ್ಟು ಅನರ್ಹಗೊಂಡರೂ ಅವರು ಚಲಾಯಿಸಿದ ಮತ ಅಸಿಂಧುವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

1951ರ ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್‌ 8(3)ರ ಅನ್ವಯ ಅಪರಾಧದ ಪರಿಣಾಮ ಮತ್ತು ನ್ಯಾಯಾಲಯದ ವಿಧಿಸಿದ ಶಿಕ್ಷೆಯು ಪರಿಣಾಮದ ಉದ್ದೇಶವನ್ನು ಮೀರಲಾರದು ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್‌ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.

ಈ ಮೂಲಕ ಕಾಂಗ್ರೆಸ್‌ನ ಧೀರಜ್‌ ಪ್ರಸಾದ್‌ ಸಾಹು ಅವರನ್ನು 2018ರಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಪ್ರದೀಪ್‌ ಕುಮಾರ್‌ ಸೊಂಥಾಲಿಯಾ ಅವರು ಸಲ್ಲಿಸಿದ್ದ ಅರ್ಜಿಗೆ ವ್ಯತಿರಿಕ್ತವಾಗಿ ತೀರ್ಪು ಹೊರಬಿದ್ದಿದೆ.

ಹಿರಿಯ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ, ದೇವದತ್‌ ಕಾಮತ್‌ ಮತ್ತು ವಕೀಲ ನಿಶಾಂತ್‌ ಪಾಟೀಲ್‌ ಅವರು ಸಾಹು ಅವರನ್ನು ಪ್ರತಿನಿಧಿಸಿದ್ದರು. ಹಿರಿಯ ವಕೀಲರಾದ ಮುಕುಲ್‌ ರೋಹ್ಟಗಿ ಮತ್ತು ಕೆ ವಿ ವಿಶ್ವನಾಥನ್‌ ಅವರು ಸೊಂಥಾಲಿಯಾ ಪರ ವಾದ ಮಂಡಿಸಿದ್ದರು.

"ಭಾರತೀಯ ದಂಡ ಸಂಹಿತೆ ಕಾನೂನಿನ ವ್ಯಾಖ್ಯಾನವು ಹಿಂದಿನ ಉದ್ದೇಶವಿಲ್ಲದೇ ಅನುಮತಿಸುವುದಿಲ್ಲ ಎಂಬ ವಾದದ ಹೊರತಾಗಿಯೂ ನ್ಯಾಯಾಲಯವು ಅದನ್ನು ಒಪ್ಪಿದೆ. ಆನಂತರದ ಅನರ್ಹತೆಯ ಕಾರಣದಿಂದಾಗಿ ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ಕಾರ್ಯಗಳನ್ನು ಅಮಾನ್ಯಗೊಳಿಸಲಾಗುವುದಿಲ್ಲ ಎಂದು ನ್ಯಾಯಾಲಯವು ವಾಸ್ತವಿಕ ಸಿದ್ಧಾಂತದ ಆಧಾರದಲ್ಲಿ ಹೇಳಿದೆ” ಎಂದು ದೇವದತ್‌ ಕಾಮತ್‌ ಅವರು ಬಾರ್‌ ಅಂಡ್‌ ಬೆಂಚ್‌ಗೆ ವಿವರಿಸಿದ್ದಾರೆ.

ಜಾರ್ಖಂಡ್‌ನಿಂದ ಎರಡು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಪ್ರದೀಪ್‌ ಕುಮಾರ್‌ ಸೊಂಥಾಲಿಯಾ, ಸಮಿತ್‌ ಉರೋನ್‌ ಮತ್ತು ಧೀರಜ್‌ ಪ್ರಸಾದ್‌ ಸಾಹು ಅವರು ನಾಮಪತ್ರ ಸಲ್ಲಿಸಿದ್ದರು. ಮೊದಲಿಬ್ಬರು ಅಭ್ಯರ್ಥಿಗಳು ಬಿಜೆಪಿಗೆ ಸೇರಿದ್ದು, ಮೂರನೇ ಅಭ್ಯರ್ಥಿ ಕಾಂಗ್ರೆಸ್‌ನವರಾಗಿದ್ದಾರೆ.

2018ರ ಮಾರ್ಚ್‌ 23ರಂದು ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಚುನಾವಣೆ ನಡೆದಿತ್ತು. ಜೆಎಂಎಂ ವಿಧಾನಸಭಾ ಸದಸ್ಯ ಅಮಿತ್‌ ಕುಮಾರ್‌ ಮೊಹ್ತೊ ಅವರು ಅಂದು ಬೆಳಿಗ್ಗೆ 9.15ಕ್ಕೆ ಮತದಾನ ಮಾಡಿದ್ದರು. ಆದರೆ, ಅಂದೇ ಮೊಹ್ತೊ ಅವರನ್ನು ಐಪಿಸಿ ಸೆಕ್ಷನ್‌ಗಳಾದ 147, 323/149, 341/149, 353/149, 427/149 ಮತ್ತು 506/149ರ ಅಡಿ ರಾಂಚಿಯ ಸೆಷನ್ಸ್‌ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿ, ಮಧ್ಯಾಹ್ನ 2.30 ಕ್ಕೆ ಎರಡು ವರ್ಷಗಳ ಕಠಿಣ ಶಿಕ್ಷೆ ಪ್ರಕಟಿಸಿತು. ಈ ಮಧ್ಯೆ, ರಾಜ್ಯಸಭಾ ಚುನಾವಣೆಯ ಮತ ಎಣಿಕೆ ರಾತ್ರಿ 7.30ಕ್ಕೆ ನಡೆದಿದ್ದು, ಬಿಜೆಪಿಯ ಸಮಿರ್‌ ಉರೋನ್‌ ಮತ್ತು ಕಾಂಗ್ರೆಸ್‌ನ ಧೀರಜ್‌ ಪ್ರಸಾದ್‌ ಸಾಹು ಜಯ ಸಾಧಿಸಿ, ಸೊಂಥಾಲಿಯಾ ಪರಭಾವಗೊಂಡಿದ್ದರು.

Also Read
ಪಶ್ಚಿಮ ಬಂಗಾಳದ 5 ಬಿಜೆಪಿ ನಾಯಕ ವಿರುದ್ಧ ಬಲಾತ್ಕಾರದ ಕ್ರಮಕೈಕೊಳ್ಳದಂತೆ ರಾಜ್ಯ ಪೊಲೀಸ್‌ಗೆ ಸುಪ್ರೀಂ ಕೋರ್ಟ್ ಸೂಚನೆ

ಮೊಹ್ತಾ ಅವರು ಅಪರಾಧಿ ಎಂದು ಘೋಷಿತರಾದ ಹಿನ್ನೆಲೆಯಲ್ಲಿ ಅವರ ಮತ ಅಸಿಂಧು ಎಂದು ಘೋಷಿಸುವಂತೆ ರಾತ್ರಿ 11.20ಕ್ಕೆ ಚುನಾವಣಾಧಿಕಾರಿ ದೂರು ನೀಡಲಾಗಿತ್ತು. ಇದನ್ನು ಪರಿಗಣಿಸದ ಚುನಾವಣಾಧಿಕಾರಿ ಸಾಹು ಮತ್ತು ಸಮೀರ್‌ ಅವರಿಗೆ ಗೆಲುವಿನ ಪ್ರಮಾಣ ಪತ್ರ ವಿತರಿಸಿದ್ದರು. ನಂತರ ಸಾಹು ಅವರ ಆಯ್ಕೆ ಪ್ರಶ್ನಿಸಿ ಸೊಂಥಾಲಿಯಾ ಜಾರ್ಖಂಡ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮಹ್ತೊ ಅವರ ಮತ ಅಸಿಂಧುಗೊಳಿಸುವಂತೆ ಆದೇಶಿಸಿದ್ದ ಹೈಕೋರ್ಟ್‌ ತಾಂತ್ರಿಕ ಕಾರಣಗಳನ್ನು ನೀಡಿ ಸೊಂಥಾಲಿಯಾ ಅವರ ಅರ್ಜಿಯನ್ನೂ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸೊಂಥಾಲಿಯಾ ಅವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com