[ಮತದಾರರ ಮಾಹಿತಿ ಕಳವು ಪ್ರಕರಣ] ಬೆಂಗಳೂರು ನಗರ ಡಿಸಿ ಶ್ರೀನಿವಾಸ್ ಅಮಾನತು; ರಾಜ್ಯ, ಕೇಂದ್ರಕ್ಕೆ ಹೈಕೋರ್ಟ್‌ ನೋಟಿಸ್‌

ಅಮಾನತು ಆದೇಶಕ್ಕೆ ತಡೆ ನೀಡಲು ಡಿ.1ರಂದು ನ್ಯಾಯ ಮಂಡಳಿಯು ನಿರಾಕರಿಸಿದೆ. ಆದ್ದರಿಂದ, ಸರ್ಕಾರದ ಆದೇಶದ ಅನ್ವಯ ಮುಂದಿನ ಪ್ರಕ್ರಿಯೆ ಕೈಗೊಳ್ಳದಂತೆ ಮಧ್ಯಂತ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರಿಂದ ಮನವಿ.
Karnataka High Court
Karnataka High Court

ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಅವರನ್ನು ಅಮಾನತು ಮಾಡಿರುವ ವಿಚಾರ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶದ ಮೇರೆಗೆ ತಮ್ಮನ್ನು ಸೇವೆಯಿಂದ ಅಮಾನತುಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದು ಕೋರಿ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಪಿ ಎನ್‌ ದೇಸಾಯಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ, ಸದ್ಯ ಪ್ರಕರಣ ಸಂಬಂಧ ಮುಂದುವರಿಯದಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿ ವಿಚಾರಣೆಯನ್ನು ಬುಧವಾರಕ್ಕೆ (ಡಿಸೆಂಬರ್‌ 7) ಮುಂದೂಡಿದೆ.

ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ನಗರದ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಆಧಾರ್ ಕಾರ್ಡ್ ಜೋಡಣೆ ಕುರಿತು ಅರಿವು ಮೂಡಿಸುವುದು, ಮತದಾರರ ದತ್ತಾಂಶ ಪರಿಶೀಲಿಸುವುದು ಸೇರಿದಂತೆ ವಿವಿಧ ಚಟುವಟಿಕೆ ನಡೆಸಲು ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ಗೆ ಅನುಮತಿ ನೀಡಿ ಬಿಬಿಎಂಪಿ ಮುಖ್ಯ ಆಯುಕ್ತರು 2022ರ ಆಗಸ್ಟ್‌ 20ರಂದು ಆದೇಶಿಸಿದ್ದರು. ಆದರೆ, ಅರಿವು ಮೂಡಿಸುವ ಸೋಗಿನಲ್ಲಿ ಮತದಾರರ ದತ್ತಾಂಶ ಸಂಗ್ರಹಿಸುವ ಮೂಲಕ ಅಕ್ರಮ ಎಸಗಿದ ಆರೋಪದ ಮೇಲೆ ಚಿಲುಮೆಗೆ ನೀಡಿದ ಅನುಮತಿಯನ್ನು 2022ರ ನವೆಂಬರ್‌ 2ರಂದು ರದ್ದುಪಡಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

Also Read
ಮತದಾರರ ಮಾಹಿತಿ ಕಳವು ಹಗರಣ: ಸಿಜೆ ಉಸ್ತುವಾರಿಯಲ್ಲಿ ಎಸ್‌ಐಟಿ ರಚನೆಗೆ ಹೈಕೋರ್ಟ್‌ಗೆ ಸಿಆರ್‌ಎಫ್‌ ಮನವಿ

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ತಮ್ಮನ್ನು ಸೇವೆಯಿಂದ ಅಮಾನತುಪಡಿಸಿ 2022ರ ನವೆಂಬರ್‌ 26ರಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದೇಶ ಹೊರಡಿಸುವ ಮುನ್ನ ಸರ್ಕಾರ ಸರಿಯಾಗಿ ವಿವೇಚನ ಬಳಸಿಲ್ಲ. ಲಭ್ಯವಿರುವ ದಾಖಲೆ ಪರಿಶೀಲಿಸಿಲ್ಲ. ತಮಗೆ ಅವಕಾಶ ನೀಡಿ ಯಾವುದೇ ವಿವರಣೆ ಪಡೆದಿಲ್ಲ. ತಮ್ಮ ವಿರುದ್ಧದ ಆರೋಪಗಳು ದುರ್ನಡತೆಗೆ ಸಂಬಂಧಿಸಿದ ಆರೋಪವಲ್ಲ ಎಂಬುದನ್ನು ಪರಿಗಣಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಮಾನತು ಆದೇಶಕ್ಕೆ ತಡೆ ನೀಡಲು ಡಿಸೆಂಬರ್‌ 1ರಂದು ನ್ಯಾಯ ಮಂಡಳಿಯು ನಿರಾಕರಿಸಿದೆ. ಆದ್ದರಿಂದ, ಸರ್ಕಾರದ ಆದೇಶದ ಅನ್ವಯ ಮುಂದಿನ ಯಾವುದೇ ಪ್ರಕ್ರಿಯೆ ಕೈಗೊಳ್ಳದಂತೆ ಮಧ್ಯಂತ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com