

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸುಗಮ ನಿರ್ವಹಣೆಗಾಗಿ ನಿಯೋಜಿಸಲಾದ ನ್ಯಾಯಾಂಗ ಅಧಿಕಾರಿಗಳಿಗೆ ಭಾರತೀಯ ಚುನಾವಣಾ ಆಯೋಗ ನೀಡುತ್ತಿರುವ ತರಬೇತಿ ಮಾದರಿಗೆ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿತು.
ಪ್ರಕರಣವನ್ನ ತುರ್ತಾಗಿ ಆಲಿಸುವಂತೆ ಸಿಜೆಐ ಸೂರ್ಯಕಾಂತ್ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠವನ್ನು ಪಶ್ಚಿಮ ಬಂಗಾಳ ಸರ್ಕಾರ ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಕೋರಿದರು.ೆಕು
ನ್ಯಾಯಾಂಗ ಅಧಿಕಾರಿಗಳಿಗೆ ಏನನ್ನು ಆಧರಿಸಬೇಕು, ಏನನ್ನು ಆಧರಿಸಬಾರದು ಎಂಬ ಕುರಿತು ಇಸಿಐ ಸೂಚನೆ ನೀಡಿರುವುದು ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಜೊತೆಗೆ, ಹಿಂದಿನ ನ್ಯಾಯಾಲಯದ ಆದೇಶಗಳಲ್ಲಿ ಅನುಮತಿಸಲಾದ ಗುರುತಿನ ದಾಖಲೆಗಳನ್ನು ಇಸಿಐ ಸ್ವೀಕರಿಸುತ್ತಿಲ್ಲ, ಎಸ್‌ಡಿಒ ನೀಡುವ ವಾಸಸ್ಥಳ ಪ್ರಮಾಣಪತ್ರವನ್ನು ಅಂಗೀಕರಿಸುತ್ತಿಲ್ಲ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೇ ಸಮನ್ಸ್ ನೀಡಿದ ಪರಿಣಾಮ ಅವರೂ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಆದರೆ ನ್ಯಾಯಾಂಗ ಅಧಿಕಾರಿಗಳ ಸ್ವತಂತ್ರತೆಯ ಬಗ್ಗೆ ಅನುಮಾನಪಡುವ ಅಗತ್ಯವಿಲ್ಲ ಎಂದು ಪೀಠ ಹೇಳಿತು. ಭಾರತೀಯ ಚುನಾವಣಾ ಆಯೋಗ ನೀಡಿರುವ ಸೂಚನೆಗಳು ನ್ಯಾಯಾಲಯದ ಆದೇಶ ಮೀರುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಎಸ್‌ಐಆರ್ ಪ್ರಕ್ರಿಯೆ ಸುಗಮವಾಗಿ ನಡೆಯಲು ರಾಜ್ಯದ ಬಹುತೇಕ ಎಲ್ಲಾ ನ್ಯಾಯಾಂಗ ಅಧಿಕಾರಿಗಳನ್ನು ತೊಡಗಿಸಿಕೊಳ್ಳಲಾಗಿದೆ; ಸಣ್ಣಸಣ್ಣ ಕಾರಣಗಳನ್ನು ಹೇಳಿ ಪ್ರಕ್ರಿಯೆಯನ್ನು ವಿಳಂಬಗೊಳಿಸಬಾರದು ಎಂದು ನ್ಯಾಯಾಲಯ ತಿಳಿಸಿತು. ನ್ಯಾಯಾಂಗ ಅಧಿಕಾರಿಗಳಿಗೆ ಅವರ ಸಾಮಾನ್ಯ ಕರ್ತವ್ಯಗಳಿಗೆ ಸಂಬಂಧಿಸದ ಜವಾಬ್ದಾರಿಯನ್ನು ನೀಡಿರುವುದರಿಂದ, ಸಮನ್ವಯಕ್ಕಾಗಿ ಇಸಿಐ ತರಬೇತಿ ನೀಡುವುದು ಅಸಂಗತವಲ್ಲ ಎಂದು ಕೂಡ ಪೀಠ ಅಭಿಪ್ರಾಯಪಟ್ಟಿತು.
“ಎಸ್‌ಐಆರ್ ತಡೆಯಲು ಸಣ್ಣಪುಟ್ಟ ನೆವ ಹೇಳಬೇಡಿ. ಪ್ರಕ್ರಿಯೆ ಮುಗಿಯಬೇಕು. ನ್ಯಾಯಾಂಗ ಅಧಿಕಾರಿಗಳು ಕೆಲಸ ಮಾಡಲು ಬಿಡಿ. ಅವರು ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತಾರೆ” ಎಂದು ಪೀಠ ನುಡಿಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯಾವುದೇ ಹೆಚ್ಚುವರಿ ನಿರ್ದೇಶನಗಳನ್ನು ನೀಡದ ನ್ಯಾಯಾಲಯ, ಆತಂಕಗಳು ನಿಜವಾಗಿದ್ದರೆ ಅವನ್ನು ಪರಿಶೀಲಿಸಲಾಗುತ್ತದೆ ಎಂದು ತಿಳಿಸಿತು. ಇದೇ ವೇಳೆ ಪೂರಕ ಮತದಾರರ ಪಟ್ಟಿಗಳು ನವೀಕರಣವಾದಂತೆ ಅವುಗಳನ್ನು ಜಾಲತಾಣದಲ್ಲಿ ಪ್ರಕಟಿಸುವಂತೆ ಇಸಿಐಗೆ ಸೂಚಿಸಿತು.