ನ್ಯಾಯಾಲಯಗಳಲ್ಲಿ ಓತಪ್ರೋತವಾಗಿ ಎಐ ಬಳಕೆ: ಎಚ್ಚರದಿಂದ ಇದ್ದೇವೆ ಎಂದ ಸುಪ್ರೀಂ ಕೋರ್ಟ್‌

ನಾವು ಕೃತಕ ಬುದ್ಧಿಮತ್ತೆಯನ್ನು ಅತ್ಯಂತ ಎಚ್ಚರಿಕೆಯಿಂದ ಬಳಸುತ್ತೇವೆ. ಇದು ನಮ್ಮ ನ್ಯಾಯ ನಿರ್ಧರಣಾ ಅಧಿಕಾರವನ್ನು ಮೀರುವುದನ್ನು ನಾವು ಬಯಸುವುದಿಲ್ಲ ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.
ನ್ಯಾಯಾಲಯಗಳಲ್ಲಿ ಓತಪ್ರೋತವಾಗಿ ಎಐ ಬಳಕೆ: ಎಚ್ಚರದಿಂದ ಇದ್ದೇವೆ ಎಂದ ಸುಪ್ರೀಂ ಕೋರ್ಟ್‌
Published on

ಕೃತಕ ಬುದ್ಧಿಮತ್ತೆಯ (ಎಐ) ಬಳಕೆ ವಿಚಾರದಲ್ಲಿ ನ್ಯಾಯಮೂರ್ತಿಗಳು ಬಹಳ ಜಾಗರೂಕರಾಗಿದ್ದು ನಮ್ಮ ನ್ಯಾಯ ನಿರ್ಧರಣಾ ಅಧಿಕಾರವನ್ನು ತಂತ್ರಜ್ಞಾನವು ಮೀರುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಭರವಸೆ ನೀಡಿದೆ [ಕಾರ್ತಿಕೇಯ ರಾವಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ] .

ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮಷೀನ್‌ ಲರ್ನಿಂಗ್‌ನ ಅನಿಯಂತ್ರಿತ ಬಳಕೆ ತಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಸೂರ್ಯ ಕಾಂತ್‌ ಮತ್ತು ನ್ಯಾ. ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ “ನ್ಯಾಯಾಲಯಗಳು ಕೃತಕ ಬುದ್ಧಿಮತ್ತೆಯನ್ನು ಅತ್ಯಂತ ಎಚ್ಚರಿಕೆಯಿಂದ ಬಳಸುತ್ತಿವೆ. ಇದು ನಮ್ಮ ನ್ಯಾಯ ನಿರ್ಧರಣ ಅಧಿಕಾರವನ್ನು ಮೀರುವುದನ್ನು ನಾವು ಬಯಸುವುದಿಲ್ಲ. ನಿಮ್ಮಲ್ಲಿ ಉತ್ತಮ ಸಲಹೆ ಇದ್ದರೆ ಅವನ್ನು ನ್ಯಾಯಾಲಯದ ಆಡಳಿತ ವಿಭಾಗಕ್ಕೆ ನೀಡಬಹುದು” ಎಂದಿತು.

Also Read
ಕೃತಕ ಬುದ್ಧಿಮತ್ತೆ ಬಳಸಿ ತೀರ್ಪು ನೀಡುವಂತಿಲ್ಲ: ದೇಶದಲ್ಲಿಯೇ ಮೊದಲ ಮಾರ್ಗಸೂಚಿ ಪ್ರಕಟಿಸಿದ ಕೇರಳ ಹೈಕೋರ್ಟ್

ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲ ಸುಭಾಷ್ ಚಂದ್ರನ್ ಅವರು, ಕೆಲವು ನ್ಯಾಯಾಲಯಗಳು ಅಸ್ತಿತ್ವದಲ್ಲೇ ಇಲ್ಲದ ತೀರ್ಪುಗಳನ್ನು ಆಧರಿಸಿ ಆದೇಶ ಹೊರಡಿಸುತ್ತಿವೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿ ಕೆಳ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

Also Read
ತೀರ್ಪುಗಳನ್ನು ಬರೆಯಲು ಕೃತಕ ಬುದ್ಧಿಮತ್ತೆ ಬಳಕೆ ಮಾಡುವುದು ಅಪಾಯಕಾರಿ: ನ್ಯಾ. ನಾಗಪ್ರಸನ್ನ

ಇಂತಹ ಘಟನೆಗಳ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರಿಶೀಲಿಸಿ ತೀರ್ಪು ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಒಪ್ಪಿತಾದರೂ ಈ ವಿಚಾರದಲ್ಲಿ ನ್ಯಾಯಾಂಗದ ಕಡೆಯಿಂದ ನಿರ್ದೇಶನ ನೀಡಲು ಬಯಸುವುದಿಲ್ಲ. ಕಾಲ ಕ್ರಮೇಣ ಎಐ ಹೇಗೆ ಬಳಸಬೇಕು ಎನ್ನುವುದನ್ನು ವಕೀಲ ವರ್ಗ ನ್ಯಾಯಾಲಯಗಳು ಕಲಿಯುತ್ತವೆ ಎಂದಿತು.

ಕೆಲವು ನ್ಯಾಯಾಲಯಗಳ ಆಡಳಿತಾತ್ಮಕ ವಿಭಾಗ ಇಂತಹ ಸಮಸ್ಯೆ ಪರಿಹರಿಸಲು ಪ್ರಾರಂಭಿಸಿವೆ ಎಂದು ವಕೀಲ ಚಂದ್ರನ್ ಹೇಳಿದರು. ಆಗ ನ್ಯಾಯಾಲಯಗಳ ಆಡಳಿತಾಂಗವೇ ಈ ಸಮಸ್ಯೆಗಳಿಗೆ ಉತ್ತರಿಸುತ್ತದೆ ತಾನು ನಿರ್ದೇಶನ ನೀಡುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ಕಡೆಗೆ ಅರ್ಜಿದಾರರು ಪ್ರತಿಕೂಲ ಆದೇಶ ದೊರೆಯದಿದ್ದರೆ ತಾನು ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು. ನ್ಯಾಯಾಲಯ ಮನವಿ ಹಿಂಪಡೆಯಲು ಅನುಮತಿ ನೀಡಿತು.

Kannada Bar & Bench
kannada.barandbench.com