ಗಿಫ್ಟ್‌ ವೋಚರ್‌ ನೀಡಿಕೆ, ಪೂರೈಕೆಗೆ ಸರಕು ಮತ್ತು ಸೇವಾ ತೆರಿಗೆ ಅನ್ವಯಿಸದು: ಕರ್ನಾಟಕ ಹೈಕೋರ್ಟ್‌

ಗಿಫ್ಟ್‌ ಮತ್ತು ಕ್ಯಾಷ್‌ ಬ್ಯಾಕ್‌ ವೋಚರ್‌ಗಳು ಸೇರಿದಂತೆ ವೋಚರ್‌ಗಳು ಪಾವತಿ ಸಾಧನಗಳಾಗಿದ್ದು, ಸರಕು ಮತ್ತು ಸೇವೆಗಳ ಪರಿಗಣನೆಗೆ ಅವುಗಳನ್ನು ಒಪ್ಪಿಕೊಳ್ಳಲಾಗುತ್ತದೆ. ಅವು ತಮ್ಮದೇ ಆದ ಅಂತರ್ಗತ ಮೌಲ್ಯ ಹೊಂದಿರುವುದಿಲ್ಲ ಎಂದ ನ್ಯಾಯಾಲಯ.
Justices P S Dinesh Kumar T G Shivashankare Gowda
Justices P S Dinesh Kumar T G Shivashankare Gowda
Published on

ಸರಕು ಮತ್ತು ಸೇವೆಗಳ ಅಡಿಯಲ್ಲಿ ವೋಚರ್‌ಗಳು ಬರುವುದಿಲ್ಲ. ಹೀಗಾಗಿ, ವೋಚರ್‌ ನೀಡುವುದು ಮತ್ತು ಪೂರೈಕೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಬೆಂಗಳೂರಿನ ಪ್ರೀಮಿಯರ್‌ ಸೇಲ್ಸ್‌ ಪ್ರಮೋಷನ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ಮಾನ್ಯ ಮಾಡಿದೆ.

ಗಿಫ್ಟ್‌ ಮತ್ತು ಕ್ಯಾಷ್‌ ಬ್ಯಾಕ್‌ ವೋಚರ್‌ಗಳು ಸೇರಿದಂತೆ ವೋಚರ್‌ಗಳು ಸಾಧನಗಳಾಗಿದ್ದು, ಸರಕು ಮತ್ತು ಸೇವೆಗಳ ಪರಿಗಣನೆಗೆ ಅವುಗಳನ್ನು ಒಪ್ಪಿಕೊಳ್ಳಲಾಗುತ್ತದೆ. ಅವುಗಳು ತಮ್ಮದೇ ಆದ ಅಂತರ್ಗತ ಮೌಲ್ಯ ಹೊಂದಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ (ಸಿಜಿಎಸ್‌ಟಿ) ಅಡಿ ವೋಚರ್‌ಗಳು ಹಣದ ವಿಭಾಗದಲ್ಲಿ ಬಂದರೂ ಅವುಗಳನ್ನು ಕಾಯಿದೆಯ ಸರಕು ಮತ್ತು ಸೇವಾ ಕಾಯಿದೆಯ ವ್ಯಾಖ್ಯಾನದಿಂದ ಹೊರಗಿರಿಸಲಾಗಿದೆ ಎಂದು ಪೀಠ ಹೇಳಿದೆ.

ಅರ್ಜಿದಾರ ಸಂಸ್ಥೆಯು ಗಿಫ್ಟ್‌ ವೋಚರ್‌ಗಳು, ಕ್ಯಾಷ್‌ ಬ್ಯಾಕ್‌ ವೋಚರ್‌ಗಳು ಮತ್ತು ಇ-ವೋಚರ್‌ ಸೇರಿದಂತೆ ಪ್ರೀಪೇಯ್ಡ್‌ ಪೇಮೆಂಟ್‌ ಇನ್‌ಸ್ಟ್ರುಮೆಂಟ್ಸ್‌ (ಪಿಪಿಐ) ಅನ್ನು ವಿತರಕರಿಂದ ಪಡೆದು ಅದನ್ನು ತನ್ನ ಗ್ರಾಹರಕರಿಗೆ ಪೂರೈಸುತ್ತದೆ. ಅರ್ಜಿದಾರ ಸಂಸ್ಥೆಯು ಪ್ರಚಾರ ಯೋಜನೆಯ ಭಾಗವಾಗಿ ತನ್ನ ಉದ್ಯೋಗಿಗಳಿಗೆ ಉತ್ತೇಜನೆಯ ಭಾಗವಾಗಿ ವೋಚರ್‌ಗಳನ್ನು ನೀಡುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

Also Read
ರೆಸ್ಟೋರೆಂಟ್‌ ಪಾರ್ಸೆಲ್ ಆರ್ಡರ್‌ಗಳು ಸೇವಾ ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ: ಮದ್ರಾಸ್ ಹೈಕೋರ್ಟ್

ಭಾರತೀಯ ರಿಸರ್ವ್‌ ಬ್ಯಾಂಕ್‌ ವೋಚರ್‌ಗಳನ್ನು ʼಪಾವತಿ ಸಾಧನʼ ಎಂದು ಪರಿಗಣಿಸಿದೆ. ಸರಕು ಮತ್ತು ಸೇವಾ ಪೂರೈಕೆಯು ಅದನ್ನು ಪರಿಗಣಿಸಬಹುದು ಎಂದು ಹೇಳಿದೆ. ಜಿಎಸ್‌ಟಿ ವಿಧಿಸಿಲು ವೋಚರ್‌ಗಳನ್ನೇ ಸರಕು ಮತ್ತು ಸೇವೆಗಳು ಎಂದು ಪರಿಗಣಿಸಲಾಗದು ಎಂದು ಸೇಲ್ಸ್ ಪ್ರಮೋಷನ್‌ ಸಂಸ್ಥೆ ವಾದಿಸಿತ್ತು.

ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ (ಸಿಜಿಎಸ್‌ಟಿ ಕಾಯಿದೆ) ಸೆಕ್ಷನ್‌ 12(5)ರ ಅಡಿ ಅರ್ಜಿದಾರ ಸಂಸ್ಥೆಯು ಪೂರೈಸುವ ವೋಚರ್‌ಗಳನ್ನು ಸರಕು ಎಂದು ಪರಿಗಣಿಸಿ ತೆರಿಗೆ ವಿಧಿಸಲಾಗುತ್ತದೆ ಎಂದು ಕರ್ನಾಟಕ ಅಡ್ವಾನ್ಸ್‌ ರೂಲಿಂಗ್‌ ಪ್ರಾಧಿಕಾರವು (ಎಎಆರ್‌) ಆದೇಶಿಸಿತ್ತು. ಇದನ್ನು ಅರ್ಜಿದಾರ ಸಂಸ್ಥೆಯು ಕರ್ನಾಟಕ ಅಡ್ವಾನ್ಸ್‌ ರೂಲಿಂಗ್‌ನ ಮೇಲ್ಮನವಿ ಪ್ರಾಧಿಕಾರದಲ್ಲಿ (ಎಎಎಆರ್‌) ಪ್ರಶ್ನಿಸಲಾಗಿತ್ತು. ಎಎಎಆರ್‌ ಅದನ್ನು ಎತ್ತಿ ಹಿಡಿದಿತ್ತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

Kannada Bar & Bench
kannada.barandbench.com