“ಜನ ಬೀದಿಯಲ್ಲಿ ಹಲವು ವಿಚಾರಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಸ್ಥಾಪಿತ ಕಾನೂನು ಮತ್ತು ಸಂವಿಧಾನದ ಅನ್ವಯ ನಡೆಯಬೇಕೆ ವಿನಾ ಸಾರ್ವಜನಿಕರ ಪ್ರತಿಭಟನೆಯ ಪ್ರಕಾರವಲ್ಲ. ಜನರು ಬೀದಿಯಲ್ಲಿ ಹಲವು ವಿಚಾರಗಳನ್ನು ಹೇಳುತ್ತಾರೆ” ಎಂದು ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ನಟ ಗಣೇಶ್ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಕೃಷ್ಣ ಎಂ. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಈ ಸಂದರ್ಭದಲ್ಲಿ ಸರ್ಕಾರದ ವಕೀಲರು “ನಟ ಗಣೇಶ್ ಅವರು ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ಬರುವ ಕುಂದುಕರೆ ವ್ಯಾಪ್ತಿಯ ಜಕ್ಕಳಿ ಗ್ರಾಮದಲ್ಲಿನ ತಮ್ಮ 1.24 ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಿರ್ಬಂಧಿಸಲಾಗಿದೆ” ಎಂದಿದ್ದಕ್ಕೆ ನ್ಯಾಯಾಲಯವು ಮೇಲಿನಂತೆ ಹೇಳಿತು.
“ಜನರು ಹಲವು ವಿಚಾರಗಳಿಗೆ ಆಕ್ಷೇಪಿಸುತ್ತಾರೆ. ಅದನ್ನು ಇಟ್ಟುಕೊಂಡು ನಾವು ಮಾಡಲು ಬರುವುದಿಲ್ಲ. ಕಾನೂನಿನ ಅನ್ವಯ ನಾವು ನಡೆಯಬೇಕು. ಸಂವಿಧಾನದ ಅನ್ವಯ ನಡೆಯಬೇಕು. ಜನರ ಪ್ರತಿಭಟನೆಯ ಅನ್ವಯವಲ್ಲ. ಜನರು ಬೀದಿಯಲ್ಲಿ ಹಲವು ವಿಚಾರಗಳು ಹೇಳುತ್ತಾರೆ” ಎಂದು ಪೀಠ ಗರಂ ಆಯಿತು.
ಇದಕ್ಕೂ ಮುನ್ನ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಶ್ರೀಧರ್ ಪ್ರಭು ಅವರು “ನ್ಯಾಯಾಲಯದ ಹಿಂದಿನ ಆದೇಶದಂತೆ ಅಡ್ವೊಕೇಟ್ ಜನರಲ್ ಅವರ ಮೂಲಕ ಸಂಬಂಧಿತ ಪ್ರಾಧಿಕಾರಕ್ಕೆ ಮನವಿ ಹಾಗೂ ಸುಪ್ರೀಂ ಕೋರ್ಟ್ ಆದೇಶ ಸಲ್ಲಿಸಲಾಗಿದೆ. ಇದರಲ್ಲಿನ ಕಾನೂನಿನ ವಿಚಾರವನ್ನು ಎಜಿ ಪರಿಶೀಲಿಸಬೇಕು” ಎಂದರು.
ಅದಕ್ಕೆ ಪೀಠವು “ನಿಮಗೆ ಕಟ್ಟಡ ನಿರ್ಮಾಣ ಮಾಡಲು ಅನುಮತಿಸಲಾಗಿದೆ. ನೀವು ಏನು ಮಾಡಬೇಕೋ ಅದನ್ನು ಮಾಡಿ. ಸುಪ್ರೀಂ ಕೋರ್ಟೇ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಎಜಿ ಅವರು ಸುಪ್ರೀಂ ಕೋರ್ಟ್ ಆದೇಶದಲ್ಲಿ ಏನಿದೆ ಎಂಬುದನ್ನು ಸಂಬಂಧಿತ ಪ್ರಾಧಿಕಾರಕ್ಕೆ ತಿಳಿಸಬೇಕು” ಎಂದಿತು.
ಆಗ ಸರ್ಕಾರದ ಪರ ವಕೀಲರು “ಅರ್ಜಿದಾರರು ಎಜಿಗೆ ನೀಡಿರುವ ಮನವಿಯನ್ನು ಸಂಬಂಧಿತ ಪ್ರಾಧಿಕಾರ ಪ್ರತಿನಿಧಿಸುವ ಪ್ರಾದೇಶಿಕ ಆಯುಕ್ತರಿಗೆ ಪರಿಗಣಿಸಲು ರವಾನಿಸಲಾಗಿದೆ” ಎಂದರು.
ಇದಕ್ಕೆ ಪೀಠವು “ಸುಪ್ರೀಂ ಕೋರ್ಟ್ ಆದೇಶ ತುಂಬಾ ಕ್ಲಿಷ್ಟವಾಗಿದ್ದು, ಅದು ನಮಗೇ ತಿಳಿಯುವುದಿಲ್ಲ. ಅದನ್ನು ಅಧಿಕಾರಿಗಳಿಗೆ ಕಳುಹಿಸಿದರೆ ಅವರಿಗೆ ಹೇಗೆ ತಿಳಿಯುತ್ತದೆ. ಕಾನೂನಿನಲ್ಲಿ ಅವಕಾಶವಿದ್ದರೂ ಜನರು ಆಕ್ಷೇಪಿಸುತ್ತಿದ್ದಾರೆ ಎಂದು ನೀವು ಕಟ್ಟಡ ನಿರ್ಮಾಣ ತಡೆಯಲಾಗದು” ಎಂದು ಪೀಠ ಸರ್ಕಾರವನ್ನು ಕುರಿತು ಮೌಖಿಕವಾಗಿ ಹೇಳಿತು.
ಅಂತಿಮವಾಗಿ ನ್ಯಾಯಾಲಯವು ಎಜಿ ಅವರು ತೀರ್ಪುಗಳನ್ನು ಪರಿಶೀಲಿಸಿ ಅದನ್ನು ಸಂಬಂಧಿತ ಅಧಿಕಾರಿಗಳಿಗೆ ಹೇಳಬೇಕು ಎಂದು ಆದೇಶದಲ್ಲಿ ದಾಖಲಿಸಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.