'ಆರ್‌ ಜಿ ಕರ್ ಘಟನೆ ಸಾಮೂಹಿಕ ಅತ್ಯಾಚಾರವೇ?' ಸಿಬಿಐಗೆ ಕಲ್ಕತ್ತಾ ಹೈಕೋರ್ಟ್ ಪ್ರಶ್ನೆ

ಘಟನೆಯ ಕುರಿತು ಹೊಸದಾಗಿ ತನಿಖೆ ನಡೆಸಬೇಕೆಂದು ಮೃತ ವೈದ್ಯೆಯ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಪ್ರಶ್ನೆ ಕೇಳಿದೆ.
Calcutta High Court with RG Kar hospital
Calcutta High Court with RG Kar hospital
Published on

ಕಳೆದ ವರ್ಷ ಆಗಸ್ಟ್‌ನಲ್ಲಿ ಕೋಲ್ಕತ್ತಾದ ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯ ಪ್ರಮುಖ ಅಂಶಗಳನ್ನು ಸ್ಪಷ್ಟಪಡಿಸುವಂತೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ಸಿಬಿಐಯನ್ನು ಕೇಳಿದೆ.

ಘಟನೆಯ ಕುರಿತು ಹೊಸದಾಗಿ ತನಿಖೆ ನಡೆಸಬೇಕೆಂದು ಮೃತ ವೈದ್ಯೆಯ ಪೋಷಕರು ಅರ್ಜಿ ಸಲ್ಲಿಸಿದ್ದಾರೆ.

Also Read
ಆರ್‌ ಜಿ ಕರ್ ಪ್ರಕರಣ: ಗಲ್ಲುಶಿಕ್ಷೆ ಕೋರಿದ್ದ ಮನವಿಯ ನಿರ್ವಹಣೆ ಕುರಿತು ತೀರ್ಪು ಕಾಯ್ದಿರಿಸಿದ ಕಲ್ಕತ್ತಾ ಹೈಕೋರ್ಟ್

ಮುಂದಿನ ವಿಚಾರಣೆಯ ಹೊತ್ತಿಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ನ್ಯಾಯಮೂರ್ತಿ ತೀರ್ಥಂಕರ ಘೋಷ್ ಸಿಬಿಐಗೆ ಸೂಚಿಸಿದರು.

ಆರೋಪ ಮಾಡಿರುವ ಪದಗುಚ್ಛ ಪ್ರಕರಣದ ಆರೋಪಿ ಒಬ್ಬನೇ ಎಂಬುದನ್ನು ಸೂಚಿಸುತ್ತದೆಯೇ ಅಥವಾ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನೇ?

ಬಹು ಶಂಕಿತರು ಕೃತ್ಯದಲ್ಲಿ ಭಾಗಿಯಾಗಿದ್ದರೆ ಬಿಎನ್‌ಎಸ್ ಸೆಕ್ಷನ್ 70 ಅನ್ನು ಅನ್ವಯಿಸುವುದನ್ನು ಸಿಬಿಐ ಎಂದಾದರೂ ಪರಿಗಣಿಸಿತ್ತೇ ಎಂಬ ಪ್ರಶ್ನೆಗಳನ್ನು ನ್ಯಾಯಾಲಯ ಕೇಳಿದೆ.

ಈಗಾಗಲೇ ಮೊದಲ ಆರೋಪಪಟ್ಟಿ ಸಲ್ಲಿಸಿರುವುದರಿಂದ, ಮುಂದಿನ ತನಿಖೆಯ ಸ್ಥಿತಿಗತಿ ವರದಿ ಮತ್ತು ಎರಡನೇ ಆರೋಪಪಟ್ಟಿ ಸಲ್ಲಿಸುವ ಕುರಿತಂತೆ ಸಿಬಿಐಗೆ ನ್ಯಾಯಾಲಯ ಸೂಚಿಸಿತು. ಆದರೆ, ಪ್ರಕರಣದ ದಿನಚರಿಯನ್ನಷ್ಟೇ (ಕೇಸ್‌ ಡೈರಿ) ಪರಿಗಣಿಸಲಾಗುವುದು, ಔಪಚಾರಿಕ ವರದಿಯನ್ನಲ್ಲ ಎಂದು ಅದು ಸ್ಪಷ್ಟಪಡಿಸಿತು.

ಪ್ರಕರಣವನ್ನು ಆದ್ಯತೆಯ ಮೇರೆಗೆ ತನಿಖೆ ನಡೆಸುವಂತೆ ಸಿಬಿಐಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಹೈಕೋರ್ಟ್ ನಿರ್ದೇಶನ ನೀಡಿತ್ತು.

31 ವರ್ಷದ ಕಿರಿಯ ವೈದ್ಯೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ಇದು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಅಂತಿಮವಾಗಿ ಕಾಲೇಜಿನ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಅವರು ರಾಜೀನಾಮೆ ಕೂಡ ನೀಡಿದ್ದರು. ಆಗಸ್ಟ್ 13, 2024ರಂದು, ನ್ಯಾಯಾಲಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು,

ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳನ್ನು ದುರುಪಯೋಗಪಡಿಸಿಕೊಂಡ ಮತ್ತು ಆರ್ಥಿಕ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಆಗಸ್ಟ್ 23 ರಂದು ಕಲ್ಕತ್ತಾ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2 ರಂದು ಸಿಬಿಐ ಘೋಷ್ ಅವರನ್ನು ಬಂಧಿಸಿತ್ತು .

ಸಿಬಿಐ ನಿಗದಿತ 90 ದಿನಗಳ ಅವಧಿಯಲ್ಲಿ ಆರೋಪಪಟ್ಟಿ ಸಲ್ಲಿಸಲು ಸಾಧ್ಯವಾಗದ ಕಾರಣ, ಕೋಲ್ಕತ್ತಾ ನ್ಯಾಯಾಲಯ ಡಿಸೆಂಬರ್ 13, 2024 ರಂದು ಅವರಿಗೆ ಜಾಮೀನು ನೀಡಿತು.

Also Read
ಆರ್‌ ಜಿ ಕರ್‌ ಅತ್ಯಾಚಾರ, ಕೊಲೆ ಪ್ರಕರಣ: ಪ್ರಮುಖ ಆರೋಪಿ ಸಂಜಯ್‌ ರಾಯ್‌ ದೋಷಿ ಎಂದು ಘೋಷಿಸಿದ ಕಲ್ಕತ್ತಾ ನ್ಯಾಯಾಲಯ

ಈ ವರ್ಷದ ಜನವರಿಯಲ್ಲಿ, ವಿಚಾರಣಾ ನ್ಯಾಯಾಲಯ 57 ದಿನಗಳ ಕಾಲ ನಡೆದ ರಹಸ್ಯ ವಿಚಾರಣೆಯ ನಂತರ, ಪ್ರಮುಖ ಆರೋಪಿ ಪೊಲೀಸ್‌ ಸಿವಿಲ್‌ ಸ್ವಯಂಸೇವಕನಾಗಿದ್ದ ಸಂಜಯ್ ರಾಯ್‌ಗೆ ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ರಾಯ್‌ಗೆ ಮರಣದಂಡನೆ ವಿಧಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಕಳೆದ ಫೆಬ್ರವರಿಯಲ್ಲಿ ಹೈಕೋರ್ಟ್ ವಜಾಗೊಳಿಸಿತ್ತು. ಸಿಬಿಐ ಈ ಪ್ರಕರಣದ ತನಿಖೆ ನಡೆಸಿದ್ದರಿಂದ ರಾಜ್ಯ ಸರ್ಕಾರ ಮರಣದಂಡನೆಗೆ ಕೋರಿ ಸಲ್ಲಿಸಿದ್ದ ಮೇಲ್ಮನವಿಗೆ ಅದು ಅನುಮತಿ ನಿರಾಕರಿಸಿತ್ತು. ಬದಲಾಗಿ ಈ ಕುರಿತಂತೆ ಮೇಲ್ಮನವಿ ಸಲ್ಲಿಸಲು ಸಿಬಿಐಗೆ ಅವಕಾಶ ನೀಡಿತ್ತು.

Kannada Bar & Bench
kannada.barandbench.com