

ನಟ ಪರೇಶ್ ರಾವಲ್ ಅಭಿನಯದ 'ದ ತಾಜ್ ಸ್ಟೋರಿ' ಚಿತ್ರದ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಆಲಿಸಲು ಗುರುವಾರ ನಿರಾಕರಿಸಿದ್ದು ಚಿತ್ರ ಶುಕ್ರವಾರ ಬಿಡುಗಡೆಯಾಗಲಿದೆ.
ನ್ಯಾಯಾಲಯ ಸೂಪರ್ ಸೆನ್ಸಾರ್ ಮಂಡಳಿ ಅಲ್ಲ ಮತ್ತು ಬೇರೆ ಬೇರೆ ಜನ ಇತಿಹಾಸದ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರಬಹುದು ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.
"ನಾವು ಸೂಪರ್ ಸೆನ್ಸಾರ್ ಮಂಡಳಿಯಲ್ಲ... ಇದು ಇತಿಹಾಸವಲ್ಲ ಎಂದು ಹೇಳುವ ಹಕ್ಕು ನಿರಾಕರಣೆ ನಿಮಗೆ ಬೇಕಿದೆ. (ಆದರೆ) ಯಾವುದೇ ಕಾಲ್ಪನಿಕ ಕೃತಿಯಲ್ಲಿ, ಲೇಖಕರು ಇದು ಇತಿಹಾಸವಲ್ಲ ಎಂದು ಹಕ್ಕು ನಿರಾಕರಣೆ ಮಾಡುತ್ತಾರೆಯೇ ಹೇಳಿ? ಚರಿತ್ರೆಯ ಬಗ್ಗೆ ಹೇಳುವುದಾದರೂ ಇಬ್ಬರು ಇತಿಹಾಸಕಾರರು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರಬಹುದು, ಆದರೆ ಯಾವ ಇತಿಹಾಸಕಾರರ ದೃಷ್ಟಿಕೋನ ಸರಿಯಾಗಿದೆ ಎಂಬುದು ನ್ಯಾಯಾಲಯ ನಿರ್ಧರಿಸುವ ವಿಚಾರವೇ? ಇದನ್ನು ನಿರ್ಧರಿಸಲು ನಮಗೆ ಲಭ್ಯವಿರುವ ಮಾನದಂಡಗಳು ಯಾವುವು?" ಎಂದು ನ್ಯಾಯಾಲಯ ಪ್ರಶ್ನಿಸಿತು.
ಅರ್ಜಿದಾರರು ಮನವಿ ಸಲ್ಲಿಸುವ ಮೊದಲು ಸರಿಯಾದ ಸಂಶೋಧನೆ ಮಾಡಿಲ್ಲ ಎಂದ ಪೀಠ ನಟ ಪರೇಶ್ ರಾವಲ್ ಅವರನ್ನು ಅರ್ಜಿಯಲ್ಲಿ ಕಕ್ಷಿದಾರರನ್ನಾಗಿ ಮಾಡಬಾರದಿತ್ತು ಎಂದಿತು. ಕೆಲಕಾಲ ವಾದ ಆಲಿಸಿದ ಅದು ಅರ್ಜಿದಾರರು ಕೇಂದ್ರ ಸರ್ಕಾರಕ್ಕೆ ದೂರು ನೀಡಬಹುದು ಎಂದಿತು.
ಕೇಂದ್ರ ಸರ್ಕಾರದ ಪರ ಹಾಜರಾದ ಸ್ಥಾಯಿ ವಕೀಲ (ಸಿಜಿಎಸ್ಸಿ) ಆಶಿಶ್ ದೀಕ್ಷಿತ್ ಅರ್ಜಿದಾರರು ಸರ್ಕಾರಕ್ಕೆ ಪತ್ರ ಬರೆದಿಲ್ಲ ಎಂದರು.
ನ್ಯಾಯಾಲಯವು ಅಂತಿಮವಾಗಿ ಅರ್ಜಿದಾರರು ಮನವಿ ಹಿಂಪಡೆಯಲು ಮತ್ತು 1952ರ ಸಿನಿಮಾಟೋಗ್ರಾಫ್ ಕಾಯಿದೆಯ ಸೆಕ್ಷನ್ 6 ರ ಅಡಿಯಲ್ಲಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸಲು ಅವಕಾಶ ನೀಡಿತು.
ಕಕ್ಷಿದಾರರ ಪಟ್ಟಿಯಿಂದ ರಾವಲ್ ಅವರ ಹೆಸರನ್ನು ತೆಗೆದುಹಾಕುವಂತೆ ಅದು ಅರ್ಜಿದಾರರಿಗೆ ಸೂಚಿಸಿದೆ.ತಾಜ್ ಮಹಲ್‌ನ ಮೂಲಗಳ ಕುರಿತು ಚಿತ್ರದಲ್ಲಿ ತೋರಿಸಲಾದ ವಿಚಾರ ಕಟ್ಟುಕತೆ ಮತ್ತು ಪ್ರಚೋದನಾತ್ಮಕವಾಗಿದೆ ಎಂದು ಆರೋಪಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.