ನ್ಯಾಯಮೂರ್ತಿಗಳ ಅಸಮರ್ಥತೆಯಿಂದ ಪ್ರಕರಣಗಳು ಬಾಕಿ ಉಳಿಯುತ್ತಿವೆ: ನ್ಯಾ. ಕೃಷ್ಣ ದೀಕ್ಷಿತ್‌

“ವಿಚಾರಣೆಗೆ ಬರುವ ಅರ್ಜಿಗಳನ್ನು ನಾವು ಓದಿಕೊಂಡು ಬಂದರೆ ಈ ಸಮಸ್ಯೆಯೇ ಇರುವುದಿಲ್ಲ. ಬ್ರಿಟಿಷ್‌ ನ್ಯಾಯಾಲಯದ ಕಲಾಪವನ್ನು ನಾನು ನೋಡುತ್ತಿರುತ್ತೇನೆ. ಅಲ್ಲಿ ನಿರ್ದಿಷ್ಟವಾಗಿ ಪ್ರಕರಣ ನಡೆಸಲಾಗುತ್ತದೆ” ಎಂದು ವಿವರಿಸಿದ ನ್ಯಾ. ದೀಕ್ಷಿತ್‌.
Justice Krishna S Dixit and Karnataka HC
Justice Krishna S Dixit and Karnataka HC

“ಇವೆಲ್ಲಾ ಮೂರು ನಿಮಿಷದ ಪ್ರಕರಣಗಳು. ನಾವು ಸಾಕಷ್ಟು ಸಮಯ ತೆಗೆದುಕೊಂಡು, ಪ್ರಕರಣಗಳು ಬಾಕಿ ಉಳಿಯಲು ಕಾರಣವಾಗಿದ್ದೇವೆ. ನ್ಯಾಯಮೂರ್ತಿಗಳ ಅಸಮರ್ಥತೆಯಿಂದ ಹೀಗಾಗಿದೆ” ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು ಗುರುವಾರ ಮೌಖಿಕವಾಗಿ ವಿಮರ್ಶೆ ಮಾಡಿದ ಘಟನೆ ನಡೆಯಿತು.

ಸರ್ವೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅರ್ಜಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ವಾದಿಸುತ್ತಿದ್ದ ವಕೀಲರನ್ನು ಅರ್ಧಕ್ಕೆ ಮೊಟಕುಗೊಳಿಸಿದ ನ್ಯಾಯಮೂರ್ತಿಗಳು ಮೇಲಿನಂತೆ ಹೇಳಿದರು.

“ವಿಚಾರಣೆಗೆ ಬರುವ ಅರ್ಜಿಗಳನ್ನು ನಾವು ಓದಿಕೊಂಡು ಬಂದರೆ ಈ ಸಮಸ್ಯೆಯೇ ಇರುವುದಿಲ್ಲ. ಬ್ರಿಟಿಷ್‌ ನ್ಯಾಯಾಲಯದ ಕಲಾಪವನ್ನು ನಾನು ನೋಡುತ್ತಿರುತ್ತೇನೆ. ಅಲ್ಲಿ ನಿರ್ದಿಷ್ಟವಾಗಿ ಪ್ರಕರಣ ನಡೆಸಲಾಗುತ್ತದೆ” ಎಂದು ವಿವರಿಸಿದರು.

“ಹಸುವನ್ನು ಹೊಳಗೆ ಕರೆದುಕೊಂಡು ಹೋಗಿದ್ದೆ. ಹೊಳೆ ತುಂಬಿತ್ತು. ನೀರು ಈ ಬಣ್ಣದಲ್ಲಿತ್ತು. ಇದೆಲ್ಲವನ್ನೂ ಇಟ್ಟುಕೊಂಡು ಏನು ಮಾಡೋಣ? ಎಲ್‌ಐಸಿ ಆಫ್‌ ಇಂಡಿಯಾ ವರ್ಸಸ್‌ ಎಸ್ಕಾರ್ಟ್ಸ್‌ ಲಿಮಿಟೆಡ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಅವರು “ವಾದ ಸರಣಿಗೆ ನ್ಯಾಯಾಲಯವು ಕಾಲ ನಿಗದಿಪಡಿಸಲು ಇದು ಸುಸಂದರ್ಭ ಎಂದು ಹೇಳಿದ್ದಾರೆ” ಎಂದು ನ್ಯಾ. ದೀಕ್ಷಿತ್‌ ನೆನಪಿಸಿದರು.

ವಕೀಲರನ್ನು ಕುರಿತು “ನಿಮ್ಮದೇ ಆದ ರೀತಿಯಲ್ಲಿ ನಿಮ್ಮ ಮನವಿಗಳನ್ನು ಓದಿಕೊಳ್ಳಬೇಕು. ಅಡ್ಮಿಷನ್‌ಗೆ ಅರ್ಧ ಗಂಟೆ ತೆಗೆದುಕೊಂಡರೆ ಏನು ಮಾಡಬೇಕು? ಇಲ್ಲಿ ಕುಳಿತ ಉಳಿದವರ ಗತಿ ಏನಾಗಬೇಕು. ಇಲ್ಲಿ ಎಲ್ಲರಿಗೂ ತುರ್ತು ಇರುತ್ತದೆ. ಯಾವುದೇ ನ್ಯಾಯಾಲಯ ಇರಲಿ, ಪ್ರಕರಣದ ಕುರಿತು ಓದಿಕೊಂಡು ಅದರ ಕುರಿತು ಟಿಪ್ಪಣಿ ಮಾಡಿಕೊಳ್ಳಬೇಕು. ವಾಸ್ತವಿಕ ವಿಚಾರಗಳ ಹೀಗೆ ಇವೆ. ಲೀಗಲ್‌ ಮ್ಯಾಟ್ರಿಕ್ಸ್‌ ಸಾಧ್ಯತೆ ಹೀಗಿದೆ. ತೀರ್ಪುಗಳು ಹೀಗಿವೆ. ಸೆಕ್ಷನ್‌ಗಳು ಈ ರೀತಿ ಇವೆ ಎಂದು ಹೇಳಬೇಕು. ಈ ರೀತಿ ಚಿಕ್ಕ ವಿಧಾನದಲ್ಲೂ ನಮಗೆ ಸಹಾಯ ಮಾಡುವುದಿಲ್ಲ” ಎಂದು ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್‌ನಲ್ಲಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ ಸದ್ಯ ಭಾರತದಲ್ಲಿ 4,21,16,374 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಕರ್ನಾಟಕ ಹೈಕೋರ್ಟ್‌ನಲ್ಲಿ 59,56,407 ಪ್ರಕರಣಗಳು ಬಾಕಿ ಉಳಿದಿವೆ.

Related Stories

No stories found.
Kannada Bar & Bench
kannada.barandbench.com