
ವಕ್ಫ್ ಇಸ್ಲಾಮಿಕ್ ಪರಿಕಲ್ಪನೆಯಾಗಿದ್ದರೂ, ಅದು ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಮತ್ತು ವಕ್ಫ್ ಮಂಡಳಿಗಳು ಜಾತ್ಯತೀತ ಕಾರ್ಯಗಳನ್ನು ನಿರ್ವಹಿಸುತ್ತವೆ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಹೀಗಾಗಿ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರಿಸಿಕೊಳ್ಳಲು ಅನುಮತಿಸಬಹುದು ಎಂದು ಅದು ವಾದಿಸಿದೆ.
ಇತ್ತೀಚೆಗೆ ಜಾರಿಗೆ ತಂದ ವಕ್ಫ್ (ತಿದ್ದುಪಡಿ) ಕಾಯಿದೆ, 2025 ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠದೆದುರು ಕೇಂದ್ರ ಸರ್ಕಾರದ ಎರಡನೇ ಅತಿ ಹಿರಿಯ ಕಾನೂನು ಅಧಿಕಾರಿ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಈ ವಾದ ಮಂಡಿಸಿದರು. ನಾಳೆ (ಗುರುವಾರ) ಪ್ರಕರಣದ ವಿಚಾರಣೆ ಮುಂದುವರೆಯಲಿದೆ.
ಕೇಂದ್ರ ಮಂಡಿಸಿರುವ ವಾದದ ಪ್ರಮುಖಾಂಶಗಳು
ವಕ್ಫ್ ಇಸ್ಲಾಮಿಕ್ ಪರಿಕಲ್ಪನೆಯಾಗಿದ್ದರೂ, ಅದು ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ. ಅದು ಸಾಬೀತಾಗದೇ ಹೋಗುವುದರಿಂದ ಇತರ ವಾದಗಳು ವಿಫಲವಾಗುತ್ತವೆ.
ಎಲ್ಲ ಧರ್ಮಗಳಲ್ಲಿಯೂ ದಾನ ವ್ಯವಸ್ಥೆ ಇದ್ದು ಅದು ಧರ್ಮದ ಅತ್ಯಗತ್ಯ ಭಾಗವಲ್ಲ.
ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರರ ಸೇರ್ಪಡೆಯಾದ ಮಾತ್ರಕ್ಕೆ ಯಾವುದೇ ಪರಿಣಾಮ ಬೀರದು
ತಿದ್ದುಪಡಿಯಂತೆ ರೂಪುಗೊಳ್ಳುವ ವಕ್ಫ್ ಮಂಡಳಿ ವಕ್ಫ್‌ನ ಯಾವುದೇ ಧಾರ್ಮಿಕ ಚಟುವಟಿಕೆಗೆ ಕೈಹಾಕುತ್ತಿಲ್ಲ.
ವಕ್ಫ್ ಮಂಡಳಿಗಳಿಗೂ ಹಿಂದೂಯೇತರರನ್ನು ಸದಸ್ಯರನ್ನಾಗಿ ಅನುಮತಿಸದ ಹಿಂದೂ ಟ್ರಸ್ಟ್‌ಗಳು ಮತ್ತು ದತ್ತಿ ಮಂಡಳಿಗಳಿಗೂ ವ್ಯತ್ಯಾಸ ಇದೆ.
ಹಿಂದೂ ದತ್ತಿ ಕೇವಲ ಧಾರ್ಮಿಕ ಚಟುವಟಿಕೆಗಳೊಂದಿಗೆ ವ್ಯವಹರಿಸುತ್ತದೆ ಆದರೆ ವಕ್ಫ್ ಜಾತ್ಯತೀತ ಚಟುವಟಿಕೆಗಳನ್ನು ಹೊಂದಿರುತ್ತದೆ.
ಹಿಂದೂ ದತ್ತಿ ಚಟುವಟಿಕೆಗಳು ಬಹಳ ವ್ಯಾಪಕವಾಗಿವೆ. ಇದು ಗಂಭೀರ ಸವಾಲಿನಲ್ಲಿದೆ. ಹಿಂದೂ ದತ್ತಿ ಆಯುಕ್ತರು ದೇವಾಲಯದ ಒಳಗೆ ಹೋಗಬಹುದು. ಪೂಜಾರಿಯನ್ನು ರಾಜ್ಯ ಸರ್ಕಾರ ನಿರ್ಧರಿಸುತ್ತದೆ. ವಕ್ಫ್ ಮಂಡಳಿಯು ಧಾರ್ಮಿಕ ಚಟುವಟಿಕೆಯ ವಿಚಾರಕ್ಕೆ ಕೈ ಹಾಕುವುದಿಲ್ಲ.