ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಅವರ ಅಮಾನತು ಆದೇಶಕ್ಕೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ತಮ್ಮನ್ನು ಸೇವೆಯಿಂದ ಅಮಾನತುಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದುಪಡಿಸಲು ಕೋರಿ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಪಿ ಎನ್ ದೇಸಾಯಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
“ಹಗರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಯು ನಾಳೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಶ್ರೀನಿವಾಸ್ ಅಮಾನತು ಆದೇಶಕ್ಕೆ ತಡೆ ನೀಡಲಾಗುವುದಿಲ್ಲ. ಅಲ್ಲದೇ, ಅವರ ಹುದ್ದೆಗೆ ಬೇರೊಬ್ಬರನ್ನು ನೇಮಿಸುವಂತಿಲ್ಲ ಎಂಬ ಆದೇಶವೂ ಮುಂದುವರಿಯಲಿದೆ. ಚುನಾವಣಾ ಪ್ರಕ್ರಿಯೆ ಮುಂದುವರಿಸಲು ಆಯೋಗವು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಹುದ್ದೆಗೆ ಇಬ್ಬರು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಬಹುದಾಗಿದೆ. ನಾಳೆ ಮಧ್ಯಾಹ್ನ ಚೇಂಬರ್‌ನಲ್ಲಿ ಪ್ರಕರಣ ನಡೆಸಲಾಗುವುದು” ಎಂದು ಪೀಠವು ಮೌಖಿಕವಾಗಿ ಹೇಳಿತು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಶ್ರೀನಿವಾಸ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಎಸ್ ರಾಜಗೋಪಾಲ್ ಅವರು “ಯಾವುದೇ ದಾಖಲೆ ಇಲ್ಲದಿದ್ದರೂ ಅರ್ಜಿದಾರರನ್ನು ಅಮಾನತು ಮಾಡಲಾಗಿದೆ. ಪ್ರರಣದಲ್ಲಿ ಯಾವುದೇ ರೀತಿಯಲ್ಲೂ ಅವರು ಭಾಗಿಯಾಗಿಲ್ಲ. ಯಾವುದೇ ದಾಖಲೆ ಇಲ್ಲದಿದ್ದರೂ ಕೇಂದ್ರ ಚುನಾವಣಾ ಆಯೋಗವು ಅಮಾನತಿಗೆ ಶಿಫಾರಸ್ಸು ಮಾಡಿದೆ” ಎಂದು ಬಲವಾಗಿ ವಾದಿಸಿದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಭಾರತೀಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಮೇಲ್ನೋಟಕ್ಕೆ ದಾಖಲೆಗಳು ಇದ್ದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರನ್ನು ಅಮಾನತು ಮಾಡಲು ಆದೇಶಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಈ ಸಂದರ್ಭದಲ್ಲಿ ಶ್ರೀನಿವಾಸ್ ಅವರ ಅಮಾನತು ಆದೇಶಕ್ಕೆ ತಡೆ ನೀಡಬಾರದು” ಎಂದು ವಾದಿಸಿದರು.
“ಬೆಂಗಳೂರು ನಗರ ಜಿಲ್ಲಾಧಿಕಾರಿಯೂ ಆದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯ ಅಮಾನತಿನ ಹಿನ್ನೆಲೆಯಲ್ಲಿ ಆ ಸ್ಥಾನ ಖಾಲಿಯಿದ್ದು, ಅಲ್ಲಿಗೆ ಯಾರನ್ನು ನೇಮಿಸಬಾರದು ಎಂದು ನ್ಯಾಯಾಲಯ ಆದೇಶ ಮಾಡಿದೆ. ಆದರೆ, ಚುನಾವಣಾ ಪ್ರಕ್ರಿಯೆ ಮುಂದುವರಿಸಲು ಇಬ್ಬರು ಅಧಿಕಾರಿಯನ್ನು ನಾಮನಿರ್ದೇಶನ ಮಾಡಲು ಅನುಮತಿಸಬೇಕು” ಎಂದು ಕೋರಿದರು.
ರಾಜ್ಯನ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ತನಿಖೆ ಪ್ರಗತಿಯಲ್ಲಿದೆ. ಇಲ್ಲಿ ಮಧ್ಯಪ್ರವೇಶಿಸಲಾಗದು” ಎಂದರು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಚಿಲುಮೆ ಸಂಸ್ಥೆಯು ಇಲ್ಲಿ ಸಮಸ್ಯೆ ಉಂಟು ಮಾಡಿದೆ. ಚಿಲುಮೆಗೆ ಮತದಾನ ಜಾಗೃತಿ ಮೂಡಿಸಲು ಅನುಮತಿಸಲಾಗಿತ್ತು. ಅದಕ್ಕೆ ಮತದಾರರ ಪಟ್ಟಿ ಪರಿಷ್ಕರಿಸಲು ಅನುಮತಿಸಲಾಗಿರಲಿಲ್ಲ” ಎಂದು ಹೇಳಿತು.