
ಪ್ಯಾಂಟ್ ಧರಿಸದೆಯೇ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಂತೆ ಬಿಂಬಿತವಾಗಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಅವಹೇಳನಕಾರಿ ವಸ್ತುವಿಷಯವನ್ನು ತೆಗೆದುಹಾಕುವಂತೆ ಕೋರಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಹಿರಿಯ ವಕೀಲ ಗೌರವ್ ಭಾಟಿಯಾ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು ಪ್ರಕರಣ ಆಲಿಸಿ ಗುರುವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದರು.
ಭಾಟಿಯಾ ಅವರ ಖಾಸಗಿ ಭಾಗಗಳನ್ನು ಉಲ್ಲೇಖಿಸಿರುವ ಮಾನಹಾನಿಕರ ವಸ್ತುವಿಷಯವನ್ನು ತೆಗೆದುಹಾಕಲಾಗುವುದು ಆದರೆ ಘಟನೆಗೆ ಸಂಬಂಧಿಸಿದ ವಿಡಂಬನಾತ್ಮಕ ಅಥವಾ ವ್ಯಂಗ್ಯದ ವಿಷಯವನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಕೆಲ ದಿನಗಳ ಹಿಂದೆ ನ್ಯೂಸ್ 18 ಚಾನೆಲ್‌ನ ಸುದ್ದಿ ಕಾರ್ಯಕ್ರಮದಲ್ಲಿ ಭಾಟಿಯಾ ಕಾಣಿಸಿಕೊಂಡಿದ್ದರು. ಪತ್ರಕರ್ತ ಅಮಿಶ್ ದೇವಗನ್ ಅವರು ಪರಿಚಯ ಮಾಡಿಕೊಡುತ್ತಿದ್ದ ಹೊತ್ತಿನಲ್ಲಿ ಗೌರವ್ ಅವರು ಪ್ಯಾಂಟ್/ಪೈಜಾಮ ಇಲ್ಲದೆ ಕುರ್ತಾ ಧರಿಸಿರುವುದು ಕಂಡುಬಂದಿತ್ತು.
ಇಂದು ಭಾಟಿಯಾ ಪರ ಹಾಜರಾದ ವಕೀಲ ರಾಘವ್ ಅವಸ್ಥಿ ಅವರು, ಗೌರವ್ ಶಾರ್ಟ್ಸ್ ಧರಿಸಿದ್ದರು ಮತ್ತು ಕ್ಯಾಮೆರಾಮನ್ ತಪ್ಪಾಗಿ ಅವರ ದೇಹದ ಕೆಳಭಾಗ ತೋರಿಸಿದ್ದಾರೆ ಎಂದು ಹೇಳಿದರು. ಈ ಸಂಬಂಧ ಪ್ರಕಟಿಸಲಾದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಭಾಟಿಯಾ ಅವರ ಗೌಪ್ಯತೆ ಉಲ್ಲಂಘಿಸಿದ್ದು ಆಕ್ಷೇಪಾರ್ಹ ಹೇಳಿಕೆಗಳನ್ನು ತೆಗೆದುಹಾಕಬೇಕು ಎಂದು ಅವಸ್ಥಿ ವಾದಿಸಿದರು
ಸಮಾಜವಾದಿ ಪಕ್ಷದ ಮಾಧ್ಯಮ ಕೋಶ, ಸುದ್ದಿ ವೇದಿಕೆ ನ್ಯೂಸ್‌ಲಾಂಡ್ರಿ, ಆಪ್ ಪಕ್ಷದ ಸೌರಭ್ ಭಾರದ್ವಾಜ್ ಮತ್ತು ಕಾಂಗ್ರೆಸ್‌ನ ರಾಗಿಣಿ ನಾಯಕ್‌ರಂತಹ ರಾಜಕಾರಣಿಗಳು ಮತ್ತು ಅಭಿಸಾರ್ ಶರ್ಮಾ ಸೇರಿದಂತೆ ವಿವಿಧ ಪತ್ರಕರ್ತರು ಪ್ರಕಟಿಸಿರುವ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಭಾಟಿಯಾ ಅವರ ಮಾನನಷ್ಟ ಮೊಕದ್ದಮೆ ಕೋರಿದೆ.
ಹಿರಿಯ ವಕೀಲರಾದ ಗೌರವ್ ಕೂಡ ನ್ಯಾಯಾಲದೆದುರು ಖುದ್ದು ಹಾಜರಾಗಿ, ಸಾಮಾಜಿಕ ಮಾಧ್ಯಮದಲ್ಲಿ ನಗ್ನವಾಗಿ ತಾನು ಕಾಣಿಸಿಕೊಂಡಿದ್ದೇನೆ ಎನ್ನುವ ಅವಹೇಳನಕಾರಿ ಪದಗಳನ್ನು ಬಳಸಲು ಅನುಮತಿಸಬಾರದು. ಇದರಿಂದ ತಮ್ಮ ದಶಕಗಳ ವರ್ಚಸ್ಸಿಗೆ ಕುಂದುಂಟಾಗುತ್ತದೆ ಎಂದು ಹೇಳಿದರು. ಆದರೆ ಗೌರವ್ ರಾಜಕೀಯದಲ್ಲಿ ಇರುವುದರಿಂದ ದಪ್ಪ ಚರ್ಮದವರಾಗಿರಬೇಕು ಎಂದು ನ್ಯಾ. ಬನ್ಸಾಲ್ ಹೇಳಿದರು.
ಆದರೆ ಗೂಗಲ್ ಪರ ಹಾಜರಾದ ವಕೀಲೆ ಮಮತಾ ರಾಣಿ ಝಾ, ತೆಗೆದುಹಾಕಬೇಕೆಂದು ಕೋರಿರುವ ಕೆಲವು ಲಿಂಕ್‌ಗಳಿಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಸುದ್ದಿ ಮುದ್ರಿಸುವವರನ್ನೂ ಎಳೆತರಲಾಗಿದೆ ಎಂದರು. ಆಗ ನ್ಯಾಯಾಲಯ ಏಕಪಕ್ಷೀಯ ಆದೇಶ ನೀಡುವಾಗ ತಾನು ಬಹಳ ಜಾಗರೂಕನಾಗಿರಬೇಕಾದ ಮಹತ್ವವನ್ನು ಹೇಳಿತು.